ಗೃಹರಕ್ಷಕರಿಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮಂಗಳೂರು ಘಟಕದ ಎಲ್ಲಾ ಗೃಹರಕ್ಷಕರು ಮತ್ತು ಗೃಹರಕ್ಷಕಿಯರಿಗೆ ಉಚಿತ ಮಧುಮೇಹ ಮತ್ತು ಉಚಿತ ರಕ್ತದೊತ್ತಡ ತಪಾಸಣೆ ಶಿಬಿರ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರ ಮೇರಿಹಿಲ್‍ನಲ್ಲಿರುವ ಗೃಹರಕ್ಷಕದಳದ ಕಛೇರಿಯಲ್ಲಿ ಗುರುವಾರ (ಸೆ.16) ಜರುಗಿತು.
ಕೇಂದ್ರ ಸರಕಾರದ ಪರಿಕಲ್ಪನೆಯಾದ ‘ಆಜಾದೀ ಕೀ ಅಮೃತ ಮಹೋತ್ಸವ’ ಇದರ ಸಂಭ್ರಮಾಚರಣೆಯ ಅಂಗವಾಗಿ ಯೇನಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಯೋನಪೋಯ ಆಯುರ್ವೇದಿಕ್ ಕಾಲೇಜು, ನರಿಂಗಾನ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇದರ ವೈದ್ಯರ ಸಹಕಾರದೊಂದಿಗೆ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಹಾಗೂ ಲಿಯೋ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಈ ಶಿಬಿರ ಜರುಗಿತು.
ಈ ಶಿಬಿರವನ್ನು ಯೆನಪೋಯಾ ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಡಾ|| ಜೆನಿಕಾ ಡಿ’ಸೋಜ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲಯನ್ ಬಿ. ಸತೀಶ ರೈ ಅವರು ಜಂಟಿಯಾಗಿ ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಡಾ|| ಜೆನಿಕಾ ಡಿ’ಸೋಜ ಅವರು ಕೇಂದ್ರ ಸರಕಾರದ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೌಲಭ್ಯ ಮನೆ ಮನೆಗೆ ಸಿಗುವಂತಾಗಬೇಕು. ಹಾಗಾದಲ್ಲಿ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಪಡೆಯಲು ಆರೋಗ್ಯವೇ ಮೂಲಮಂತ್ರವಾಗಿರುತ್ತದೆ. ಆರೋಗ್ಯ ಸರಿಯಿಲ್ಲದಿದ್ದರೆ ಯಾವ ಸಾಧನೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಲಯನ್ ಸತೀಶ್ ರೈ ಮಾತನಾಡಿ ಲಯನ್ ಸೇವಾ ಸಂಸ್ಥೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಗೃಹರಕ್ಷಕರ ಆರೋಗ್ಯ ಕಾಪಾಡುವ ಕೆಲಸಕ್ಕೆ ಕಟಿಬದ್ಧವಾಗಿದೆ. ಗೃಹರಕ್ಷಕರ ಎಲ್ಲಾ ಕೆಲಸಕಾರ್ಯಗಳು ಲಯನ್ ಸೇವಾ ಸಂಸ್ಥೆ ಬೆನ್ನೆಲುಬಾಗಿ ಸದಾ ನೆರವಾಗುತ್ತದೆ ಎಂದು ನುಡಿದರು.
ಯೆನಪೋಯಾ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಡಾ|| ಅಜಯ್ ಭಟ್ ಮಾತನಾಡಿ ಆಯುರ್ವೇದದಲ್ಲಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರವಿದೆ, ಮಧುಮೇಹ,ಅಧಿಕ ರಕ್ತದೊತ್ತಡ, ಗಂಟುನೋವು, ಆರ್ಥೈಟಿಸ್ ಮುಂತಾದ ರೋಗಗಳಿಗೆ ಪರಿಪೂರ್ಣ ಚಿಕಿತ್ಸೆ ಆಯುರ್ವೇದದಿಂದ ಸಾಧ್ಯ ಎಂದರು. ಯೇನಪೋಯಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವಿದ್ದು, ಎಲ್ಲರೂ ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಅವರು ಮಾತನಾಡಿ, ಗೃಹರಕ್ಷಕ ದಳದ ಸದಸ್ಯರಿಗೆ ವಾರ್ಷಿಕವಾಗಿ ಮಧುಮೇಹ ತಪಾಸಣೆ ಮತ್ತು ರಕ್ತದೊತ್ತಡ ನಿರಂತರವಾಗಿ ನಡೆಸಲಾಗುತ್ತದೆ. ಈ ಎರಡೂ ರೋಗಗಳು ಜೀವನಶೈಲಿಗೆ ಸಂಬಂಧಪಟ್ಟ ರೋಗವಾಗಿದ್ದು, ಬಹಳ ಸುಲಭವಾಗಿ ತಡೆಗಟ್ಟಬಹುದಾಗಿದೆ. ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆ ಮಾಡಿ ರೋಗ ಬರದಂತೆ ಮಾಡುವುದೇ ಜಾಣತನವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಪರ್ಯಾಸವೆಂದರೆ ಹೆಚ್ಚಿನ ಜನರಿಗೆ ತಮಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇದೆ ಎಂಬುದರ ಅರಿವೇ ಇರುವುದಿಲ್ಲ. ಅದರ ಅರಿವಾದಾಗ ಕಾಲ ಮಿಂಚಿ ಹೋಗಿರುತ್ತದೆ. ಈ ನಿಟ್ಟಿನಲ್ಲಿ 40 ವರ್ಷದ ಬಳಿಕ ವರ್ಷದಲ್ಲಿ ಒಮ್ಮೆಯಾದರೂ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಅತೀ ಅವಶ್ಯಕ ಎಂದು ನುಡಿದರು.
ಈ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಸುಪ್ರೀತಾ ಶೆಟ್ಟಿ, ಉಪಾಧ್ಯಕ್ಷ ಲಯನ್ ಶ್ರೀ ಗುರುಪ್ರಸಾದ್ ಆಳ್ವ,, ಲಯನ್ ಶೀನಪೂಜಾರಿ, ಲಯನ್ ರಿಚರ್ಡ್ ಲೋಬೋ, ಲಯನ್ ರವಿಶಂಕರ್ ರೈ, ಲಯನ್ ಹೇಮಾ ರಾವ್ ಉಪಸ್ಥಿತರಿದ್ದರು.
ಶಿಬಿರ ನಡೆಸುವಲ್ಲಿ ಯೇನಪೋಯಾ ಆಯುರ್ವೇದ ಕಾಲೇಜು ಕಾಯ ಚಿಕಿತ್ಸಾ ವಿಭಾಗದ ಡಾ|| ಶಿಲ್ಪಾ ಕೆ. ಮತ್ತು ಡಾ| ಸವಿತಾ ಎ.ಕೆ. ಸಹಕರಿಸಿದರು. ಬೆಳಗ್ಗೆ 7.00 ರಿಂದ ಅಪರಾಹ್ನ 12.00 ಗಂಟೆಗಳ ವರೆಗೆ ಈ ಶಿಬಿರ ಜರುಗಿತು. ಮಂಗಳೂರು ಘಟಕದ ಸುಮಾರು 101 ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ಈ ಶಿಬಿರದ ಪ್ರಯೋಜನ ಪಡೆದರು. ಇದೇ ಸಂದರ್ಭದಲ್ಲಿ ಎಲ್ಲಾ ಗೃಹರಕ್ಷಕರಿಗೆ ಉಚಿತ ಔಷಧಿ ನೀಡಲಾಯಿತು ಮತ್ತು ಎಂಸಿಎಫ್ ಕಡೆಯಿಂದ ನೀಡಲಾದ ಸ್ಯಾನಿಟೈಸರ್ ಅನ್ನು ವಿತರಿಸಲಾಯಿತು.
Post a Comment