ಚಿಕ್ಕಬಳ್ಳಾಪುರ : ಕೌಟುಂಬಿಕ ಕಲಹದ ಕಾರಣದಿಂದ ಗೃಹರಕ್ಷಕದಳ ಸಿಬ್ಬಂದಿ ತನ್ನ ಎರಡನೇ ಪತ್ನಿಯ ಕತ್ತು ಕೊಯ್ದ ಘಟನೆಯೊಂದು ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯಲ್ಲಿ ನಡೆದಿದೆ.
ಸುರೇಶ್ ಕೊಲೆ ಯತ್ನ ಆರೋಪಿಯಾಗಿದ್ದು, ಉಷಾ ಗಾಯಗೊಂಡವರಾಗಿದ್ದಾರೆ. ಜಿಲ್ಲೆಯ ಅಂದರ್ಹಳ್ಳಿ ಗ್ರಾಮದ ಸುರೇಶ್ ಚಿಕ್ಕಬಳ್ಳಾಪುರ ಗೃಹರಕ್ಷಕದಳ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಮೊದಲ ಪತ್ನಿ ಇದ್ದರೂ ಉಷಾ ಅವರನ್ನು ಎರಡನೇ ಪತ್ನಿಯಾಗಿ ಮದುವೆಯಾಗಿದ್ದರು.
ಇವರಿಗೆ ಮಕ್ಕಳು ಕೂಡ ಇದ್ದು, ಇತ್ತೀಚೆಗೆ ಇವರ ಮಧ್ಯೆ ಮನಸ್ತಾಪ ಉಂಟಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಲ್ಲದೇ ಉಷಾ ತಮ್ಮ ಲಾಯರ್ ಮೂಲಕ ಸುರೇಶ್ ಗೆ ನೋಟಿಸ್ ಕೂಡ ಕಳುಹಿಸಿದ್ದರು.
ಇದರಿಂದ ಕೋಪಗೊಂಡ ಸುರೇಶ್, ಉಷಾ ಅವರ ಮನೆಗೆ ಮಕ್ಕಳನ್ನು ನೋಡುವ ನೆಪದಲ್ಲಿ ಹೋಗಿ ಈ ವೇಳೆ ಮನೆಯಲ್ಲಿದ್ದ ಉಷಾ ಅವರ ಕತ್ತನ್ನು ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾನೆ.
ನಂತರ ಅಕ್ಕಪಕ್ಕದ ಮನೆಯವರು ಉಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಷಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق