ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಡಿಕೆಶಿ, ಸಚಿನ್ ಪೈಲಟ್ ವಾಗ್ದಾಳಿ

ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಡಿಕೆಶಿ, ಸಚಿನ್ ಪೈಲಟ್ ವಾಗ್ದಾಳಿ

 



ಬೆಂಗಳೂರು: ಕೇಂದ್ರದ ಮಾಜಿ ಸಚಿವ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್. ಶಂಕರ್, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.


ಇದಕ್ಕೂ ಮೊದಲು ಸಚಿನ್ ಪೈಲಟ್ ಅವರನ್ನು ಡಿ.ಕೆ. ಶಿವಕುಮಾರ್ ಅವರು ಸನ್ಮಾನಿಸಿದರು.


ಡಿ.ಕೆ. ಶಿವಕುಮಾರ್ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು


ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿಭಿನ್ನ ಆಡಳಿತ ನಡೆಸುತ್ತಿದೆ. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತಾಗ, ಸಂಸತ್ತಿನಲ್ಲಿ ಯಾರೂ ಸತ್ತಿಲ್ಲ ಎಂದು ಮಾಹಿತಿ ನೀಡುತ್ತದೆ.


ಹೈಕೋರ್ಟ್ ಸಮಿತಿ 36 ಮಂದಿ ಸತ್ತಿದ್ದಾರೆ ಎಂದು ವರದಿ ಕೊಟ್ಟಿತು. ಅದನ್ನು ಸರಕಾರ ಒಪ್ಪಿಕೊಂಡಿತು. ನಂತರ ಸತ್ತವರಿಗೆ 2 ಲಕ್ಷ ರು. ಪರಿಹಾರವನ್ನೂ ಘೋಷಿಸಿತು. ಆದರೆ ಸಂಸತ್ತಿಗೆ ಮಾತ್ರ ಯಾರೂ ಸತ್ತಿಲ್ಲ ಅಂತ ಮಾಹಿತಿ ರವಾನಿಸಿತು ಎಂದು ಡಿಕೆಶಿ ಆರೋಪಿಸಿದರು.


ನಾನು ಸತ್ತವರ ಕುಟುಂಬಕ್ಕೆ ಹೋಗಿ ತಲಾ 1 ಲಕ್ಷ ಪರಿಹಾರ ಕೊಟ್ಟಿದ್ದೇನೆ. ಈ ದುರಂತಕ್ಕೆ ಕಾರಣರಾದ ಯಾವ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅವರನ್ನು ರಾಜಕೀಯ ನಾಯಕರಂತೆ ಬಿಂಬಿಸಿ ಪ್ರಚಾರ ನೀಡಲಾಗುತ್ತಿದೆ. 


ದೇಶಕ್ಕೆ ಲಸಿಕೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಆದರೆ ಅದರಲ್ಲೂ ವ್ಯವಹಾರಕ್ಕೆ ಮುಂದಾದರು. ನಮ್ಮ ಜನರಿಗೆ ಲಸಿಕೆ ನೀಡುವ ಬದಲು ವಿದೇಶಕ್ಕೆ ರವಾನಿಸಿದರು. ನಾವು 100 ಕೋಟಿ ರೂ ಕಾರ್ಯಕ್ರಮ ರೂಪಿಸಿದರೂ ಅನುಮತಿ ನೀಡಲಿಲ್ಲ.


ಈಗ ಪ್ರತಿ ಬಡವನಿಗೆ ಉಚಿತ ಲಸಿಕೆ ನೀಡಲು ಆದ್ಯತೆ ನೀಡುವ ಬದಲು ನೋ ವ್ಯಾಕ್ಸಿನೇಷನ್ ನೋ ರೇಷನ್ ಎಂದು ಹೇಳಿ, ಅವರಲ್ಲಿ ಆತಂಕ ಮೂಡಿಸಿರುವ ಅಧಿಕಾರಿಯನ್ನು ತಕ್ಷಣ ಮುಖ್ಯಮಂತ್ರಿಗಳು ಸೇವೆಯಿಂದ ಸಸ್ಪೆಂಡ್ ಮಾಡಬೇಕು. ಆತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆಗ್ರಹಿಸಿದರು.


*******


ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು


* ಮೋದಿ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ನೀತಿ ವಿರುದ್ಧ ಕಾಂಗ್ರೆಸ್ ಪಕ್ಷ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ.


* ಖಾಸಗಿಕರಣ, ಬಂಡವಾಳ ಹಿಂತೆಗೆತ ಹಾಗೂ ಆಸ್ತಿ ನಗದೀಕರಣದ ಮೂಲಕ ಕೇಂದ್ರ ಸರ್ಕಾರ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರು. ಹಣ ಪಡೆಯಲಿದೆ. 


* ರಸ್ತೆ, ಹೆದ್ದಾರಿ, ಗ್ಯಾಸ್ ಪೈಪ್ ಲೈನ್, ಆಹಾರ ದಾಸ್ತಾನು, ಟೆಲಿಫೋನ್ ಸಂಪರ್ಕ, ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಕ್ರೀಡಾಂಗಣ ಹಾಗೂ ರೈಲ್ವೆಯನ್ನು ಕಳೆದ 6 ದಶಕಗಳಿಂದ ತೆರಿಗೆದಾರರ ಬೆವರಿನ ಹಣದಲ್ಲಿ ನಿರ್ಮಿಸಲಾಗಿದ್ದು, ಇವುಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. 


* ಕೇಂದ್ರ ಸರ್ಕಾರ ಇವುಗಳನ್ನು ಖಾಸಗೀಕರಣ ಮಾಡಿ ಬರುವ ಹಣವನ್ನು ಮೂಲಭೂತ ಸೌಕರ್ಯಗಳಿಗೆ 100 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ.


* 1991ರಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಮಂತ್ರಿಯಾದಾಗ  ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ನಾವು ಸದಾ ಹೂಡಿಕೆ ಪರವಾಗಿದ್ದೆವು.  ಅದೇ ಕಾರಣಕ್ಕೆ ನಮ್ಮ ಆರ್ಥಿಕತೆಗೆ ತಿರುವು ಸಿಕ್ಕಿತ್ತು. ಆಗ ಬಿಜೆಪಿಯ ಸ್ವದೇಶಿ ಜಾಗರಣ್ ಮಂಚ್ ನಂತಹ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈಗ ಅದೇ ಬಿಜೆಪಿ ಸರಕಾರ ಈ  ಸಾರ್ವಜನಿಕ ಸಂಸ್ಥೆಗಳನ್ನು ಪಾರದರ್ಶಕತೆ ಇಲ್ಲದೆ ಖಾಸಗಿ ಅವರಿಗೆ ನೀಡುತ್ತಿದೆ. ಮುಂದಿನ 30 ವರ್ಷಗಳಲ್ಲಿ ಈ ಆಸ್ತಿಗಳ ಮೌಲ್ಯ ಕುಸಿದರೆ, ಭಾರತ ಸರ್ಕಾರ ಹೇಗೆ ಅದನ್ನು ಮರಳಿ ಪಡೆಯಲಿದೆ?


* ಸಾರ್ವಜನಿಕ ವಲಯ ನಿರ್ಮಾಣವಾಗುವಾಗ ಕಡಿಮೆ ಬೆಲೆಗೆ ಜಮೀನು ಖರೀದಿಸಿ, ತೆರಿಗೆದಾರರ ಹಣ ವಿನಿಯೋಗಿಸಲಾಗುತ್ತದೆ. ಇಂದು ಈ ಸಂಸ್ಥೆಗಳನ್ನು ಪಡೆಯುತ್ತಿರುವ ಖಾಸಗಿಯವರು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದಲೇ ಹಣ ಪಡೆದು, ಖರೀದಿ ಮಾಡಿ, ಉದ್ಯೋಗ ಕಡಿತ ಮಾಡಿ, ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಂಡು ಹೋಗುತ್ತಾರೆ.


* ಕಳೆದ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಷ್ಟ ಕಡಿತಗೊಳಿಸಿ, ನಷ್ಟದಲ್ಲಿರುವ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿತ್ತು. 


* ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಗರಿಷ್ಠ ನಿರುದ್ಯೋಗ ಪ್ರಮಾಣ, ಬಡತನ, ಆರ್ಥಿಕ ಕುಸಿತ, ಜಿಡಿಪಿ ಕುಸಿತ ಕಂಡಿದೆ. ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿದ್ದು, ಇದರಲ್ಲಿ ಎಷ್ಟು ಜನ ಪ್ರಯೋಜನ ಪಡೆದಿದ್ದಾರೆ?


* ರಾಹುಲ್ ಗಾಂಧಿ ಅವರು ಬಡವರು ಹಾಗೂ ಮಧ್ಯಮ ವರ್ಗದ ಜನರ ಕೈಗೆ ಹಣ ಸಿಗುವಂತೆ ಮಾಡಿ ಎಂದು ಒತ್ತಾಯಿಸಿದ್ದರು. ಆದರೆ ಅವೆಲ್ಲ ಕೇಂದ್ರ ಸರಕಾರದ ಪ್ಯಾಕೇಜ್ ಕಲ್ಪನೆಗೆ ಸೀಮಿತವಾಯಿತು. ಪರಿಣಾಮ ಸಣ್ಣ ಕೈಗಾರಿಕೆಗಳು ಸೊರಗಿದವು. ಎಲ್ಲ ವಲಯದಲ್ಲೂ ಸರ್ಕಾರ ವಿಫಲವಾಯಿತು.


* ರೈಲ್ವೆ, ಟೆಲಿಕಾಂ, ಗಣಿ ವಲಯಗಳು ತಾಂತ್ರಿಕ ವಲಯಗಳಾಗಿದ್ದು, ಇವುಗಳನ್ನು ಸರ್ಕಾರವೇ ನಡೆಸಬೇಕಿದೆ.  


* ಕೇವಲ ಕಾಂಗ್ರೆಸ್ ಮಾತ್ರವಲ್ಲ, ಸಾಮಾನ್ಯ ಜ್ಞಾನ ಇರುವ ಎಲ್ಲ ಭಾರತೀಯರು ಬಿಜೆಪಿ ಸರ್ಕಾರದ ಆದ್ಯತೆ ಏನು ಎಂದು ಕೇಳುತ್ತಿದ್ದಾರೆ. 


* ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ಇದೇ ಬಿಜೆಪಿಯು ಆರ್ಥಿಕ ಉದಾರೀಕರಣ, ಅಮೆರಿಕ ಜತೆಗಿನ ಅಣ್ವಸ್ತ್ರ ಒಪ್ಪಂದ, ಡಬ್ಲ್ಯುಟಿಒ, ಆಧಾರ್ ಸೇರಿದಂತೆ ಪ್ರತಿಯೊಂದನ್ನು ವಿರೋಧಿಸಿತ್ತು. ಆದರೆ ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.


* ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ದೇಶದ ಜನರ ಮೇಲೆ ಇನ್ನಿಲ್ಲದ ಹೊರೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಈಗ ದೇಸಿ ತುಪ್ಪಕ್ಕಿಂತ ದುಬಾರಿಯಾಗಿದೆ. 


* ಪೆಟ್ರೋಲ್ ಬೆಲೆ 60, 65 ರೂ. ಇದ್ದಾಗ ಬಿಜೆಪಿ ನಾಯಕರ ಹೇಳಿಕೆಗಳು ಹೇಗಿದ್ದವು?


* ಆರ್ಥಿಕತೆಯನ್ನು ಸರಿ ದಾರಿಗೆ ತರುವ ಬದಲು ಕಳೆದ 7 ವರ್ಷಗಳಲ್ಲಿ ನಾವು ಸ್ಮಾರ್ಟ್ ಸಿಟಿ, ಸ್ಟಾರ್ಟ್ ಅಪ್ ಇಂಡಿಯಾ, ಸ್ವಚ್ಛ ಭಾರತ, ಗಂಗಾ ಕಲ್ಯಾಣ ಸೇರಿದಂತೆ 17 ಘೋಷಣೆಗಳನ್ನು ಕೇಳಿದ್ದು, ಎಲ್ಲದರ ಫಲಿತಾಂಶ ಬರೂ ಶೂನ್ಯ.


* ನಿರುದ್ಯೋಗ ಹೆಚ್ಚುತ್ತಿರುವ ಈ ಸಮಯದಲ್ಲಿ ದೇಶದ ಆಸ್ತಿ ಖಾಸಗಿಯವರಿಗೆ ಮಾರುವುದು ಆತಂಕಕಾರಿ ಬೆಳವಣಿಗೆ. ಖಾಸಗಿಯವರು ಬಂದಾಗ ಲಾಭದ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಪ್ರಮಾಣ ಕಡಿತಗೊಳಿಸಲಿದ್ದಾರೆ.  


* ಈ ಸರ್ಕಾರ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದು, ಜನಸಾಮಾನ್ಯ ಇದನ್ನು ತಡೆಯಲು ಸಾಧ್ಯವೇ? 


* ಇವುಗಳು ಬಿಜೆಪಿ ಪಕ್ಷದ ಆಸ್ತಿಯಲ್ಲ, ದೇಶದ ಆಸ್ತಿ. ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ದುರಾದೃಷ್ಟ ಎಂದರೆ ಸರ್ಕಾರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮಾರ್ಕೆಟಿಂಗ್ ಹಾಗೂ ಬ್ರಾಂಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ.


* ಕೇಂದ್ರ ಸರ್ಕಾರ ಲಸಿಕೆಯನ್ನು ಮೂರು ದರಗಳಲ್ಲಿ ಮಾರಲು ಅವಕಾಶ ಕಲ್ಪಿಸಿದ್ದು, ಕಾಳಸಂತೆ ಹಾವಳಿ ಹೆಚ್ಚಾಗಿದೆ. ನಂತರ ಉಚಿತ ಲಸಿಕೆ ಎಂದು ಹೇಳುತ್ತಿದೆ.


* ಕದ್ದಾಲಿಕೆ, ರೈತರ ವಿರುದ್ಧ 3 ಕರಾಳ ಕಾಯ್ದೆ ಮೂಲಕ  ಜನರಿಗೆ ದ್ರೋಹ ಬಗೆಯುತ್ತಿದೆ. ಹರಿಯಾಣದಲ್ಲಿ ಅನ್ನದಾತರ ಮೇಲೆ ದೌರ್ಜನ್ಯ ನಡೆಸುತ್ತಿದೆ.


* ಕೇಂದ್ರ ಸರ್ಕಾರದ ಈ ಜನ ವಿರೋಧಿ ನೀತಿಗಳ ವಿರುದ್ಧ ನಾವು ಹೋರಾಟ ಮಾಡುತ್ತೇವೆ. 


* ದೇಶದ ಆಸ್ತಿ ಮಾರಾಟದಿಂದ ಅದರ ಲಾಭ ಜನ ಸಾಮಾನ್ಯರಿಗೆ ತಲುಪುತ್ತದೆಯೇ ಎಂಬ ಅನುಮಾನ ಮೂಡಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم