ಉಪ್ಪಿನಂಗಡಿ: ಲಾರಿಯೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಬಾಲಕ ಮೃತಪಟ್ಟಿದ್ದು, ರಿಕ್ಷಾ ಚಾಲಕ ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿರ್ತಡ್ಕ ನಿವಾಸಿ ದಿ| ಅಶ್ರಫ್ ಅವರ ಪುತ್ರ, ಹಿರ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಟಿ. ಮೊಹಮ್ಮದ್ ಅಲ್ತಾಫ್ (12) ಮೃತ ಬಾಲಕ.
ರಿಕ್ಷಾದಲ್ಲಿದ್ದ ಆತನ ತಾಯಿ ಖತೀಜಮ್ಮ (46) ಅಣ್ಣ ಆಶಿಕ್ ಅಲಿಯಾಸ್ ಟಿ. ಮೊಹಮ್ಮದ್ ಅಸ್ರಾರ್ (23) ಮತ್ತು ಆಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದಿಕ್ (34) ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳ ಪೈಕಿ ಖತಿಜಮ್ಮ ಹಾಗೂ ಆಶಿಕ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಮೃತ ಅಲ್ತಾಫ್ನ ತಾಯಿ ಖತೀಜಮ್ಮ ಮಂಗಳೂರು ಬೆಂಗರೆ ನಿವಾಸಿ ಆಗಿದ್ದು, ಅವರು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು.
ಉಪ್ಪಿನಂಗಡಿಯಲ್ಲಿ ಬಸ್‌ನಿಂದ ಇಳಿದು ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಇನ್ನೊಂದು ವಾಹನವನ್ನು ಹಿಂದಿಕ್ಕುವ ವೇಗದಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್, ಸಂಚಾರಿ ಸಬ್ ಇನ್‌ಸ್ಪೆಕ್ಟರ್ ರಾಮ ನಾಯ್ಕ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment