ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ಸಾಕ್ಷರತೆಯ ಸಾಕ್ಷಿಗಳು ಉಪನ್ಯಾಸದಲ್ಲಿ ಅಭಿಮತ
ಮಂಗಳೂರು: 'ಅನಕ್ಷರಸ್ಥರು ಬರೀ ಸಹಿ ಹಾಕುವುದನ್ನು ಕಲಿತ ಮಾತ್ರಕ್ಕೆ ಸಾಕ್ಷರತೆಯಾಗುವುದಿಲ್ಲ. ಸಾಕ್ಷರತೆಯ ಮೂಲಕ ಪ್ರತಿಯೊಬ್ಬರು ಸಮಾಜದ ಬದಲಾಗುತ್ತಿರುವ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ವ್ಯಾಖ್ಯಾನಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು. ಓದು ಬರಹ ಲೆಕ್ಕ ಇದ್ದರೆ ಸಾಲದು ಅದರ ಸಾಕ್ಷರತೆಯ ಮುಂದುವರಿಕೆ ಹಾಗೂ ನಿರಂತರತೆ ಮುಖ್ಯ. ಸಾಕ್ಷರತೆ ಎಂಬುದು ಮಾನವ ಹಕ್ಕು ಮತ್ತು ಘನತೆ' ಎಂದು ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಇದರ ನಿರ್ದೇಶಕರಾದ ಡಾ.ಟಿ. ವೆಂಕಟೇಶ ಅವರು ಹೇಳಿದರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವಿಶ್ವ ಸಾಕ್ಷರತಾ ದಿನದ ಪ್ರಯುಕ್ತ ಬುಧವಾರದಂದು ಆಯೋಜಿಸಿದ್ದ ತನ್ನ ಉಪನ್ಯಾಸ ಸರಣಿಯ 4ನೇ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸಾಕ್ಷರತೆಯ ಸಾಕ್ಷಿಗಳು' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
'ದಶಕಗಳಿಂದ ನಡೆಸಿಕೊಂಡು ಬಂದ ಸಾಕ್ಷರತಾ ಅಭಿಯಾನಗಳ ಹೊರತಾಗಿಯೂ ವಿಶ್ವದಲ್ಲಿ ಒಟ್ಟು 773 ದಶಲಕ್ಷ ಅನಕ್ಷರಸ್ತರಿದ್ದಾರೆ. ಸಾಕ್ಷರತಾ ಪ್ರಮಾಣದಲ್ಲಿ ದೇಶದಲ್ಲಿ ನಮ್ಮ ರಾಜ್ಯ ಕರ್ನಾಟಕಕ್ಕೆ 23ನೇ ಸ್ಥಾನವಿದೆ. ಪ್ರಪಂಚದ ಒಟ್ಟು ಅನಕ್ಷರಸ್ಥರಲ್ಲಿ 35 ಶೇಕಡ ಅನಕ್ಷರಸ್ಥರು ಭಾರತದಲ್ಲಿಯೇ ಇದ್ದಾರೆ. ಸದ್ಯ ಜಾರಿಯಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಒಳ್ಳೆಯ ಪರಿವರ್ತನೆಯೆಂದು ಹೇಳಲಾಗುತ್ತಿದೆಯಾದರೂ ಅಲ್ಲಿ ಸಾಕ್ಷರತಾ ಅಧ್ಯಯನವನ್ನು ವಯಸ್ಕರ ಶಿಕ್ಷಣಕಷ್ಟೇ ಸೀಮಿತಗೊಳಿಸಲಾಗಿದೆ ಎಂದು ವಿವರಿಸಿದರು.
'
'ದೇಶದಲ್ಲಿ ಡಿಜಿಟಲ್ ಸಾಕ್ಷರತೆಯ ಪ್ರಮಾಣ ಹೆಚ್ಚಿದೆ. ಟೆಲಿಕಾಂನಲ್ಲಿ ಆದ ಕ್ರಾಂತಿ ಸಾಕ್ಷರತೆಯಲ್ಲಿ ಆಗಿಲ್ಲ. ನಾವು ಜಾಗತಿಕವಾಗಿ ಬಹಳಷ್ಟು ಬೆಳೆದಿದ್ದರೂ ನಮ್ಮಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಸಾಧಿಸಲು ಸಾಧ್ಯವಾಗಿಲ್ಲ' ಎಂದರು.
'ಅನಕ್ಷರತೆಯು ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಶಾಂತಿ ಮತ್ತು ಪ್ರಜಾಪ್ರಭುತ್ವದ ಯಶಸ್ಸಿಗೆ ಸಾಕ್ಷರತೆ ಹೆದ್ದಾರಿ. ಬಡತನ ಇರುವಲ್ಲಿ ಅನಕ್ಷರತೆ ಹೆಚ್ಚು. ಅನಕ್ಷರತೆ ಇದ್ದಾಗ ಅಸಮಾನತೆ ಬಲವಾಗಿರುತ್ತದೆ. ಹಾಗಾಗಿ ಸಾಕ್ಷರತೆಯ ಗಂಭೀರ ಅನುಷ್ಠಾನ ಅನಿವಾರ್ಯ' ಎಂದು ಅಭಿಪ್ರಾಯ ಪಟ್ಟರು.
'ಅನಕ್ಷರಸ್ಥರನ್ನು ಸಶಕ್ತರನ್ನಾಗಿ ಮಾಡುವುದು ಸಾಕ್ಷರತಾ ಆಂದೋಲನದ ಧ್ಯೇಯ. ಅಕ್ಷರ ಜ್ಞಾನ ಮನೋಮಯ ಹಸಿವು ಮತ್ತು ಅಭಿರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನವ ಸಾಕ್ಷರ ಸಾಹಿತ್ಯಗಳ ಮೂಲಕ ಮನರಂಜನೆಯೊಂದಿಗೆ ಸಾಕ್ಷರತೆಯನ್ನು ಕ್ರಿಯಾಶೀಲವಾಗಿಡಬೇಕು.' ಎಂದರು.
'ಸ್ವಾತಂತ್ರ್ಯ ಹೋರಾಟದ ಕಾಲದಲ್ಲೂ ಮಹಾತ್ಮ ಗಾಂಧೀಜಿಯವರು ಸಾಕ್ಷರತೆಗೆ ಒತ್ತು ಕೊಟ್ಟಿದ್ದರು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರೂ ಕೂಡಾ ಸಾಕ್ಷರತೆಯ ಅಭಿಯಾನವನ್ನು ಆರಂಭಿಸಿದ್ದರು ಆದರೆ ಅವರ ಪ್ರಯತ್ನಗಳು ನಿರೀಕ್ಷೆಯಷ್ಟು ಯಶಸ್ಸನ್ನು ಕಂಡಿರಲಿಲ್ಲ' ಎಂದು ಅವರು ವಿಶ್ಲೇಷಿಸಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಅನಕ್ಷರತೆಯಿಂದ ಹೆಬ್ಬೆಟ್ಟೇ ಸಾಕ್ಷಿ ಆಗಿದ್ದ ದಿನಗಳು ಮುಗಿದಿವೆ. ಆದರೂ ಸಾಕ್ಷರತೆಯ ಮಾಜಲುಗಳ ಅರಿವು ಮುಂದುವರಿಯಬೇಕು' ಎಂದರು.
ಉಪಾಧ್ಯಕ್ಷೆ ಡಾ.ಅರುಣಾ ನಾಗರಾಜ್ ಅವರು ಸಂಪನ್ಮೂಲ ವ್ಯಕ್ತಿ ಡಾ.ಟಿ.ವೆಂಕಟೇಶ ಅವರನ್ನು ಪರಿಚಯಿಸಿದರು.
ವೆಬಿನಾರ್ ಮೂಲಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಿ, ದ.ಕ ಜಿಲ್ಲಾ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ, 'ಅಶೋಕ ಮಹಾರಾಜ ಸಾಕ್ಷರತೆಗೆ ಮಹತ್ವ ನೀಡಿದ್ದ ಮತ್ತು ಜನರಿಗಾಗಿ ಬಂಡೆಗಳ ಮೇಲೆ ಅಕ್ಷರ ಬರಹಗಳನ್ನು ಕೆತ್ತಿಸಿ ಅಕ್ಷರ ಕ್ರಾಂತಿ ಮಾಡಿದ್ದ ಎಂದರು.
ದ.ಕ ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿ 'ಸಾಕ್ಷರತೆಯ ಯಶಸ್ಸನ್ನು ಸಂಖ್ಯೆಯಿಂದ ಅಳೆಯದೇ ಗುಣಮಟ್ಟದಿಂದ ಅಳೆಯುವುದು ಮಾನದಂಡವಾಗಬೇಕು. ಶಿಕ್ಷಿತರಾದರೆ ಸಾಲದು ಸುಶಿಕ್ಷಿತರಾಗಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು' ಎಂದರು.
ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ನಳಿನಾಕ್ಷಿ ಉದಾಯರಾಜ್ ಮೊದಲಾದವರು ಪಾಲ್ಗೊಂಡರು. ಗಾಯಕಿ ಆಕೃತಿ ಐ ಎಸ್ ಭಟ್ ವರು ಸಾಕ್ಷರತೆಯ ಕುರಿತು ಭಾವಗಾನದ ಮೂಲಕ ಮನರಂಜಿಸಿದರು.
ಕವಯಿತ್ರಿ ರೇಖಾ ನಾರಾಯಣ್ ಪ್ರಾರ್ಥಿಸಿದರು. ಮಂಗಳೂರು ತಾಲೂಕು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸ್ವಾಗತಿಸಿದರು. ಹಿರಿಯ ಕವಯಿತ್ರಿ ಅರುಂಧತಿ ವಿ. ರಾವ್ ವಂದಿಸಿದರು. ನಿರೂಪಕ, ಕವಿ, ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅವರು ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق