ಮೂಡುಬಿದಿರೆ: ತುಳುನಾಡಿನ ಪ್ರತಿಯೊಂದು ಆರಾಧನೆಯ ಹಿಂದೆ ವೈಜ್ಞಾನಿಕ ಮಹತ್ವ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಹೇಳಿದರು
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ವತಿಯಿಂದ ನಡೆದ 'ಗೇನದ ಬೊಲ್ಪು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳುನಾಡಿನಲ್ಲಿ ಸತ್ಯದ ಆರಾಧನೆ ಹಾಗೂ ನಾಗರಾಧನೆ ಮಾನಸಿಕ ಮತ್ತು ದೈಹಿಕ ವ್ಯಾಧಿಗಳನ್ನು ಪರಿಹರಿಸುವ ಸಲುವಾಗಿ ಬೆಳೆದು ಬಂದಿದೆ. ಮೂಲ ತುಳುವರ ಪ್ರತಿಯೊಂದು ಆರಾಧನೆಯು ಪ್ರಕೃತಿಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದೆ. ಆಧುನಿಕ ಕಾಲಘಟ್ಟದಲ್ಲಿ ಜೀರ್ಣೋದ್ಧಾರದ ಹೆಸರಿನಲ್ಲಿ ಬನಗಳನ್ನು ಕಾಂಕ್ರೀಟಿಕರಣಗೊಳಿಸುತ್ತಿದ್ದು ಇದರಿಂದ ಸ್ಥಳದ ಪಾವಿತ್ರ್ಯ ನಶಿಸುತ್ತಿದೆ. ಯಾವುದೇ ಬದಲಾವಣೆಗಳು ಮೂಲ ವ್ಯವಸ್ಥೆಗೆ ಧಕ್ಕೆಯಾಗಬಾರದೆಂದರು. ದೈವರಾಧನೆಯು ಭಕ್ತಿಯೊಂದಿಗೆ ಅವಿಭಕ್ತ ಕುಟುಂಬದ ಮೌಲ್ಯಗಳನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳು ಸಂಸ್ಕೃತಿ ಹಾಗೂ ಭಾಷೆಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ಇನ್ನೋರ್ವ ಅತಿಥಿ ತುಳು ಬರಹಗಾರ್ತಿ ರಾಜಶ್ರೀ ಟಿ. ರೈ ಪೆರ್ಲ ತುಳುನಾಡಿನ ಕೃಷಿ ಬದುಕಿನ ಕುರಿತು ಮಾತನಾಡಿ, ತುಳು ಋತುವಿಗನುಗುಣವಾಗಿ ಈ ಪ್ರದೇಶದಲ್ಲಿ ಮೂರು ಬೆಳೆಗಳನ್ನು ತೆಗೆಯುವ ಪದ್ಧತಿಯಿದೆ. ಹಿರಿಯರ ಅನುಭವದ ಪರಂಪರೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ, ಇಲ್ಲಿನ ಜನರಿಗೆ ಕೃಷಿಯೇ ಮೂಲ ಆಧಾರವಾಗಿರುವುದರಿಂದ ಮಣ್ಣಿನ ಸಂಬಂಧವನ್ನು ಮರೆಯಬಾರದೆಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಧುನಿಕ ಜನಾಂಗದ ಮಕ್ಕಳಲ್ಲಿ ಸಂಸ್ಕೃತಿಯ ಜ್ಞಾನದ ಕೊರತೆಯಿದೆ. ಈ ನಿಟ್ಟಿನಲ್ಲಿ ನಾಡಿನ ಆಚರಣೆ ಹಾಗೂ ಭಾಷೆಯ ಮಹತ್ವ ಹೆಚ್ಚಿಸುವ ವಾತಾವರಣ ಸೃಷ್ಟಿಯಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ಸಂಘದ ಸಂಯೋಜಕ ಪ್ರೊ. ಕೆ.ವಿ ಸುರೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕರಾದ ಅಶ್ಮಿತಾ ಸ್ವಾಗತಿಸಿದರು, ವಂದನಾ ವಂದಿಸಿದರು, ಪ್ರಜ್ವಲ್ ನಿರೂಪಿಸಿದರು.
إرسال تعليق