ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಅದರಲ್ಲೂ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ವೆಂಕಟೇಶ್ವರ- ರೇವಣ ಸಿದ್ದೇಶ್ವರ- ಚನ್ನಬಸವೇಶ್ವರ- ಜನತಾ- ನಟರಾಜ- ಗಣೇಶ- ಬಸಪ್ಪ ಮಾದೇಶ್ವರ- ಲಕ್ಷ್ಮೀ ನಾರಾಯಣ, ಲಕ್ಷ್ಮೀ ನರಸಿಂಹ, ಮೈಲಾರಲಿಂಗೇಶ್ವರ... ಹೀಗೆ ನಾನಾ ರೀತಿಯ ಹೆಸರುಗಳಿಂದ ಕರೆಯಲ್ಪಡುತ್ತಿದ್ದವು.
ಆಗಿನ ಕಲ್ಲು ಮಣ್ಣುಗಳ ರಸ್ತೆಯಲ್ಲಿ ಟೇಪ್ ರೆಕಾರ್ಡರಲ್ಲಿ ಹಾಡುಗಳನ್ನು ಹಾಕಿಕೊಂಡು ಜೋರಾಗಿ ಹಾರನ್ ಮಾಡುತ್ತಾ ಬರುತ್ತಿದ್ದವು. ಸಾಮಾನ್ಯವಾಗಿ ಡ್ರೈವರ್ ಕಂಡಕ್ಟರ್ ಮತ್ತು ಕ್ಲೀನರ್ ಎಂಬ ಮೂರು ಜನ ಅದರೊಂದಿಗಿರುತ್ತಿದ್ದರು. ಆಗಿನ ಕಾಲಕ್ಕೆ ಅವರಿಗೆ ತುಂಬಾ ಮರ್ಯಾದೆ ಸಿಗುತ್ತಿತ್ತು. ಅವರ ಪರಿಚಯ ನಮಗಿದೆ ಎಂಬುದೇ ಒಂದು ಪ್ರತಿಷ್ಠೆಯಾಗಿತ್ತು.
ಸ್ವಲ್ಪ ದೊಡ್ಡ ಊರಿನ ಮುಖ್ಯ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದವು. ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಲ್ಲದ ಹಳ್ಳಿಗಳಿಂದ ಜನ 5/10 ಮೈಲಿ ನಡೆದು ಬಸ್ ಹಿಡಿಯಲು ಬರುತ್ತಿದ್ದರು. ಅಪ್ಪ ಅಮ್ಮ ಅಜ್ಜ ಅಜ್ಜಿ ಹೆಂಡತಿ ಮಕ್ಕಳೊಂದಿಗೆ ಒಂದಷ್ಟು ತೂಕದ ಲಗ್ಗೇಜುಗಳನ್ನು ನಿರಾಯಾಸವಾಗಿ ಹೊತ್ತು ತರುತ್ತಿದ್ದರು. ಬಸ್ಸಿನ ಸಮಯದ ಒಂದು ಗಂಟೆ ಮೊದಲೇ ಹಾಜರಿರುತ್ತಿದ್ದರು. ಬಸ್ ನಿಲ್ದಾಣದ ಹತ್ತಿರದ ಪರಿಚಿತರ ಮನೆಯಲ್ಲಿಯೋ, ಸಣ್ಣ ಟೀ ಅಂಗಡಿಯಲ್ಲೋ ಕಾಫಿ ಕುಡಿಯುತ್ತಾ ಅಭ್ಯಾಸ ಇದ್ದವರು ಎಲೆ ಅಡಿಕೆ ಜಗಿಯುತ್ತಿದ್ದರೆ ಮತ್ತೆ ಕೆಲವರು ಬೀಡಿ ಸೇದುತ್ತಿದ್ದರು.
ಆಗ ಕೆಲವು ರೂಟಿನಲ್ಲಿ ಒಂದೇ ಬಸ್ಸು ಸಂಚರಿಸುತ್ತಿತ್ತು. ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ 7ಕ್ಕೆ ಹೊರಟು ಅನೇಕ ಊರುಗಳನ್ನು ಸುತ್ತಿ ಮಧ್ಯಾಹ್ನ 2ಕ್ಕೆ ಗುರಿ ತಲುಪಿ ಮತ್ತೆ 3ಕ್ಕೆ ವಾಪಸ್ಸು ಹೊರಟು ರಾತ್ರಿ 9/10 ಗಂಟೆಗೆ ವಿಶ್ರಾಂತ ಸ್ಥಳ ತಲುಪುತ್ತಿದ್ದವು.
ಒಂದು ವೇಳೆ ಬಸ್ಸು ಕೆಟ್ಟು ನಿಂತರೆ ಅಂದಿನ ಇಡೀ ಪ್ರದೇಶದ ಜನರ ಪ್ರಯಾಣ ಮುಂದೂಡಲ್ಪಡುತ್ತಿತ್ತು. ಜನ ತಾಳ್ಮೆಯಿಂದ ಸಹಜವೆಂಬಂತೆ ಸ್ವೀಕರಿಸುತ್ತಿದ್ದರು. ಈಗಿನಂತೆ ಬಸ್ಸು 10 ನಿಮಿಷ ತಡವಾದರೆ ಬಿಪಿ ಹೆಚ್ಚಿಸಿಕೊಂಡು ಅಸಹನೆಯಿಂದ ಕೂಗಾಡುತ್ತಿರಲಿಲ್ಲ. ತುಂಬಾ ಅನಿವಾರ್ಯ ಇರುವವರು ನಡೆದೋ ಎತ್ತಿನ ಗಾಡಿಯಲ್ಲಿಯೋ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
ಬಸ್ಸಿನ ಪ್ರಯಾಣಿಕರಲ್ಲಿಯೂ ಅತ್ಯಂತ ಆತ್ಮೀಯತೆ ಉತ್ಸಾಹ ಇರುತ್ತಿತ್ತು. ಆಗಿನ ಬಡತನದ ಜೀವನದಲ್ಲೂ ಜನರು ಪ್ರಯಾಣವನ್ನು ಸಂಭ್ರಮಿಸುತ್ತಿದ್ದರು. ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಮಳೆ ಬೆಳೆಗಳ ಬಗ್ಗೆ ಚರ್ಚಿಸುತ್ತಿದ್ದರು. ಮಗ/ಮಗಳ ಮದುವೆ ಸಂಬಂಧಗಳ ಬಗ್ಗೆ ಸಂಪರ್ಕ ಏರ್ಪಡಿಸಿಕೊಳ್ಳುತ್ತಿದ್ದರು. ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರೇಮ ಪ್ರಕರಣಗಳು ಸಾಕಷ್ಟು ಇದ್ದವು.
ಸ್ವಲ್ಪ ಆತ್ಮೀಯರಾದ ತಕ್ಷಣ ಮನೆಯಿಂದ ತಂದಿರುವ ಬುತ್ತಿಯನ್ನು ಬಿಚ್ಚಿ ತಿಂಡಿ ಪದಾರ್ಥಗಳನ್ನು ಕೊಡುತ್ತಿದ್ದರು ಅಥವಾ ಪ್ರತಿ ಊರಿನ ನಿಲ್ದಾಣದಲ್ಲಿ ಸ್ಥಳೀಯ ತಿಂಡಿಗಳನ್ನು ಬಸ್ಸಿನ ಕಿಟಕಿಯ ಬಳಿ ಕೂಗಿ ಮಾರುವವರಿಂದ ಕೊಂಡು ಹಂಚಿಕೊಳ್ಳುತ್ತಿದ್ದರು. ಈಗಿನವರಂತೆ ಒಬ್ಬರೇ ನುಂಗುತ್ತಿರಲಿಲ್ಲ.
ಆಗ ಬಸ್ಸಿನ ಪ್ರಯಾಣಿಕರಲ್ಲಿ ಅದರಲ್ಲೂ ಮಹಿಳಾ ಪ್ರಯಾಣಿಕರಲ್ಲಿ ವಾಂತಿ ಮಾಡುವುದು ತುಂಬಾ ಇರುತ್ತಿತ್ತು. ಬಸ್ಸಿನ ಡೀಸೆಲ್ ವಾಸನೆ ಅಥವಾ ರಸ್ತೆಗಳ ಹಳ್ಳಗಳಿಂದ ಉಂಟಾಗುವ ಕುಲುಕುವಿಕೆ ಅಥವಾ ಅಪರೂಪದ ಪ್ರಯಾಣದ ಕಾರಣಕ್ಕಾಗಿ ಆಗುತ್ತಿರಬಹುದು. ಅದಕ್ಕಾಗಿ ಕೆಲವೊಮ್ಮೆ ಬಸ್ಸನ್ನು ನಿಲ್ಲಿಸುತ್ತಿದ್ದರು. ಯಾವ ಪ್ರಯಾಣಿಕರು ಬೇಸರ ಮಾಡಿಕೊಳ್ಳದೆ ಸಹಕರಿಸುತ್ತಿದ್ದರು.
ಮಕ್ಕಳಿಗಂತೂ ಬಸ್ಸಿನ ಪ್ರಯಾಣ ಒಂದು ಕೌತುಕದ ಹಬ್ಬದಂತಿರುತ್ತಿತ್ತು. ಕಿಟಕಿಯ ಬಳಿ ಕುಳಿತುಕೊಳ್ಳಲು ಅಣ್ಣ ತಮ್ಮ ತಂಗಿಯರ ನಡುವೆಯೇ ಜಗಳವಾಗುತ್ತಿತ್ತು. ಆಗ ದೊಡ್ಡವರು ಸಮಾಧಾನ ಮಾಡಿ ಸರದಿಯಂತೆ ಸ್ವಲ್ಪ ದೂರಕ್ಕೆ ಒಬ್ಬರಂತೆ ಜಾಗ ಬದಲಿಸುತ್ತಿದ್ದರು. ವಯಸ್ಸಿನ ಚಿಕ್ಕ ಮಕ್ಕಳಿಗೆ ಮೊದಲ ಆಧ್ಯತೆ ಅಥವಾ ಕೆಲವೊಮ್ಮೆ ಘಾಟಿ ಮಗುವಿಗೆ ಆದ್ಯತೆ.
ಮಕ್ಕಳೂ ಸಹ ಪ್ರಯಾಣದ ಪ್ರತಿ ಕ್ಷಣವನ್ನೂ ಪ್ರತಿ ಗಿಡ ಮರ ಕೆರೆ ಊರು ಮನೆ ಪ್ರಾಣಿಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಾ ಇರುತ್ತಿದ್ದರು. ಈಗಿನವರಂತೆ ಮೊಬೈಲ್ ವಿಡಿಯೋ ಗೇಮ್ ನಲ್ಲಿ ಕಳೆದುಹೋಗುತ್ತಿರಲಿಲ್ಲ. ಬಾಲ್ಯದಲ್ಲಿ ನಾವು ಬಸ್ಸಿನಲ್ಲಿ ಹೋಗಿತ್ತಿದ್ದರೆ ಗಿಡ ಮರಗಳು ಜೋರಾಗಿ ಚಲಿಸಿತ್ತಿದ್ದಂತೆ ಭಾಸವಾಗಿ ಅವೂ ಕೂಡ ನಮ್ಮೊಂದಿಗೆ ಬರುತ್ತಿವೆ ಎಂದು ಸೃಷ್ಟಿಸುತ್ತಿದ್ದ ಭ್ರಮೆ ನೆನಪಾದರೆ ಈಗಲೂ ನಗು ಬರುತ್ತದೆ.
ಇನ್ನೂ ವಿವರಿಸಲು ಸಾಕಷ್ಟು ಅನುಭವಗಳು ಅಂದಿನ ಬಸ್ಸಿನ ಪ್ರಯಾಣದಲ್ಲಿ ಇದೆ. ಕೆಲವು ಮಾತ್ರ ನೆನಪಿನ ಬುತ್ತಿಯಿಂದ ಹಂಚಿಕೊಂಡಿದ್ದೇನೆ. ಇಂದು ಅತ್ಯುತ್ತಮ ಆಧುನಿಕ ಬಸ್ಸುಗಳ ಸೌಕರ್ಯ ಪ್ರತಿ ಹಳ್ಳಿಗಳಿಗೆ ಇದ್ದರು ಜನರ ನಡುವಿನ ಮುಗ್ದತೆ ಮತ್ತು ಆತ್ಮೀಯತೆಯನ್ನು ಮಾತ್ರ ಮಿಸ್ ಮಾಡಿಕೊಂಡಿದ್ದೇವೆ. ಅದು ಪುನಃ ವೃದ್ದಿಯಾಗಲಿ, ಆಕಾಶವೇ ತಲೆಯ ಮೇಲೆ ಬಿದ್ದಂತೆ ಗಂಟು ಮೋರೆಯ ಅಪರಿಚಿತರ ನಡುವಿನ ಅನುಮಾನ ಒಟ್ಟು ವ್ಯವಸ್ಥೆಯಲ್ಲಿ ಮರೆಯಾಗಿ ನಗುವಿನ ವಾತಾವರಣ ನಿರ್ಮಾಣವಾಗಲಿ ಎಂಬ ಆಶಯದೊಂದಿಗೆ.
-ವಿವೇಕಾನಂದ. ಹೆಚ್.ಕೆ.
9844013068
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment