ಕಾಸರಗೋಡು: ತಪಸ್ಯ ಕಲಾವೇದಿಕೆಯ 'ಉತ್ತರಾಡ ಕಿಳಿ' ಎಂಬ ವಿಶೇಷ ಕಾರ್ಯಕ್ರಮದ ಭಾಗವಾಗಿ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಬಾಲಕೃಷ್ಣ ಭಟ್ ಕೂಟೇಲು ಅವರನ್ನು ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
ಕೇರಳ ತಪಸ್ಯ ಕಲಾವೇದಿಕೆಯ ಕಾಸರಗೋಡು ಜಿಲ್ಲಾ ಘಟಕದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಯುತ ಬಾಲಕೃಷ್ಣ ಭಟ್ ಕೂಟೇಲು ಅವರು ಮೂರು ದಶಕಗಳ ಕಾಲ ಯಕ್ಷಗಾನ ಮೇಳದ ಕಲಾವಿದರಾಗಿ ಸೇವೆಗೈದವರು.
ಕುಂಬಳೆ ಶ್ರೀ ಶೇಷಪ್ಪನವರು ನಡೆಸುತ್ತಿದ್ದ ಉಪ್ಪಳ ಶ್ರೀ ಭಗವತಿ ಮೇಳ, ಬಳ್ಳಂಬೆಟ್ಟು ಶೀನಪ್ಪ ಭಂಡಾರಿಯವರು ನಡೆಸುತ್ತಿದ್ದ ಆದಿ ಸುಬ್ರಹ್ಮಣ್ಯ ಮೇಳ, ಕುಬಣೂರು ಶ್ರೀಧರ ರಾವ್ ನಡೆಸುತ್ತಿದ್ದ ಕೂಡ್ಲು ಮೇಳ, ಬಜ್ಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿಗಳು ನಡೆಸುತ್ತಿದ್ದ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಬಜ್ಪೆ, ಸುಂಕದ ಕಟ್ಟೆ ಮೇಳ, ಶ್ರೀ ಕಲ್ಲಾಡಿ ವಿಠಲ ಶೆಟ್ಟಿಯವರು ನಡೆಸುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳ ಈ ಮುಂತಾದ ಮೇಳಗಳಲ್ಲಿ ಎಲ್ಲಾ ಕಥಾಪಾತ್ರಗಳನ್ನು ಮಾಡುತ್ತಿದ್ದ ಪ್ರತಿಭಾವಂತ ಕಲಾವಿದರಾಗಿದ್ದರು.
ಎಲೆಮರೆಯ ಕಾಯಿಯಂತಿದ್ದ ಇವರನ್ನು ತಪಸ್ಯ ಕಲಾವೇದಿಕೆಯು ಗುರುತಿಸಿ ಅಭಿನಂದಿಸಿದೆ.
ತಪಸ್ಯ ಕಾಸರಗೋಡು ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಂದ್ರ ಕಾರವಲ್, ಕಾರ್ಯಾಧ್ಯಕ್ಷ ಬಾಲಚಂದ್ರ, ಪದಾಧಿಕಾರಿಗಳಾದ ಪ್ರೊ. ಎ ಶ್ರೀನಾಥ್, ಯಕ್ಷಗಾನ ನಾಟ್ಯಗುರು ದಿವಾಣ ಶಿವಶಂಕರ ಭಟ್, ಡಾ.ರತ್ನಾಕರ ಮಲ್ಲಮೂಲೆ ಇವರನ್ನೊಳಗೊಂಡ ತಂಡವು, ಬಾಲಕೃಷ್ಣ ಭಟ್ ಅವರು ಈಗ ವಾಸಿಸುವ ಅವರ ಸಹೋದರರಾದ ದಿ. ಶ್ರೀನಿವಾಸ ಭಟ್ ಅವರ, ಕಟ್ಟತ್ತಡ್ಕ ಸಮೀಪದ, ವಿಕಾಸ ನಗರದಲ್ಲಿರುವ ಶ್ರೀನಿವಾಸಕ್ಕೆ ತೆರಳಿ, ಬಾಲಕೃಷ್ಣ ಭಟ್ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಗೌರವ ಕಾಣಿಕೆಯನ್ನು ಸಮರ್ಪಿಸಿದರು. ಶ್ರೀ ಬಾಲಕೃಷ್ಣ ಭಟ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಂದ್ರನ್ ಕಾರವಲ್ ವಹಿಸಿದರು. ದಿವಾಣ ಶಿವಶಂಕರ ಭಟ್ ಸನ್ಮಾನಿತರ ಪರಿಚಯ ಮಾಡಿದರು. ಬಾಲಚಂದ್ರನ್ ಹಾಗೂ ಪ್ರೊ. ಎ ಶ್ರೀನಾಥ್ ಬಾಲಕೃಷ್ಣ ಅವರ ಸಾಧನೆಗಳ ಬಗ್ಗೆ ಮಾತನಾಡಿದರು.
ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಅಜಿತ್ ಭಟ್ ಕೂಟೇಲು ವಂದಿಸಿದರು. ಮನೆಯ ಸದಸ್ಯರಾದ ಶ್ರೀಮತಿ ಪ್ರೇಮಲತಾ, ರಂಜಿತ್ ಕೂಟೇಲು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق