ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಸಮಾರಂಭವನ್ನು ಉದ್ಘಾಟಿಸಿದರು.
ಉಜಿರೆ: ನಮ್ಮ ಸ್ವಾಸ್ಥ್ಯ ರಕ್ಷಣೆಯೊಂದಿಗೆ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಹೇಳಿದರು.
ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ನಾಲ್ಕನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಒತ್ತಡ ಹಾಗೂ ಧಾವಂತದ ಆಧುನಿಕ ಜೀವನ ಶೈಲಿ, ಆಹಾರ ಸೇವನಾ ಕ್ರಮದಿಂದಾಗಿ ಮಾನವೀಯ ಮೌಲ್ಯಗಳು ಹಾಗೂ ಆತ್ಮೀಯ ಸಂಬಂಧ, ಪ್ರೀತಿ-ವಿಶ್ವಾಸವನ್ನು ನಾವು ಕಳೆದುಕೊಂಡಿದ್ದೇವೆ. ಶಿಕ್ಷಣದಿಂದ ಮಾತ್ರ ಕ್ರಾಂತಿಕಾರಿ ಪರಿವರ್ತನೆಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರಕ್ಕಿಂತಲೂ ಮಿಗಿಲಾಗಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿಕ್ಷಣ, ಆರೋಗ್ಯ, ಕೃಷಿ, ಕೆರೆಗಳಿಗೆ ಕಾಯಕಲ್ಪ, ಪ್ರಕೃತಿ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ನೀಡುತ್ತಿರುವ ಸೇವೆ ಮತ್ತು ಸಾಧನೆಯನ್ನು ಅವರು ಶ್ಲಾಘಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಗೋವಾದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿರುವ ಡಾ. ಈರೇ ಗೌಡ ಪಾಟೀಲ್ ಮಾತನಾಡಿ, ಉತ್ತಮ ಆಚಾರ-ವಿಚಾರ ಹಾಗೂ ಆಹಾರ – ವಿಹಾರ ವಿಧಾನದಿಂದ ಆರೋಗ್ಯಭಾಗ್ಯ ಹೊಂದಬಹುದು. ಸರಳ, ಸಾತ್ವಿಕ ಪೌಷ್ಠಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರಕೃತಿ ಚಿಕಿತ್ಸಾ ವಿಧಾನದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸುಧಾರಣೆ ಹಾಗೂ ಪರಿವರ್ತನೆ ಆಗಿದೆ. ಜೀವನಾನುಭವವೇ ಶ್ರೇಷ್ಠ ಶಿಕ್ಷಣವಾಗಿದೆ ಎಂದು ಹೇಳಿದ ಅವರು ಇಂದು ಉತ್ತಮ ಉದ್ಯೋಗ ಹಾಗೂ ವ್ಯವಹಾರದಲ್ಲಿ ಅಧಿಕ ಸಂಪಾದನೆಯಿಂದ ಮಾನವೀಯತೆ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸ ಕಡಿಮೆಯಾಗುತ್ತಿದೆ. ಅಹಂ ತ್ಯಜಿಸಿ ಎಲ್ಲರೂ ಸಾಮರಸ್ಯದಿಂದ ಶಾಂತಿ, ನೆಮ್ಮದಿಯ, ಸರಳ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಮಂಗಳೂರಿನ ಎ.ಜೆ. ಆಸ್ಪತ್ರೆಯ ಡಾ. ಪ್ರದೀಪ್ ಸೇನಾಪತಿ, ಎಸ್.ಡಿ.ಎಂ. ಆಸ್ಪತ್ರೆಯ ಆಡಳಿತಾಧಿಕಾರಿ ಎಂ. ಜನಾರ್ದನ್, ಶಾಂತಿವನದ ಆಡಳಿತಾಧಿಕಾರಿ ಜಗನ್ನಾಥ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡೀನ್ ಡಾ. ಶಿವಪ್ರಸಾದ ಶೆಟ್ಟಿ ಧನ್ಯವಾದವಿತ್ತರು. ಡಾ. ಜ್ಯೋಸ್ನಾ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق