ಜ್ಞಾನ ಮತ್ತು ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಬೇಕು: ರಾಜಶ್ರೀ ನಟ್ಟೋಜ
ಪುತ್ತೂರು: ಸಿಎಯಂತಹ ಪರೀಕ್ಷೆಗಳನ್ನು ತೇರ್ಗಡೆಯಾಗುವುದಕ್ಕೆ ಕಠಿಣ ಪರಿಶ್ರಮದ ಜತೆಗೆ ಜಾಣತನದ ನಡೆಯೂ ಅತ್ಯಂತ ಮುಖ್ಯವಾದದ್ದು. ನಮ್ಮ ಜ್ಞಾನ ಹಾಗೂ ಬುದ್ಧಿಮತ್ತೆಯನ್ನು ಹೆಚ್ಚು ಮಾಡಿಕೊಂಡರೆ ಅಂದುಕೊಂಡ ಗುರಿಯನ್ನು ಸುಲಭಕ್ಕೆ ಸಾಧಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ದೃಢ ಸಂಕಲ್ಪವನ್ನು ಕೈಗೊಂಡು ಮುಂದುವರೆಯಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ಘಟಕದ ಆಶ್ರಯದಲ್ಲಿ ಆರಂಭಿಸಲಾದ ಸಿ.ಎ ಪರೀಕ್ಷಾಕಾಂಕ್ಷಿಗಳ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಇಂದು ದೇಶಕ್ಕೆ ಅಗತ್ಯವಾಗಿರುವ ಸಿಎಗಳ ನಾಲ್ಕನೇ ಒಂದು ಭಾಗದಷ್ಟೂ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುತ್ತಿಲ್ಲ. ಆದರೆ ನಮ್ಮಲ್ಲಿ ಗೆಲ್ಲುವ ಸಾಮಥ್ರ್ಯ ಇದೆ ಎಂದು ನಂಬಿ ಕಾರ್ಯತತ್ಪರರಾಗಬೇಕು. ಜತೆಗೆ ಸಂಸ್ಥೆಯಲ್ಲಿ ದೊರಕುವಂತಹ ಜ್ಞಾನದ ಸಂಪನ್ಮೂಲವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಸಿಎ ಆದವರಿಗೆ ಸಾಕಷ್ಟು ಮಹತ್ವವಿದೆ. ಹಾಗಾಗಿ ಇರುವ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಭವಿಷ್ಯಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ನುಡಿದರು.
ಪ್ರಸ್ತಾವನೆಗೈದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಸಿಎ ಪರೀಕ್ಷೆ ಅನ್ನುವುದು ಇಡಿಯ ರಾಷ್ಟ್ರದ ನೆಲೆಯಲ್ಲಿ ಆಗುವುದರಿಂದ ಅದನ್ನು ತೇರ್ಗಡೆಯಾಗುವದಕ್ಕೆ ಬೌದ್ಧಿಕ ಕೌಶಲ್ಯ ಹಾಗೂ ಮಾನಸಿಕ ಸ್ಥಿರತೆ ಅಗತ್ಯ. ಸಮಯದ ಪರಿಧಿ ಇಲ್ಲದೆ ಪರಿಶ್ರಮವಹಿಸಿ ಅಧ್ಯಯನ ನಡೆಸಿದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬಹುದು. ಶೈಕ್ಷಣಿಕ ವ್ಯವಸ್ಥೆಯಲ್ಲಿ ನೂತನ ಶಿಕ್ಷಣ ನೀತಿಯ ಮುಖೇನ ಕ್ರಿಯಾತ್ಮಕ ಬದಲಾವಣೆಗಳಾಗುತ್ತಿವೆ. ಇದಕ್ಕೆ ಹೊಂದಿಕೊಂಡು ಮುಂದಿನ ಅಧ್ಯಯನವನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ನುಡಿದರು.
ತರಬೇತಿ ತರಗತಿಗಳ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಸಿಎ ಅನೂಷಾ ಮಾತನಾಡಿ ಒಮ್ಮೆ ಗುರಿಯನ್ನು ನಿಗದಿಪಡಿಸಿಕೊಂಡು ಅಧ್ಯಯನಕ್ಕೆ ತೊಡಗಿದ ನಂತರ ಹಿಂದಿರುಗಿ ನೋಡಬಾರದು. ಪ್ರತಿಯೊಬ್ಬರೂ ಬೇರೆ ಬೇರೆ ಶಕ್ತಿ ಸಾಮರ್ಥ್ಯಗಳ ಹಿನ್ನಲೆ ಹೊಂದಿರುವುದರಿಂದ ಹೋಲಿಕೆ ಮಾಡುವುದಕ್ಕೆ ತೊಡಗಬಾರದು. ಬದಲಾಗಿ ಆತ್ಮಸ್ಥೈರ್ಯದಿಂದ ಕಾರ್ಯತತ್ಪರರಾಗಬೇಕು ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಪುತ್ತೂರಿನ ಸಿಎ ಅನೀಶ್ ಮಾತನಾಡಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಫೌಂಡೇಶನ್ ಪರೀಕ್ಷೆಯಲ್ಲಿ ನಲವತ್ತು ಶೇಕಡಾದಷ್ಟು ಮಂದಿ ತೇರ್ಗಡೆಯಾಗುತ್ತಾರಾದರೂ ಅಂತಿಮ ಸುತ್ತಿಗೆ ಬಂದು ಸಿಎ ಆಗುವವರು ಕಡಿಮೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಕೇಂದ್ರೀಕೃತ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿದರು. ತರಬೇತಿ ಮತ್ತು ಉದ್ಯೋಗ ಘಟಕದ ಸಂಯೋಜಕಿ ಅನನ್ಯಾ ವಿ ವಂದಿಸಿದರು. ಗಣಿತಶಾಸ್ತ್ರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment