ಮಂಗಳೂರು: ರಕ್ತದಾನ ಶ್ರೇಷ್ಠದಾನ. ಪ್ರತಿಯೊಬ್ಬರು ವರ್ಷದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಸಿಗುವ ಆತ್ಮತೃಪ್ತಿ, ನೆಮ್ಮದಿ, ಸಂತೋಷ ಇತರ ಯಾವ ದಾನದಿಂದಲೂ ಸಿಗದು. ರಕ್ತದಾನದಿಂದ ಸಿಗುವ ಜೀವ ಉಳಿಸಿದ ಪುಣ್ಯ ಮತ್ತು ಸಾರ್ಥಕತೆಗೆ ಬೆಲೆ ಕಟ್ಟಲಾಗದು. ರಕ್ತದಾನದಿಂದ ಭ್ರಾತೃತ್ವ ವೃದ್ಧಿಸುತ್ತದೆ. ರಕ್ತದ ಅಭಾವ ಇರುವ ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು. ಗೃಹರಕ್ಷಕದಳ ಇತರರಿಗೆ ಮಾದರಿ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇದರ ಕಾರ್ಯದರ್ಶಿ ಡಾ. ಪ್ರಭಾಕರ ಶರ್ಮ ತಿಳಿಸಿದರು.
ನಗರದ ಮೇರಿಹಿಲ್‌ನಲ್ಲಿರುವ ದ.ಕ ಜಿಲ್ಲಾ ಗೃಹರಕ್ಷಕದಳ ಇದರ ಕಛೇರಿಯಲ್ಲಿ ಇಂದು (ಸೆ.19) ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತನಿಧಿ ವೆನ್ಲಾಕ್ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಹಾಗೂ ಲಿಯೋ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ದ.ಕ ಜಿಲ್ಲಾ ಗೃಹರಕ್ಷಕದಳ ಹಾಗೂ ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ಆಶ್ರಯದಲ್ಲಿ ಈ ರಕ್ತದಾನ ಶಿಬಿರ ಜರಗಿತು.
ಲಯನ್ಸ್ ಕ್ಲಬ್ ಮಂಗಳೂರು ಇದರ ಉಪಾದ್ಯಕ್ಷ ಶ್ರೀ ಗುರುಪ್ರೀತ್ ಆಳ್ವಾ ಮಾತನಾಡಿ, ನಿರಂತರ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆ ಆಗದಂತೆ ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಗೃಹರಕ್ಷಕರು ತಮ್ಮ ಇತರ ಕೆಲಸದ ಜೊತೆಗೆ ರಕ್ತದಾನ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ದ.ಕ ಜಿಲ್ಲಾ ಸಮಾದೇಷ್ಠರಾದ ಡಾ.ಮುರಳಿಮೋಹನ್ ಚೂಂತಾರು ಮಾತನಾಡಿ, ಗೃಹರಕ್ಷಕರು ನಿರಂತರವಾಗಿ ರಕ್ತದಾನ ಮಾಡುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದಾರೆ. ಗೃಹರಕ್ಷಕ ಇಲಾಖೆಯಿಂದ ಪ್ರತಿವರ್ಷ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು ಗೃಹರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದ ಮೂಲವಾಗಿರುವುದು ಸಂತಸದ ವಿಚಾರ ಎಂದು ನುಡಿದರು.
ಈ ಸಂದರ್ಭದಲ್ಲಿ ಶಕ್ತಿನಗರದ ಶ್ರೀ ರೋನಾಲ್ಡ್ ಟೋನಿ ಪಿಂಟೊ ಅವರು 62ನೇ ಬಾರಿ ರಕ್ತದಾನ ಮಾಡಿದರು. ಅವರನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು. ಗೃಹರಕ್ಷಕಿ ರೇವತಿ 20ನೇ ಬಾರಿ ರಕ್ತದಾನ ಮಾಡಿದರು. ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಲಿಯೋ ಕ್ಲಬ್ ಮಂಗಳೂರು ಇದರ ಅದ್ಯಕ್ಷರಾದ ಲಿಯಾನ್ ಅಕ್ಪಿನಾಸ್ ಸದಸ್ಯರಾದ ಕ್ರಿಸ್ಟನ್ ಹ್ಯಾರಿ, ರಿಯಾನ್ ಪಿಂಟೋ, ಓಂಪ್ರಕಾಶ್, ಅಲನ್ ಮಸ್ಕರೇನಸ್, ಅಂಡ್ರಿಯೋ ಹ್ಯಾರಿ, ರೋಲಾನ್ ರೊಡ್ರಿಗಸ್, ಲಿಷಲ್ ಅಕ್ವಿನಾಸ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ಸದಸ್ಯರಾದ ಶ್ರೀಮತಿ ಹೇಮಾ ರಾವ್, ರಾಜೇಶ್ ವಿಕ್ಟರ್ ಹ್ಯಾರಿ, ನಾನ್ಸಿ ಮಸ್ಕರೇನಸ್, ನಿರ್ಮಲಾ ಹ್ಯಾರಿ, ಪ್ರೀತಿ ರೋಡ್ರಿಗಸ್ ಮುಂತಾದವರು ಉಪಸ್ಥಿತರಿದ್ದರು.
ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಸುರತ್ಕಲ್ ಘಟಕಾಧಿಕಾರಿ ರಮೇಶ್, ಕಡಬ ಘಟಕಾಧಿಕಾರಿ ತಿರ್ಥೇಶ್ ಕಡಬ, ಗೃಹರಕ್ಷಕರಾದ ಸುನಿಲ್, ದಿವಾಕರ್, ದುಷ್ಯಂತ್, ರೇಷ್ಮ, ತ್ಯಾಗವಲ್ಲಿ ಮುಂತಾದವರು ರಕ್ತದಾನ ಮಾಡಿದರು. ಸುಮಾರು 25 ಮಂದಿ ಗೃಹರಕ್ಷಕ-ರಕ್ಷಕಿಯರು ಈ ಸಮಯದಲ್ಲಿ ರಕ್ತದಾನ ಮಾಡಿದರು. ಕಲ್ಬುರ್ಗಿ ಜಿಲ್ಲೆಯ ಸಮಾದೇಷ್ಠರಾದ ಸಂತೋಷ್ ಪಾಟೀಲ್, ವೆನ್ಲಾಕ್ ಆಸ್ಪತ್ರೆಯ ಡಾ. ಅರವಿಂದ್ ರಕ್ತನಿಧಿ ಉಸ್ತುವಾರಿಗಳಾದ ಆಂಟೋನಿ ಹಾಗೂ ಅಶೋಕ್, ರಕ್ತನಿಧಿ ಆಪ್ತ ಸಮಾಲೋಚಕರಾದ ಶ್ರೀಲತಾ ಹಾಗೂ ರಕ್ತನಿಧಿ ತಾಂತ್ರಿಕ ಅಧಿಕಾರಿಗಳು ಹಾಗೂ ಶುಶ್ರೂಷಕ ಅಧಿಕಾರಿಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment