ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ
ಪುತ್ತೂರು: ಹಿಂದಿನ ಗುರುಕುಲ ಪದ್ಧತಿಯು ಶಿಕ್ಷಣ ಕೇಂದ್ರಿತವಾಗಿತ್ತು. ತದನಂತರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾಗಿ ವಿದ್ಯಾರ್ಥಿ ಕೇಂದ್ರವಾದ ಶಿಕ್ಷಣ ಚಾಲ್ತಿಗೆ ಬಂತು. ಆದರೆ ಇಂದಿನ ಶಿಕ್ಷಣವು ಪೋಷಕ ಕೇಂದ್ರಿತವಾಗಿದೆ. ಪೋಷಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಿ, ಮಕ್ಕಳ ಕಲಿಕಾ ಆಯ್ಕೆಯ ಹಾದಿಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದರೊಂದಿಗೆ ಇಂದಿನ ಶಿಕ್ಷಣವು ಯಂತ್ರ ಆಧಾರಿತ ಶಿಕ್ಷಣವಾಗಿ ಬದಲಾಗಿ ಸಂವೇದನೆ ಹಾಗೂ ಭಾವುಕತೆ ಇರದ ಯಂತ್ರ ಮಾನವರಾಗಿ ವಿದ್ಯಾರ್ಥಿಗಳು ಬದಲಾಗುತ್ತಿರುವುದು ವಿಷಾದಕರ ಎಂದು ಮಹಿಳಾ ಪದವಿ ಕಾಲೇಜು ಪುತ್ತೂರು ಇಲ್ಲಿನ ಪ್ರೊಫೆಸರ್ ಆಗಿರುವ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಹಿರಿಯರ ಬೆವರಿಗೆ ಪರಿಶ್ರಮಕ್ಕೆ ನಾವು ಬೆಲೆಕೊಟ್ಟು ಪ್ರಕೃತಿ ಆರಾಧಕರಾಗಬೇಕಾಗಿದೆ. ಪುಸ್ತಕದ ಓದಿನ ಜೊತೆ ಜೊತೆಗೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಗಮನಿಸುತ್ತಾ ಹಕ್ಕಿಗಳ ಸುಮಧುರ ಸಂಗೀತವನ್ನು ಕೇಳುತ್ತಾ, ಹರಿಯುವ ನೀರಿನ ಝರಿಯ ನಿನಾದವನ್ನು ಆಲಿಸುತ್ತಾ ಬೆಳೆಯಬೇಕು. ಹಿಂದಿನ ಗುರುಕುಲವು ಕಾಡಿನ ಒಳಗಡೆ ಇರುತ್ತಿತ್ತು. ಹಾಗಾಗಿ ನಮ್ಮ ಮೂಲಶಿಕ್ಷಣ ಆರಂಭವಾದದ್ದೇ ಕಾಡಿನಲ್ಲಿ. ಕಾಡುವ ಕಾಡಿನಿಂದ ಕಾಡಿಸಿಕೊಂಡು ಮನುಷ್ಯರಾಗಿ ಹೊರಬರುವುದೇ ಹಿಂದಿನ ವಿದ್ಯಾಭ್ಯಾಸದ ಗುರಿಯಾಗಿತ್ತು. ನಮ್ಮ ಪಠ್ಯದ ಜೊತೆ ಪ್ರಕೃತಿಯನ್ನು ಬೆರೆಸಿಕೊಂಡಾಗ ನಾವು ಮನುಷ್ಯರಾಗುತ್ತೇವೆ ಎಂದರು.
ಯಾವ ವಿದ್ಯೆ ಮನುಷ್ಯ– ಮನುಷ್ಯರ ಸಂಬಂಧವನ್ನು ಜೋಡಿಸುವುದಿಲ್ಲವೋ ಅಂತಹ ವಿದ್ಯೆ ನಮಗೆ ಬೇಡ. ನಮ್ಮ ವಿದ್ಯೆಯಿಂದ ದೇಶಪ್ರೇಮ, ರಾಷ್ಟ್ರೀಯತೆ ನಮ್ಮ ಅಂತರಾಳದಲ್ಲಿ ಜಿನುಗಬೇಕು. ನಮ್ಮ ನೆಲ ಜಲವನ್ನು ಪ್ರೀತಿಸುವ ಸ್ವಚ್ಛಂದ ಮನಸ್ಸು ನಮ್ಮಲ್ಲಿರಬೇಕು. ಪ್ರಕೃತಿದತ್ತವಾಗಿರುವ ನೀರನ್ನು ವಿಷಮಯವಾಗಿಸಿ ಬಾಟಲಿಯ ನೀರಿಗೆ ಮಾರುಹೋಗುವ, ನಮ್ಮ ಅನ್ನವನ್ನು ನಾವೇ ವಿಷ ಮಾಡಿ ಪರಿಶುದ್ಧ ಗೋಧಿಹುಡಿಯೆಂದು ಲೇಬಲ್ ಇರುವ ಪ್ಯಾಕೆಟ್ ಪದಾರ್ಥಗಳಿಗೆ ಮೊರೆಹೋಗುವ ಶಿಕ್ಷಣದ ಬದಲು ಈ ಸುಂದರ ನಿಸರ್ಗವನ್ನು ಸುಸ್ಥಿತಿಯಲ್ಲಿಡುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬದ್ಧತೆ ಹೊಂದಿರುವ ಶಿಕ್ಷಣ ನಮಗಿಂದು ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಭಾರತವು ಪ್ರಪಂಚದಲ್ಲೇ ಬಲಿಷ್ಟವಾದ ಪ್ರಜಾಪ್ರಭುತ್ವ ದೇಶ. ದೇಶದ ಪ್ರಧಾನಿಯವರು ಚಿರಯುವಕನಂತೆ ಕಾರ್ಯನಿರ್ವಹಿಸುತ್ತಿರುವುದು ವಿದ್ಯಾರ್ಥಿ ನಾಯಕರುಗಳಿಗೆ ಸ್ಪೂರ್ತಿಯಾಗಬೇಕು. ಅಂತಹ ಆದರ್ಶಗಳನ್ನು ಇಟ್ಟುಕೊಂಡು ವಿದ್ಯಾರ್ಥಿ ನಾಯಕರುಗಳು ಮುಂದುವರಿಯಬೇಕು ಎಒದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ನಾಯಕರುಗಳಾಗಿ ಆಯ್ಕೆಯಾಗುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಮ್ಮ ದೇಶದ ನಾಯಕರುಗಳಾಗಿ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತಾಗಬೇಕು. ದೇಶಪ್ರೇಮಿ ನಾಯಕರುಗಳಿಂದ ದೇಶ ಅಭಿವೃದ್ಧಿ ಸಾಧಿಸುವುದಕ್ಕೆ ಸಾಧ್ಯ. ಯುವ ಸಮೂಹ ತಮ್ಮ ಆಯುಷ್ಯವನ್ನು ದೇಶ ಹಾಗೂ ಸಮಾಜದ ಒಳಿತಿಗಾಗಿಯೇ ಮೀಸಲಿಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರೀತಲ್ ದಯಾನಂದ್, ವಿದ್ಯಾರ್ಥಿ ಆರ್ಯ ಹಿಮಾಲಯ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಶಂಕರನಾರಾಯಣ ಭಟ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೋಹಿತ್ ಕೆ ಎಸ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಸುಧಾ ಕೋಟೆ ಪ್ರಾರ್ಥಿಸಿದರು. ಕಾಲೇಜಿನ ಆಂಗ್ಲ ಭಾμÁ ಉಪನ್ಯಾಸಕಿ ಸುಚಿತಾ ಪ್ರಭು ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ತಿಲೋಶ್ ಕುಮಾರ್ ಸಿ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ರಸಾಯನಶಾಸ್ತ್ರ ಉಪನ್ಯಾಸಕ ನಮೃತ್ ಜಿ ಉಚ್ಚಿಲ್ ಅತಿಥಿಗಳನ್ನು ಪರಿಚಯಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق