ಇದೇನಪ್ಪ "ಸಕಾಲ" ಅಂತ ಕೇಳಬೇಡಿ. ಕರ್ನಾಟಕ ಸರಕಾರ 2011ರಲ್ಲಿ ಆಡಳಿತ ಸುಧಾರಣೆಗಾಗಿ ತಂದ ಒಂದು ದಿಟ್ಟ ಕಾಯಿದೆ. ಮಧ್ಯಪ್ರದೇಶ ಸರ್ಕಾರ ದೇಶದಲ್ಲಿ ಮೊದಲಾಗಿ ಸಕಾಲ ಜಾರಿಗೊಳಿಸಿದ ರಾಜ್ಯ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅನಂತರ ಕರ್ನಾಟಕದಲ್ಲಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಕಾಲ 2011ರ ಕಾಯಿದೆ ಜಾರಿಗೆ ತಂದರು.
ಈ ಕಾಯಿದೆ ತಂದ ಉದ್ದೇಶ ಬಹಳ ಚೆನ್ನಾಗಿಯೇ ಇತ್ತು. ಅದರ ಘೇೂಷಣಾ ವಾಕ್ಯ ಕೇಳಿದರೆ ಇಂದು ನೀವು ಸ್ವರ್ಗ ಮೂರೇ ಗೇಣು ಅನ್ನುವುದು ಗ್ಯಾರಂಟಿ. ಸಕಾಲದ ಮಾತು ಕೇಳಿ "ಇಂದು ನಾಳೆ ಇನ್ನಿಲ್ಲ ಹೇಳಿದ ದಿನ ತಪ್ಪೊಲ್ಲ" ಈ ವೇದ ವಾಕ್ಯ ಕೇಳಿ ರಾಜ್ಯದ ಜನತೆ ನಮ್ಮ ಸದಾನಂದರ ಆನಂದಕ್ಕೆ ಇನ್ನಷ್ಟು ಮುದ ನೀಡಿದ್ದರು. ಸರಕಾರಿ ಕೆಲಸ ಜನರ ಮನೆ ಬಾಗಲಿಗೆ ಅನ್ನುವ ತರದಲ್ಲಿ ಬಿಂಬಿಸಲಾಯಿತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಮಾಹಿತಿ ಹಕ್ಕಿಗೆ ಪೂರಕವಾಗಿ ನಿಲ್ಲಬಲ್ಲ ಬ್ರಹ್ಮಾಸ್ತ್ರ ಅನ್ನುವ ತರದಲ್ಲಿ ವಿಶ್ಲೇಷಣೆ ಮಾಡಲಾಯಿತು. ಜನರು ತಮ್ಮ ಕೆಲಸಕ್ಕಾಗಿ ಸರಕಾರಿ ಕಛೇರಿ ಸುತ್ತುವ ಕೆಲಸ ಇನ್ನಿಲ್ಲ. ಒಂದು ವಾರವೊ ಹದಿನೈದು ದಿನವೊ ಮೂವತ್ತು ದಿನವೊ ಅಂತು ನಾವು ಹಾಕಿದ ಅರ್ಜಿಗೆ ಕಚೇರಿ ಸುತ್ತುವ ಕೆಲಸವಿಲ್ಲ. ಅರ್ಜಿ ಹಾಕಿದ ದಿನವೇ ನೀಡುವ ಅರ್ಜಿದಾರರಿಗೆ ಮತ್ತೆ ನೀವು ಯಾವತ್ತು ಬರಬೇಕು ಅನ್ನುವ ತಿಳುವಳಿಕೆ ಪತ್ರ ನೀಡ ಬೇಕು. ಮತ್ತೆ ಅದೇ ದಿನವೇ ಅವರಿಗೆ ನೀಡಬೇಕಾದ ಆದಾಯ ಪತ್ರ ಜಾತಿ ಪತ್ರ ಪಹಣಿ ಪತ್ರ.. ಎಲ್ಲದಕ್ಕೂ ದಿನ ನಿಗದಿ.. ಎಂತಹ ರಾಮರಾಜ್ಯ ಆಡಳಿತ ಪದ್ಧತಿ ಬಂತು ಅನ್ನುವ ಕುಶಿಯಲ್ಲಿ ಜನ ತೇಲಾಡಿದ್ದೆ ತೇಲಾಡಿದ್ದು.
ಆದರೆ ಈ" ಸಕಾಲ" ರಾಜ್ಯದ ಜನರನ್ನು ಹೆಚ್ಚು ದಿನ ತೇಲಾಡಿಸಲೇ ಇಲ್ಲ. ಬದಲಾಗಿ ಈ ಸಕಾಲವೇ ತುರ್ತಾಗಿ ಮರಣಕ್ಕೆ ಒಳಗಾಗಿದ್ದಂತೂ ಈಗ ಎಲ್ಲರ ಗಮನಕ್ಕೂ ಬಂದಿರುವುದಂತೂ ನೂರಕ್ಕೆನೂರು ಸತ್ಯ.
ಈಗ ಅಕಾಲ ಮರಣಕ್ಕೆ ತುತ್ತಾಗಿರುವ "ಸಕಾಲ"ಕ್ಕೆ ಬಹುಮುಖ್ಯ ಕಾರಣ ಕೊರೊನಾ ವೈರಾಣು ಅಂತೂ ಅಲ್ಲವೇ ಅಲ್ಲ. ಬದಲಾಗಿ "E Governance"ಅನ್ನುವ ಕಂಪ್ಯೂಟರ್ ವೈರಲ್ ಅಣು. ಈ ಅಣುವನ್ನು ಹುಟ್ಟಿ ಹಾಕಿಸಿದ್ದೆ ಸುಗಮ ತ್ವರಿತ ಭ್ರಷ್ಟ ರಹಿತ ಆಡಳಿತ ನೀಡುವ ಉದ್ದೇಶದಿಂದ. ಆದರೆ ವಿಪರ್ಯಾಸವೆಂದರೆ ಯಾವುದನ್ನು ಕಾಯಿಲೆಗಾಗಿ ಸಂಶೋಧಿಸಿದ ಔಷಧಿ ಇದೆಯೊ ಅದೇ ಔಷಧಿ ಇಡಿ ಆಡಳಿತ ನಡೆಸಬೇಕಾದ ದೇಹಕ್ಕೆ ಅಡ್ಡ ಪರಿಣಾಮ ಬೀರಿರುವುದಂತೂ ಸತ್ಯ.
ಇಂದು ನೀವು ಯಾವುದೇ ಸರಕಾರಿ ಕಛೇರಿಗೆ ಹೇೂಗಿ ನಮ್ಮ ಅರ್ಜಿ ಸ್ಥಿತಿ ಏನಾಗಿದೆ ಅಂತ ಕೇಳಿ ಅಲ್ಲಿನ ಸಿಬಂದಿಗಳು ನೀಡುವ ತಕ್ಷಣದ ಉತ್ತರ ಒಂದೇ" ನೆಟ್ ಸ್ಲೊ; ಸವ೯ರ್ ಸರಿ ಇಲ್ಲ ಸಿಸ್ಟಮ್ ವರ್ಕ್ ಮಾಡುತ್ತಿಲ್ಲ. ನಾವು ಏನೂ ಮಾಡುವ ಹಾಗಿಲ್ಲ. ಬಂದಾಗ ನೇೂಡುವ". ಈ ಕೆಲಸವನ್ನು ಅವರು ಹಿಂದೆ ಕೈ ಕಾಲಿನಲ್ಲಿಯೇ ಮಾಡುತ್ತಿರುವಾಗ ಅವರ ಕೈ ಕಾಲಿಗಾದರೂ ಬೈದು ಬರಬಹುದಿತ್ತು. ಈ ಕಂಪ್ಯೂಟರ್ ಬಂದ ಮೇಲೆ ನಮ್ಮ ತಲೆಗೆ ನಾವೇ ಹೊಡೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹಾಗಂತ ಕಂಪ್ಯೂಟರ್ ಸ್ವಲ್ಪ ಬಿಸಿ ತಾಗಿಸಿದರೆ ಬೇಗ ಕೆಲಸ ಆಗುತ್ತದೆ ಅನ್ನುವ ಸುದ್ದಿಯೂ ಇದೆ. ನೀವು ಸರಿಯಾಗಿ ಕಂಪ್ಯೂಟರ್ ಗೆ ಬಿಸಿ ತಾಗಿಸದೇ ಇದ್ದರೆ ಸವ೯ರ್ ಸಮಸ್ಯೆ ನೆಟ್ವರ್ಕ್ ಸಮಸ್ಯೆ ಜಾಸ್ತಿ ಅನ್ನುವ ಸಕಾಲದ ಮಾಹಿತಿ ಇದೆ!!
ಒಂದಂತೂ ಸತ್ಯ. ಆಡಳಿತ ಸುಧಾರಣೆಗಾಗಿ ಏನೇ ಬದಲಾವಣೆ ಸುಧಾರಣೆ ತನ್ನಿ ಮೇಲಿನ ಕೆರೆಯಿಂದ ಹಿಡಿದು ಕೆಳಗಿನ ಕೆರೆಯಲ್ಲಿ ಭ್ರಷ್ಟಾಚಾರದ ಮಂತ್ರಿ ಮಾಗಧರು ಆಡಳಿತದ ಅಧಿಕಾರಿಗಳು ಸಿಬಂದಿಗಳು ತುಂಬಿರುವ ತನಕ ನಮ್ಮ ನಿಮ್ಮ ಅರ್ಜಿಯ ಕಡತಗಳು ಕೆಂಪು ಪಟ್ಟಿಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ಚಾಪೆ ಅಡಿಯಲ್ಲಿ ನುಸುಳುತ್ತಾರೆ ಅಂದು ನೀವು "ಸಕಾಲ" ತಂದರೆ ರಂಗೇೂಲಿ ಅಡಿಯಲ್ಲಿ ನುಸುಳುವ ಸರಕಾರಿ ಅಧಿಕಾರಗಳೇ ಜಾಸ್ತಿ. ಅಂತೂ ಇಂದು ಸಕಾಲಕ್ಕೆ ಬಂದಿರುವ ಅಕಾಲಿಕ ಮರಣಕ್ಕಾಗಿ ಕರ್ನಾಟಕದ ಜನತೆ ಸಂತಾಪ ಸೂಚಿಸಲೇ ಬೇಕಾಗಿದೆ, ಅಲ್ವೇ?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق