ಬೆಂಗಳೂರು: ಹೆಲ್ಮೆಟ್‌ನಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆದು ಕೊಲೆ ಮಾಡಿರುವ ಮಹೇಶ್ ಮತ್ತು ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
'ಬಾಲಾಜಿ (49) ವರ್ಷ ಮೃತ ವ್ಯಕ್ತಿ. ಬೆಮೆಲ್ ಬಡಾವಣೆ ನಿವಾಸಿಯಾಗಿರುವ ಇವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲು ಪ್ರದೇಶದವರು' ಎಂದು ಪೊಲೀಸರು ತಿಳಿಸಿದರು.
'ಇವರೆಲ್ಲಾ ಗುರುವಾರ ರಾತ್ರಿ ಬಾರ್‌ವೊಂದರಲ್ಲಿ ವಿಪರೀತ ಕುಡಿದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಅಲ್ಲಿದ್ದವರು ಜಗಳ ಬಿಡಿಸಿ ಎರಡೂ ಕಡೆಯವರನ್ನು ಹೊರಗೆ ಕಳಿಸಿದ್ದರು.
ಮಳೆ ಸುರಿಯುತ್ತಿದ್ದ ಕಾರಣ ಬಾಲಾಜಿ ಅವರು ಬಾರ್‌ನಿಂದ ಸ್ಪಲ್ಪ ದೂರ ಹೋಗಿ ನಿಂತಿದ್ದರು. ಅಲ್ಲಿಗೆ ಹೋಗಿದ್ದ ಮಹೇಶ್ ಮತ್ತು ನಾಗರಾಜ್ ಮತ್ತೆ ಜಗಳ ತೆಗೆದಿದ್ದರು.
ಮಾತಿಗೆ ಮಾತು ಬೆಳೆದಿತ್ತು. ಸಿಟ್ಟಿಗೆದ್ದ ಮಹೇಶ್ ಹೆಲ್ಮೆಟ್‌ನಿಂದ ಬಾಲಾಜಿ ತಲೆಗೆ ಬಲವಾಗಿ ಹೊಡೆದಿದ್ದರು.
ಪ್ರಜ್ಞೆ ತಪ್ಪಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟು ಹೊತ್ತಿಗಾಗಲೇ ಅವರ ಉಸಿರು ನಿಂತಿತ್ತು' ಎಂದು ತಿಳಿಸಿದರು.
Post a Comment