ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಂಗ್ಲ ವಿಭಾಗ ಮತ್ತು ಲಿಟರರಿ ಕ್ಲಬ್ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ‘ಯುರೋಪಿಯನ್ ಲಿಟರೇಚರ್ ಮತ್ತು ಲಿಟರರಿ ಥಿಯರೀಸ್’ ಎಂಬ ವಿಷಯದ ಕುರಿತು ನಾಲ್ಕು ದಿನಗಳ ವರ್ಚುವಲ್ ಕಾರ್ಯಾಗಾರ ಸಪ್ಟೆಂಬರ್ 3 ರಿಂದ 7 ರವರೆಗೆ ನಡೆಯಿತು.
ಈ ವರ್ಚುವಲ್ ಕಾರ್ಯಾಗಾರದ ಮೊದಲ ದಿನ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಹ್ಯುಮಾನಿಟಿಸ್ ಆಂಡ್ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಡಾ. ಪ್ರವೀಣ್ ಶೆಟ್ಟಿ ಭಾಗವಹಿಸಿದ್ದರು. 'ಕ್ಲಾಸಿಕಲ್ ಥಿಯರಿಸ್ ಆಫ್ ಲೀಟರೇಚರ್' ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕಾವ್ಯ ರಚನೆ ಮಾಡಲು ಕೆಲವೊಂದು ತಂತ್ರಗಾರಿಕೆ ಅಗತ್ಯ. ಕಾವ್ಯವು ತನ್ನದೇ ಆದ ಗುಣ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಅರಿತುಕೊಂಡರೆ ಉತ್ತಮ ಕಾವ್ಯಗಳನ್ನು ರಚಿಸಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಾಗಾರದ ಎರಡನೇ ದಿನ, ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಸೆಂಟರ್ ಆಪ್ ಯುರೋಪಿಯನ್ ಸ್ಟಡೀಸ್‍ನ ರಿಚ ಗುಪ್ತ 'ರೊಮ್ಯಾಂಟಿಕ್ ಪೋಯಟ್ರಿ' ಎಂಬ ವಿಷಯದ ಕುರಿತು ಮಾತನಾಡಿ, ಭಾವಪ್ರಧಾನತೆಯನ್ನು ಕವಿತೆಗಳ ಮೂಲಕ ಸುಂದರವಾಗಿ ತೋರ್ಪಡಿಸಲಾಗುತ್ತದೆ. ಇಂತಹ ಕವಿತೆಗಳು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸಾಹಿತ್ಯ ಕ್ಷೇತ್ರದ ಸುಧಾರಣೆಯಲ್ಲಿ ಭಾವಪ್ರದಾನತೆಯೂ ತನ್ನದೇ ಆದ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.
ಕಾರ್ಯಾಗಾರದ ಮೂರನೇ ದಿನ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಣಿಪಾಲ ವಿಶ್ವವಿದ್ಯಾಲಯದ ಭಾμÁ ವಿಭಾಗದ ಡಾ.ಅರವಿಂದ್ ಭಟ್ ಭಾಗವಹಿಸಿದ್ದರು. ಅವರು ‘ಸಾಹಿತ್ಯದಲ್ಲಿ ಆಧುನಿಕ ಪ್ರಯೋಗ' ಎಂಬ ವಿಷಯದ ಕುರಿತು ಮಾತನಾಡಿ, ಯುರೋಪ್ ಪ್ರಾಂತ್ಯದಲ್ಲಿ ಆದಂತಹ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ ಸಾಹಿತ್ಯ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳಿಗೆ ಅಡಿಪಾಯವಾಯಿತು. ಇಂತಹ ಬದಲಾವಣೆ ಆಂಗ್ಲ ಸಾಹಿತ್ಯದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾಯಿತು ಎಂದು ಹೇಳಿದರು.
ಈ ವರ್ಚುವಲ್ ಕಾರ್ಯಾಗಾರದ ಕೊನೆಯ ದಿನ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯಡ್ಕದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಪ್ರತಾಪ್ ಚಂದ್ರ ಟಿ. ‘ಸ್ಟ್ರಕ್ಚರಲಿಸಮ್ ಅಂಡ್ ಪೋಸ್ಟ್ ಸ್ಟ್ರಕ್ಚರಲಿಸಮ್' ಎಂಬ ವಿಷಯದ ಕುರಿತು ಮಾತನಾಡಿದರು.
ಅವರು, ಪ್ರತಿಯೊಂದು ಪದವೂ ಒಂದು ವಿಷಯದ ಮಹತ್ವವನ್ನು ಸಾರುತ್ತದೆ. ಆದ್ದರಿಂದ ಸಾಹಿತ್ಯದಲ್ಲಿ ಪದಗಳ ಸರಿಯಾದ ಬಳಕೆ ಅತ್ಯಗತ್ಯ. ಸಾಹಿತ್ಯದಲ್ಲಿ ಅಡಕವಾಗಿರುವ ಪ್ರತಿಯೊಂದು ಅಂಶವೂ ಒಳಾರ್ಥವನ್ನು ಹೊಂದಿರುತ್ತದೆ. ಇದು ಸಾಹಿತ್ಯ ರಚನೆಯಲ್ಲಿ ಸಹಾಯಕವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಪ್ರತಿ ದಿನದ ಕಾರ್ಯಾಗಾರದ ನಂತರ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಆಯಾ ದಿನದ ವಿಷಯದ ಕುರಿತು ಸಂವಾದ ಜರಗಿತು. ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗದ ಉಪನ್ಯಾಸಕರಾದ ಅಂಬಿಕಾ, ಸರಸ್ವತಿ ಸಿ.ಕೆ. ಉಪಸ್ಥಿತರಿದ್ದರು.
ವಿಭಾಗದ ಉಪನ್ಯಾಸಕಿ ರೇಖಾ ನಾಯರ್ ವಂದಿಸಿ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್. ಕಾರ್ಯಕ್ರಮ ನಿರೂಪಿಸಿದರು.
Post a Comment