ಈ ಹರೇಕಳ ಹಾಜಬ್ಬರವರು ನನಗೆ ಮೊದಲಿನಿಂದಲೇ ತುಂಬಾ ಪರಿಚಯ. ಬಹಳ ಸರಳ ಸಜ್ಜನಿಕೆಯ ಅವರ ಸ್ವಭಾವ ನನ್ನನ್ನು ಬಹಳಷ್ಟು ಆಕರ್ಷಿಸಿತ್ತು. ಈ ಹಿಂದೆ ಕಾಸರಗೋಡಿನ ಹಲವೆಡೆ ವೇದಿಕೆಗಳಲ್ಲಿ ಕರೆಸಿ ಅವರಿಗೆ ಸನ್ಮಾನವನ್ನು ಕೂಡ ಮಾಡಿಸಿದ್ದೆ. ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಲಭಿಸಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಬೇಕು ಎಂಬ ಉದ್ದೇಶದಿಂದ ಅವರ ಮನೆಗೆ ನಾನು ತೆರಳಿದ್ದೆ. ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅವರು ರಾತ್ರಿ 9 ಗಂಟೆ ಹೊತ್ತಿಗೆ ತನ್ನ ಮನೆಗೆ ಆಗಮಿಸಿದರು. ಮನೆಗೆ ತಲುಪಿದ ಕೂಡಲೇ ಬಹಳಷ್ಟು ಸಜ್ಜನಿಕೆಯಿಂದ, ತುಂಬಾ ಪ್ರೀತಿಯಿಂದ ಅವರು ನನ್ನನ್ನು ಬರಮಾಡಿಕೊಂಡರು. ಅವರ ಮನೆಗೆ ನಾನು ಭೇಟಿ ಕೊಟ್ಟಿದ್ದು ಅವರಿಗೆ ಖುಷಿಯೋ ಖುಷಿ. ಅವರಿಗೆ ಅಭಿನಂದನೆ ಸಲ್ಲಿಸಲು ಹೋದ ನನ್ನನ್ನು ಒಂದು ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ನನಗೆ ಶಾಲು ಹೊದಿಸಿ ಹಾರ ಹಾಕಿ ಪೇಟ ತೊಡಿಸಿ ಸನ್ಮಾನಿಸಿಯೇಬಿಟ್ಟರು.
ನನಗಂತೂ ತುಂಬಾ ಮುಜುಗರವಾಯಿತು. ಯಾವ ಕಾರಣಕ್ಕೆ ನನಗೆ ಅವರು ಸನ್ಮಾನ ಮಾಡಿದರೆಂಬುದು ನನಗಂತೂ ಗೊತ್ತಿಲ್ಲ. ಆದ್ರೆ ನಾನು ಅವರ ಮನೆಗೆ ಹೋದ ಕೂಡಲೇ ಅವರಿಗೆ ತುಂಬಾ ಖುಷಿಯಾಯ್ತು. ಹರೇಕಳ ಹಾಜಬ್ಬರವರ ಆ ಸರಳತೆ ನಿಜಕ್ಕೂ ಅದ್ಭುತವಾದುದು. ಅಷ್ಟೊಂದು ಸಾಧನೆಯನ್ನು ಮಾಡಿ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಂತಹ ವ್ಯಕ್ತಿ ಎಷ್ಟೊಂದು ಸೌಮ್ಯ, ಸರಳತೆ, ಸಜ್ಜನಿಕೆಯಿಂದ ಇವತ್ತು ಜೀವಿಸುತ್ತಿದ್ದಾರೆ ಎಂಬುದಕ್ಕೆ ಅವರ ದಿರಿಸು ನಮಗೆ ಸಾಕ್ಷಿ. ನಾನು ಜನಪ್ರತಿನಿಧಿಯಾಗಿದ್ದಂತಹ ಸಂದರ್ಭದಲ್ಲಿ ಅದೆಷ್ಟೋ ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಆದರೆ ಹಾಜಬ್ಬನವರ ಈ ಒಂದು ಸನ್ಮಾನ ಕುತೂಹಲ ಹಾಗೂ ಅತ್ಯಂತ ಸಂತೋಷವನ್ನು ನೀಡಿತು. ಇದೊಂದು ನನ್ನ ಪಾಲಿನ ಅವಿಸ್ಮರಣೀಯವಾದ ಘಳಿಗೆ.
- ಹರ್ಷಾದ್ ವರ್ಕಾಡಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق