ಚಾಮರಾಜನಗರ: ಬಸ್ ಪ್ರಯಾಣದ ವೇಳೆ ವಾಂತಿ ಬಂದಂತಾದ್ದರಿಂದ ಬಾಗಿಲ ಬಳಿ ಬಂದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟ ಘಟನೆಯೊಂದು ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಮೈಸೂರಿನ ಅಶೋಕಪುರಂ ನಿವಾಸಿ ಉಮೇಶ್ (61 ವರ್ಷ) ಎಂದು ಗುರುತಿಸಲಾಗಿದೆ. ಇವರು ಪಶು ಸಂಗೋಪನಾ ಇಲಾಖೆಯ ನಿವೃತ್ತ ನೌಕರ. ಅಮಾವಾಸ್ಯೆಯ ಪೂಜೆಗೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಸಾರಿಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬಸ್ ಪೊನ್ನಚ್ಚಿ ಕ್ರಾಸ್ ಬಳಿ ತಲುಪಿದಾಗ ಉಮೇಶ್ ಅವರಿಗೆ ವಾಂತಿ ಬಂದಂತಾಗಿದ್ದು, ಅವರು ಬಸ್ ಬಾಗಿಲ ಬಳಿ ತೆರಳಿದ್ದರು ಎನ್ನಲಾಗಿದೆ. ಈ ವೇಳೆಗೆ ಆಕಸ್ಮಿಕವಾಗಿ ಚಲಿಸುತ್ತಿದ್ದ ಬಸ್‌ನ ಬಾಗಿಲು ಕಳಚಿಕೊಂಡಿದ್ದು, ಉಮೇಶ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ.
ಇದರಿಂದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅಷ್ಟು ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲೆಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق