ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳು ಭಾಷೆಯೊಂದಿಗೆ ಲಿಪಿಯನ್ನು ತಳಕುಹಾಕಿ ಗೊಂದಲ: ಎಸ್ ಕಾರ್ತಿಕ್

ತುಳು ಭಾಷೆಯೊಂದಿಗೆ ಲಿಪಿಯನ್ನು ತಳಕುಹಾಕಿ ಗೊಂದಲ: ಎಸ್ ಕಾರ್ತಿಕ್


ಮಂಗಳೂರು: ಭಾಷೆ ಮತ್ತು ಲಿಪಿ ಬೇರೆಬೇರೆ. ತುಳು ಭಾಷೆ ಮತ್ತು ಲಿಪಿ ಇವುಗಳನ್ನು ಒಂದನ್ನೊಂದು ತಳಕುಹಾಕುವ ಮೂಲಕ ಒಬ್ಬರೊನ್ನೊಬ್ಬರು ದ್ವೇಷಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಸ್ವತಂತ್ರ ಸಂಶೋಧಕ ಎಸ್ ಕಾರ್ತಿಕ್ ವಿಷಾದಿಸಿದರು. 


ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು 'ಮಾನುಷʼ ಆಯೋಜಿಸುತ್ತಿರುವ ವೆಬಿನಾರ್ ಸರಣಿಯ 5ನೇ ಭಾಗವಾಗಿ ಶನಿವಾರ 'ತುಳುನಾಡಿನ ಇತಿಹಾಸಕ್ಕೆ ಕೆ ವಿ ರಮೇಶ್ ಅವರ ಕೊಡುಗೆʼ ಎಂಬ ಕುರಿತು ಮಾತನಾಡಿದ ಅವರು, ಒಂದು ಭಾಷೆಗೆ ಲಿಪಿ ಇರಬೇಕೆಂಬ ನಿಯಮವಿಲ್ಲ. ಸಂಸ್ಕೃತವನ್ನು ಬ್ರಾಹ್ಮೀ, ದೇವನಾಗರಿ ಮೊದಲಾದ ಲಿಪಿಗಳ ಮೂಲಕ ಬರೆಯಲಾಗುತ್ತದೆ. ಕನ್ನಡವನ್ನೂ ಇತರ ಲಿಪಿಗಳಲ್ಲಿ ಬರೆಯಲಾಗಿದೆ. ತುಳು ಪ್ರಾಚೀನ ಭಾಷೆ ಹೌದು, ಆದರೆ ಲಿಪಿಯೆಂದು ಪರಿಗಣಿಸಲಾಗಿಲ್ಲ, ಎಂದರು.  


ಕನ್ನಡ, ಸಂಸ್ಕೃತ ವಿದ್ವಾಂಸ, ಶಾಸನತಜ್ಞ ಕೆ ವಿ ರಮೇಶ್ ತುಳುವಿಗೆ ನೀಡಿದ ಕೊಡುಗೆಯನ್ನು ಒಂದೊಂದಾಗಿ ವಿವರಿಸಿದ ಅವರು, 'ತುಳುನಾಡಿನ ಇತಿಹಾಸʼ (1968) ಕೃತಿ ವಸ್ತುನಿಷ್ಠ ಮತ್ತು ಐತಿಹಾಸಿಕ ಮೌಲ್ಯವುಳ್ಳದ್ದು. ಶಾಸನಗಳನ್ನೇ ಆಧರಿಸಿ ಬರೆದ ಈ ಕೃತಿ 30 ಮಂದಿ ಆಳುಪ ಅರಸರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಹಲವು ಗೊಂದಲಗಳನ್ನು ವಿವಾರಿಸಿತು. ಬಾರಕೂರು ಮತ್ತು ಮಂಗಳೂರು ರಾಜ್ಯಗಳ ಆಳ್ವಿಕೆ ನಡೆಸಿದ 100 ಮಂದಿ ವಿಜಯನಗರದ ಅರಸರು ಮತ್ತು ಆಳ್ವಿಕೆಯ ಕಾಲವನ್ನೂ ಈ ಕೃತಿ ಒದಗಿಸಿತು. 


ತಾಮ್ರ ಮತ್ತು ಶಿಲಾ ಶಾಸನಗಳೂ ಸೇರಿದಂತೆ 93 ಶಾಸನಗಳ ಬಗ್ಗೆ ಮಾಹಿತಿ ನೀಡುವ ಕೆ.ವಿ ರಮೇಶ್ ಮತ್ತು ಎಂ ಜೆ ಶರ್ಮಾ ಅವರ 'ತುಳುನಾಡಿನ ಶಾಸನಗಳು', ರಮೇಶ್ ಅವರ ’History of South Canara’, 'ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯʼ ಎಂಬ ಪುಸ್ತಕಗಳು ತುಳುನಾಡಿನ ಇತಿಹಾಸಕ್ಕೆ ದೊಡ್ಡ ಕೊಡುಗೆಗಳು. ಚಾಲುಕ್ಯರು ಮತತು ಆಳುಪರಿಗೆ ಇದ್ದ ಸಂಬಂಧದ ಬಗ್ಗೆ ಬರೆದ 'Chalukyas of Vatapi', 'ಕರ್ನಾಟಕದ ಶಾಸನ ಸಮೀಕ್ಷೆ' ಗಮನಿಸಲೇಬೇಕಾದ ಕೃತಿಗಳು ಎಂದರು. ಅವರು ಮಂಜೇಶ್ವರ ಗೋವಿಂದ ಪೈ, ಗಣಪತಿ ರಾವ್ ಐಗಳ ಮೊದಲಾದ ಕಿರಿಯ ಇತಿಹಾಸಕಾರರನ್ನು ಪ್ರೋತ್ಸಾಹಿಸುತ್ತಿದ್ದರು. ರಮೇಶ್ ಅವರ ಕೃತಿಗಳು ಸಂಪುಟವಾಗಿ ಪ್ರಕಟವಾಗುವ ಅಗತ್ಯವಿದೆ ಎಂದರು.   


ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಸರಣಿಯ ಮೂಲಕ ಅನುಭವ, ಜ್ಞಾನದ ಹಂಚಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಅತಿಥಿಗಳನ್ನು ಸ್ವಾಗತಿಸಿದರು, ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ತಸ್ರೀಫಾ ರಶಿಕಾ ಧನ್ಯವಾದ ಸಮರ್ಪಿಸಿದರು. 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post