ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೋವಿಡ್ ಹೆಸರಿನಲ್ಲಿ ಜನರ ಮೇಲೆ ನಿರ್ಬಂಧಗಳು ಇನ್ನು ಸಾಕು, ಅತಿರೇಕದ ನಡವಳಿಕೆಗಳು ನಿಲ್ಲಬೇಕು

ಕೋವಿಡ್ ಹೆಸರಿನಲ್ಲಿ ಜನರ ಮೇಲೆ ನಿರ್ಬಂಧಗಳು ಇನ್ನು ಸಾಕು, ಅತಿರೇಕದ ನಡವಳಿಕೆಗಳು ನಿಲ್ಲಬೇಕು

 



ಕೋವಿಡ್‌ ನಿಯಂತ್ರಣದ ಹೆಸರಲ್ಲಿ ಅಧಿಕಾರಿಗಳು ಆಡುವ ಆಟಕ್ಕೆ ಇನ್ನು ಕೊನೆ ಹಾಡಲೇ ಬೇಕಾಗಿದೆ. ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೂ ಅದು ಸಾಲದು, RTPCR Test ವರದಿಯೇ ಬೇಕೆಂದು ಎಸಿ ರೂಮಿನಲ್ಲಿ ಕುಳಿತು ಆದೇಶ ಹೊರಡಿಸುವ ಜಿಲ್ಲಾಧಿಕಾರಿಗಳು ಈ ಚಿತ್ರವನ್ನು ನೋಡಬೇಕು. ಕೇಂದ್ರ ಸರಕಾರ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳೇ ಇಂತಹ ಹೊಣೆಗೇಡಿ ಟೆಸ್ಟ್‌ಗಳನ್ನು ಕಡ್ಡಾಯಗೊಳಿಸಬೇಡಿ ಎಂದು ಹೇಳಿದ್ದರೂ ರಾಜ್ಯ ಸರಕಾರದ ಆದೇಶವೆಂಬ ನೆಪವೊಡ್ಡಿ ಸಾಮಂತ ಅರಸರಂತೆ ಆಡಳಿತ ನಡೆಸುವ ಅಧಿಕಾರಿಗಳು ಇದನ್ನು ಗಮನಿಸಬೇಕು.


ಶಾಲೆ-ಕಾಲೇಜುಗಳು ಎಂದಿನಂತೆ ಆರಂಭವಾಗಬೇಕು, ಜನಜೀವನ ಸಹಜ ಸ್ಥಿತಿಗೆ ಮರಳಬೇಕು. ಕೊರೊನಾ ಸಾಂಕ್ರಾಮಿಕ ಯಾವ ರೀತಿ ಹಬ್ಬುತ್ತದೆ, ಯಾರ ಮೇಲೆ ಎಂತಹ ಪರಿಣಾಮ ಬೀರುತ್ತದೆ, ಸೋಂಕು ತಗುಲಿದವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದೆಲ್ಲ ಕಳೆದ 20 ತಿಂಗಳುಗಳಿಂದ ಜನ ಸಾಮಾನ್ಯರ ಗಮನಕ್ಕೂ ಬಂದಿದೆ. ಆರೋಗ್ಯ ವ್ಯವಸ್ಥೆ, ಆಡಳಿತ ವ್ಯವಸ್ಥೆಯ ಗಮನಕ್ಕೂ ಬಂದಿದೆ.



ಹಾಗಿದ್ದೂ, ಅವಿವೇಕದ ನಿರ್ಧಾರಗಳಿಂದ ಗಡಿ ಜಿಲ್ಲೆಗಳ ಜನರಿಗೆ ದ್ರೋಹವನ್ನೇ ಬಗೆಯುವ ಅಧಿಕಾರಿಗಳಿಗೆ ಏನೆನ್ನಬೇಕು? ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರ ನಿರ್ಧಾರಗಳು ಪ್ರಶ್ನಾತೀತವಾದುದೇನೂ ಅಲ್ಲ.


ಆಗಸ್ಟ್‌ ತಿಂಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ನಡೆಯುತ್ತಿರಬೇಕಾದರೆ, ದಿಢೀರನೇ ಅದನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿದ್ದು, ಆ ಬಳಿಕ ವಿವಿ ಅಧಿಕಾರಿಗಳು ಖುದ್ದಾಗಿ ಭೇಟಿ ಮಾಡಿ ಮನವರಿಕೆ ಮಾಡಿದ ಬಳಿಕ ಎರಡು ದಿನಗಳಲ್ಲಿ ಪುನಃ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದು ಖಂಡಿತಕ್ಕೂ ಪ್ರಬುದ್ಧತೆಯಿಂದ ಕೈಗೊಂಡ ನಿರ್ಧಾರವಲ್ಲ.


ಅದಿರಲಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪಕ್ಕದ ಕೇರಳದಲ್ಲಿದ್ದರೂ ವ್ಯಾವಹಾರಿಕವಾಗಿ, ಭಾವನಾತ್ಮಕವಾಗಿ, ಜನರ ನಡುವಣ ಬಾಂಧವ್ಯದ ದೃಷ್ಟಿಯಿಂದಲೂ ಕರ್ನಾಟಕ ಅವಿಭಾಜ್ಯ ಭಾಗದಂತೆ ಇರುವ ಕಾಸರಗೋಡಿನ ಜನರನ್ನು ವಿದೇಶೀಯರಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳುವುದು ಯಾರೂ ಮೆಚ್ಚುವ ಸಂಗತಿಯಲ್ಲ. ಅದೊಂದು ದೊಡ್ಡ ಸಾಧನೆಯೂ ಅಲ್ಲ.


ಬರೀ ಅಂಕಿ ಅಂಶಗಳಲ್ಲಿ ಕೋವಿಡ್ ಸೋಂಕು ಏರಿಕೆ- ಇಳಿಕೆ ಎಂದು ತೋರಿಸುವ ಮೂಲಕ ಜನರನ್ನು, ಜನರ ಸಹಜ ಚಟುವಟಿಕೆಗಳನ್ನು, ಓಡಾಟದ ಹಕ್ಕನ್ನು ಹತ್ತಿಕ್ಕುವುದನ್ನು ಇನ್ನೂ ಹೆಚ್ಚುಕಾಲ ಒಪ್ಪಲು ಸಾಧ್ಯವಿಲ್ಲ.


ಕಾಸರಗೋಡು ಕಡೆಯಿಂದ  ಪ್ರತಿದಿನ ಸಾವಿರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮಂಗಳೂರು, ಪುತ್ತೂರು ಸಹಿತ ಕರ್ನಾಟಕದ ನಾನಾ ಭಾಗಗಳಿಗೆ ಬರುವುದು ಅನಿವಾರ್ಯವಾಗಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದ್ದರೂ ಅದರ ಪ್ರಮಾಣಪತ್ರ ಉಪಯೋಗಕ್ಕಿಲ್ಲದಂತಾಗಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ನೂ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿಲ್ಲ. ಹಾಗೆಂದು ಅವರು ಮಂಗಳೂರಿನ ಶಾಲೆ-ಕಾಲೇಜುಗಳಿಗೆ ಬರಲೇಬೇಕಾಗಿದೆ. ಅದಕ್ಕಾಗಿ ವಿವೇಕಹೀನವಾದ RTPCR ಪರೀಕ್ಷೆಗಾಗಿ ತಲಪಾಡಿ ಗಡಿಯಲ್ಲಿ ಮೈಲುದ್ದ ಕ್ಯೂ ನಿಲ್ಲುವಂತಾಗಿದೆ.


ಈ ದೃಶ್ಯವನ್ನು ಸೆರೆಹಿಡಿದ ನಾಗರಿಕರೊಬ್ಬರು @PMOIndia @BSBommai, @CMofKarnataka @narendramodi, @vijayanpinarayi ಅವರಿಗೆ ಟ್ಯಾಗ್ ಮಾಡಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.  ಬಹುಶಃ ಜನರ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ದಕ ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕಾದೀತೆ ಎಂಬುದು ಎಲ್ಲರ ಕುತೂಹಲದ ನಿರೀಕ್ಷೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم