ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ನಗರದಲ್ಲಿ ಹಾಡಹಗಲೇ ಮಹಿಳೆಯ ಬ್ಯಾಗ್ ಕಸಿದು ಪರಾರಿಯಾದ 'ದುಷ್ಕರ್ಮಿ'ಗಳು; ಕೆಲವೇ ನಿಮಿಷಗಳಲ್ಲಿ 'ಖದೀಮ'ರು ಅರೆಸ್ಟ್

ಮಂಗಳೂರು ನಗರದಲ್ಲಿ ಹಾಡಹಗಲೇ ಮಹಿಳೆಯ ಬ್ಯಾಗ್ ಕಸಿದು ಪರಾರಿಯಾದ 'ದುಷ್ಕರ್ಮಿ'ಗಳು; ಕೆಲವೇ ನಿಮಿಷಗಳಲ್ಲಿ 'ಖದೀಮ'ರು ಅರೆಸ್ಟ್



ಮಂಗಳೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದ ಸದಸ್ಯನೊಬ್ಬ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿರುವ ಮಹಿಳೆಯ ಮೇಲೆ ಹಠಾತ್ತನೆ ಎರಗಿ ಆಕೆಯ ಬ್ಯಾಗನ್ನು ಕಸಿದುಕೊಂಡು 'ಪರಾರಿಯಾದ ಘಟನೆ' ಇಂದು ಬೆಳಗ್ಗೆ ನಗರದ ಸೇಂಟ್‌ ಆಗ್ನೆಸ್‌ ಕಾಲೇಜು ಮುಂಭಾಗದಲ್ಲಿ ನಡೆದಿದೆ.

ಅಲ್ಲಿನ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿದ್ದು, ಸ್ಥಳೀಯ ನಾಗರಿಕರು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದರು. ಕಾರು ನಂಬರ್‌ ಪ್ಲೇಟ್ ಹೊಂದಿರಲಿಲ್ಲ. ಮತ್ತೊಬ್ಬ ನಾಗರಿಕರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಘಟನೆಯ ವಿವರ ತಿಳಿಸಿದರು. ಬಳಿಕ ಕೆಲವೇ ನಿಮಿಷಗಳಲ್ಲಿ ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕರು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಘಟನೆಯ ವಿವರ ಪಡೆದುಕೊಂಡರು. ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಜಾಲ ಬೀಸಲಾಯಿತು.

ಮುಂದೆ ಸಿಗ್ನಲ್‌ ಬಳಿ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ದುಷ್ಕರ್ಮಿಗಳ ಕಾರನ್ನು ತಡೆದು ಒಳಗಿದ್ದವರನ್ನು ವಶಕ್ಕೆ ಪಡೆದುಕೊಂಡರು. ಸುಮಾರು ಅರ್ಧ ಗಂಟೆಯೊಳಗೆ ಇವಿಷ್ಟೂ ಘಟನೆಗಳು ನಡೆದು ಹೋಗಿವೆ.

ಅಷ್ಟರೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವೀಡಿಯೋ ತುಣುಕುಗಳು ವ್ಯಾಪಕವಾಗಿ ಹರಿದಾಡಿ ಮಿಂಚಿನ ಸಂಚಲನವಾಯಿತು.


ಆಗಿದ್ದೇನು?

ಪೊಲೀಸರ ಕಾರ್ಯ ಸನ್ನದ್ಧತೆ, ಸಾರ್ವಜನಿಕರ ಪ್ರತಿಕ್ರಿಯೆ, ಒಟ್ಟಾರೆ ವ್ಯವಸ್ಥೆಯ ಪ್ರತಿಸ್ಪಂದನೆಯನ್ನು ಪರೀಕ್ಷಿಸಲು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಶಶಿಕುಮಾರ್ ಎನ್‌ ಅವರ ನಿರ್ದೇಶನದಂತೆ ನಡೆದ ಅಣಕು ಕಾರ್ಯಾಚರಣೆ ಇದಾಗಿತ್ತು.

ಅಪರಾಹ್ನದ ಬಳಿಕ ಸ್ವತಃ ಪೊಲೀಸ್ ಆಯುಕ್ತರೇ ಈ ಬಗ್ಗೆ ಪ್ರಕಟಣೆ ನೀಡಿ, ವೀಡಿಯೋದ ಮೂಲಕವೂ ವಾಸ್ತವ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸಿದರು.


ಪೊಲೀಸ್ ಆಯುಕ್ತರ ಪ್ರಕಟಣೆಯ ವಿವರ ಇಂತಿದೆ:

ಮಂಗಳೂರು ನಗರ ಪೊಲೀಸ್ ಮತ್ತು ಸ್ವರಕ್ಷಾ ಫಾರ್ ವುಮನ್ ಟ್ರಸ್ಟ್, (ರಿ) ರವರ ಸಹಯೋಗದಲ್ಲಿ ಇಂದು (ಸೆ.12) ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಮಂಗಳೂರು ನಗರದ ಸೇಂಟ್ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡದ ದುಷ್ಕರ್ಮಿಯೊಬ್ಬ ಮಹಿಳೆಯ ಬ್ಯಾಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ, ಮಹಿಳೆಯು ಆತನ ಮೇಲೆ ತಿರುಗಿ ಹಲ್ಲೆ ಮಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕುರಿತು ಅಣುಕು ಕಾರ್ಯಾಚರಣೆಯನ್ನು ನಡೆಸಲಾಯಿತು.


ಈ ಅಣಕು ಕಾರ್ಯಾಚರಣೆಯನ್ನು ಬೆಳಿಗ್ಗೆ ಸುಮಾರು 11-00 ನಿಮಿಷಕ್ಕೆ ನಡೆಸಲಾಯಿತು. ಸ್ಥಳದಲ್ಲಿದ್ದ ನಾಗರಿಕರೊಬ್ಬರು ಇದು ನೈಜ ಘಟನೆ ಎಂದು ಭಾವಿಸಿ ERSS - 112 ಗೆ 11-03 ನಿಮಿಷಕ್ಕೆ ಕರೆ ಮಾಡಿದ್ದು, ERSS -112 ರಕ್ಷಣಾ ವಾಹನವು ಕೂಡಲೇ ತೆರಳಿ 11:08 ನಿಮಿಷಕ್ಕೆ ಸ್ಥಳಕ್ಕೆ ಧಾವಿಸಿದೆ. ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು 11-18 ನಿಮಿಷಕ್ಕೆ ಸ್ಥಳಕ್ಕೆ ಭೇಟಿ ನೀಡಿದರು. ಮೇಲಧಿಕಾರಿಗಳು ಸಹ ಭೇಟಿ ನೀಡಿದ್ದಾರೆ.



ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕಂಟ್ರೋಲ್ ರೂಮ್ ನವರು ನಗರಾದ್ಯಂತ ಚೆಕ್ ಪೋಸ್ಟ್ ಗಳನ್ನು ಅಲರ್ಟ್ ಮಾಡಿದ್ದಲ್ಲದೇ, ಸಂಶಯಾಸ್ಪದ ವಾಹನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾದರು. ಈ ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಹಾಗೂ ಆಗ್ನೆಸ್ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಹಾಗೂ ಪುರುಷ ಪಾದಚಾರಿಯವರು ಈ ಅಣುಕು ದುಷ್ಕರ್ಮಿಗಳ ಹಾಗೂ ಅವರಿದ್ದ ವಾಹನವನ್ನು ತಡೆಯುವ ಮತ್ತು ಗುರುತು ಹಚ್ಚುವಲ್ಲಿ ಹಾಗೂ ಕಾರನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿರುವುದು ಸಹ ಅಭಿನಂದನಾರ್ಹ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್‌ ಹೇಳಿದರು.


ಈ ವಾಹನವನ್ನು ಸಾರ್ವಜನಿಕರು 2 ಮೋಟರ್ ಸೈಕಲ್ ಹಾಗೂ 1 ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಯ ಚಹರೆ ಹಾಗೂ ವಾಹನದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದು, ಮುಂದೆ ಸಿಗ್ನಲ್ ಬಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ದುಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಳ್ಳುವಲ್ಲಿ ಸಹಕರಿಸಿದ್ದಾರೆ.


ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗಿ ಸಾರ್ವಜನಿರೊಬ್ಬರು ತಮ್ಮ ಕಾರನ್ನು ದುಷ್ಕರ್ಮಿಗಳ ಕಾರಿಗೆ ಅಡ್ಡಲಾಗಿ ನಿಲ್ಲಿಸಲು ಪ್ರಯತ್ನಿಸಿದ್ದು ಕೂಡಾ ಅಭಿನಂದನಾರ್ಹವಾಗಿದ್ದು ಅವರನ್ನು ಪತ್ತೆ ಹಚ್ಚಿ ಅವರಿಗೆ ಅಭಿನಂದಿಸಲಾಗುವುದು.


ಒಟ್ಟಿನಲ್ಲಿ ಮಂಗಳೂರು ನಗರದಲ್ಲಿ ಈ ಅಣುಕು ಕಾರ್ಯಾಚರಣೆಯಲ್ಲಿ ದುಷ್ಕರ್ಮಿಗಳು ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದಾಗ, ಮಹಿಳೆಯು ದುಷ್ಕರ್ಮಿಗಳ ಮೇಲೆ ಮರುಹಲ್ಲೆ ನಡೆಸಿ ತನ್ನನ್ನು ಸ್ವರಕ್ಷಣೆ ಮಾಡಿಕೊಳ್ಳುವ ಕಾರ್ಯ ಮಾಡಿದ್ದು, EHSS-112 ಮತ್ತು ಪೊಲೀಸರ ತುರ್ತು ಪ್ರತಿಕ್ರಿಯೆ ಹಾಗೂ ಇಂತಹ ಸಂದರ್ಭದಲ್ಲಿ ಕೃತ್ಯದ ಸ್ಥಳದಲ್ಲಿ ಸಾರ್ವಜನಿಕರಿಂದ ತುರ್ತು ಸಹಾಯದ ಕಾರ್ಯಸನ್ನಡತೆ ಕುರಿತು ಪುನರಾವಲೋಕನ ಯಶಸ್ವಿಯಾಗಿರುವುದು ಸಿಸಿಟಿವಿ ಫೂಟೇಜ್ ಗಳಿಂದ ಧೃಢಪಟ್ಟಿರುತ್ತದೆ.


ಶ್ರೀಮತಿ ಶೋಭಲತಾ ಕಟೀಲ್ ರವರ ಮಾಲಕತ್ವದ ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಅವರ ಸಹಯೋಗದೊಂದಿಗೆ ನಡೆಸಿರುವ ಅಣುಕು ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم