ಹಾವೇರಿ: 20 ವರ್ಷದ ಯುವತಿಯೊಬ್ಬಳು ಸಾಯುವ ಮುನ್ನ ಅಂಗಾಂಗ ದಾನ ಮಾಡಿದ ಘಟನೆ ನಡೆದಿದೆ. ಆಕೆಯ ಹೆಸರು ಕವನ ಮಳ್ಳಯ್ಯ ಹಿರೇಮಠ.
ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಕವನ ಶಿಕಾರಿಪುರದ ಗಾಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸೆ.9ರಂದು ಹೊನ್ನಾಳಿ ತಾಲೂಕು ಸೊರಟೂರು ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನ ಗಂಭೀರ ಗಾಯಗೊಂಡಿದ್ದರು.
ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕವನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾಗೆ ತಲುಪಿದ್ದರು. ಅವರು ಮಿದುಳು ನಿಷ್ಕ್ರಿಯಗೊಂಡಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗಳು ಬದುಕುವುದು ಕಷ್ಟ, ಅವಳ ಅಂಗಾಂಗವಾದರೂ ಇತರರಿಗೆ ಬದುಕು ನೀಡಲಿ ಎಂದು ನಿರ್ಧರಿಸಿದ ಮೃತಳ ಕುಟುಂಬಸ್ಥರು ವೈದ್ಯರೊಂದಿಗೆ ಚರ್ಚಿಸಿದ್ದಾರೆ.
ಹಾಗೆಯೇ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೃತಳ ಕುಟುಂಬಸ್ಥರು ಯುವತಿಯ ಕಿಡ್ನಿ, ಹೃದಯ, ಲಿವರ್, ಕಣ್ಣು, ಚರ್ಮ ದಾನ ಮಾಡಿದರು.
ತಕ್ಷಣವೇ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಮಹತ್ತರ ಕಾರ್ಯದಿಂದ ನಾಲ್ವರ ಪ್ರಾಣ ಉಳಿದಿದೆ.
Post a Comment