ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ; ಕೇರಳ, ಕರ್ನಾಟಕಗಳ ನಿರ್ಲಕ್ಷ್ಯದಿಂದ ಎದ್ದಿದೆ ಈ ಕೂಗು

ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ; ಕೇರಳ, ಕರ್ನಾಟಕಗಳ ನಿರ್ಲಕ್ಷ್ಯದಿಂದ ಎದ್ದಿದೆ ಈ ಕೂಗು



ಗಡಿನಾಡು ಕಾಸರಗೋಡು ಕೇರಳದ ಪಾಲಾದ ದಿನದಿಂದಲೂ ಅತಂತ್ರವಾಗಿದ್ದು, ಇಲ್ಲಿನ ಜನರ ಪೈಕಿ ಬಹುಸಂಖ್ಯಾತ ಕನ್ನಡಿಗರಿದ್ದರೂ ಕರ್ನಾಟಕಕ್ಕೆ ಬೇಡದವರಾಗಿದ್ದಾರೆ. ಅಂತೆಯೇ ಕೇರಳಕ್ಕೆ ಕನ್ನಡಿಗರೆಂಬ ಕಾರಣಕ್ಕೇ ಬೇಡದವರಾಗಿದ್ದಾರೆ. ಹಾಗಿದ್ದರೂ ಇಲ್ಲಿನ ಕನ್ನಡಿಗರು ಅಷ್ಟೇ ಅಲ್ಲ, ಇತರ ಭಾಷಿಕರೂ ಸಹ ತಮ್ಮ ದೈನಂದಿನ ವ್ಯವಹಾರಗಳಿಗೆ, ಶಿಕ್ಷಣ, ಆರೋಗ್ಯ ಸೌಲಭ್ಯ ಹಾಗೂ ಜೀವನಾಧಾರಕ್ಕೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ.


ಕಳೆದ ಒಂದೂವರೆ ವರ್ಷದಿಂದ ದೇಶವನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಉಂಟಾದ ನಿರ್ಬಂಧಗಳು ವಿಶೇಷವಾಗಿ ಕಾಸರಗೋಡಿನ ಜನರ ಜೀವನವನ್ನೇ ಬುಡಮೇಲಾಗಿಸಿದೆ. ಪದೇ ಪದೇ ಗಡಿಯಲ್ಲಿ ಹೇರುವ ನಿರ್ಬಂಧಗಳಿಂದ ಇಲ್ಲಿನ ಜನರು ಕಂಗೆಟ್ಟಿದ್ದಾರೆ.


ಈ ಎಲ್ಲ ಸಂಕಟಗಳಿಂದ ಮುಕ್ತಿ ಪಡೆಯಬೇಕಾದರೆ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿಸಿ ಕೇರಳದಿಂದ ಮುಕ್ತಿ ಕೊಡಿಸಬೇಕು ಎಂಬ ಚಿಂತನೆ ಮೊಳತಿದೆ. ಕೇಂದ್ರ ಸರಕಾರದ ನೇರ ಅಧೀನದಲ್ಲಿ ಇದ್ದರೆ ಈ ಪ್ರದೇಶ ಉತ್ತಮವಾಗಿ ಅಭಿವೃದ್ಧಿ ಹೊಂದಬಹುದೆಂಬ ಆಶಯ ಇಲ್ಲಿನ ಜನರದು.


ಈ ಹಿನ್ನೆಲೆಯಲ್ಲಿ ಕಾಸರಗೋಡಿನ ನಾಗರಿಕರೊಬ್ಬರು ದಕ್ಷಿಣ ಕನ್ನಡದ ಸಂಸದ ಹಾಗೂ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಗೆ ಬಹಿರಂಗ ಪತ್ರ ಬರೆದು, ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿಸುವಲ್ಲಿ ಶ್ರಮಿಸುವಂತೆ ಮನವಿ ಮಾಡಿದ್ದಾರೆ.


ಅವರ ಪತ್ರದ ಪೂರ್ಣಪಾಠ ಇಂತಿದೆ: 


ತಾವು ಹಾಗೂ ತಮ್ಮ ಕರ್ನಾಟಕದ ಸಹೋದ್ಯೋಗಿಗಳು ಕೇರಳದಲ್ಲಿ ನಡೆದ ಕಳೆದ  ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಕಾಸರಗೋಡು ಜಿಲ್ಲೆಯಲ್ಲಿ ಪಕ್ಷದ ಯಶಸ್ಸಿಗಾಗಿ ಅಹರ್ನಿಶಿ ದುಡಿದಿದ್ದೀರಿ. ಅದಕ್ಕಾಗಿ ನಮ್ಮ ಪಕ್ಷದ ಅಭಿಮಾನಿಯಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು.


ತಮಗೆ ತಿಳಿದಿರುವಂತೆ, ಭಾಷಾವಾರು ರಾಜ್ಯಗಳ ವಿಂಗಡಣೆಯಾದ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯನ್ನು ಕೇರಳಕ್ಕೆ ಸೇರಿಸಿದ್ದರಿಂದಾಗಿ ಇಲ್ಲಿಯ ನಾಗರಿಕರಿಗೆ ಅದರಲ್ಲಿಯೂ ಮುಖ್ಯವಾಗಿ ಕನ್ನಡಿಗರಿಗೆ ತುಂಬಾ ಅನ್ಯಾಯವಾಗಿದೆ.  


ಕೇರಳದ ಮಾತೃ ಭಾಷೆ ಮಳಯಾಳಂ. ಆದ್ದರಿಂದ ಇಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಭಾಷಾವಾರು ವಿಂಗಡಣೆಯಾದ ಮೇಲೆ ಇಲ್ಲಿಯ ಕನ್ನಡಿಗರ ಮೇಲೆ ಭಾಷಾ ವೈಷಮ್ಯದ ದ್ವೇಷ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಇದು ಅಸಹನೀಯವಾಗಿದ್ದು ಈಗ ಕನ್ನಡಿಗರು ಅತಂತ್ರರಾಗುತ್ತಿದ್ದಾರೆ.


ಕಾಸರಗೋಡು ಜಿಲ್ಲೆ ಪ್ರಥಮವಾಗಿ ಕೇರಳದ ರಾಜಧಾನಿ ತಿರುವನಂತಪುರಕ್ಕೆ ಭೌಗೋಳಿಕವಾಗಿ ಅನತಿ ದೂರದಲ್ಲಿ ಇದೆ. ನಮ್ಮ ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲ. ಆರೋಗ್ಯಕ್ಕೆ ಸಂಬಂಧ ಪಟ್ಟ ಪ್ರತಿಯೊಂದು ಸಣ್ಣ ಪುಟ್ಟ ವಿಷಯಕ್ಕೂ ನಮ್ಮ ಮಾತೃಭೂಮಿಯಂತಿರುವ ಮಂಗಳೂರಿಗೆ ಬರಬೇಕು. ನಮ್ಮ ತಪ್ಪಿಲ್ಲದಿದ್ದರೂ ನಾವು ಕೇರಳ ರಾಜ್ಯಕ್ಕೆ ಸಂಬಂಧ ಪಟ್ಟ ಕಾರಣದಿಂದಾಗಿ ಈಗಿನ ಕೊರೋನಾ ಸಂದರ್ಭದಲ್ಲಿ ಕರ್ನಾಟಕಕ್ಕೆ ನಾವು ಬರಲಿಕ್ಕೆ ನಿರ್ಬಂಧದಿಂದಾಗಿ ಕಳೆದ ಸುಮಾರು 2 ವರ್ಷಗಳಿಂದ  ಇಲ್ಲಿಯ ನಾಗರಿಕರಾದ ನಮಗೆ ರೌರವ ನರಕದಲ್ಲಿದ್ದ ಅನುಭವವಾಗುತ್ತಿದೆ.


ಕಾಸರಗೋಡು ಜಿಲ್ಲೆ ಇಲ್ಲಿಯ ಆಡಳಿತಾರೂಢ LDF ಹಾಗೂ UDF ಯಾವುದೇ ರಂಗ ಅಧಿಕಾರಕ್ಕೆ ಬಂದರೂ ಧಾರ್ಮಿಕ ಭಾವನೆಯನ್ನು ಕೆರಳಿಸಿ ಚುನಾವಣೆಗಳಲ್ಲಿ ತಮ್ಮ ಮತ ಬ್ಯಾಂಕಗಳನ್ನಾಗಿಸಿಕೊಳ್ಳುತ್ತಿವೆ.ಆದ್ದರಿಂದ ಜಿಲ್ಲೆಯ ಕೇರಳದಲ್ಲಿ ಆಡಳಿತಕ್ಕೆ ಈ ತನಕ ಬಂದಿರುವ ಸರ್ಕಾರಗಳು ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಆಸಕ್ತಿ ವಹಿಸುತ್ತಿಲ್ಲ. ಇವೆಲ್ಲ ಪರಿಸ್ಥಿತಿ ತಮಗೆಲ್ಲ ತಿಳಿದೇ ಇದೆ.


ಕರ್ನಾಟಕದಲ್ಲಿ ಕೂಡ ಬೆಳಗಾವಿ ಹಾಗೂ ಕಾಸರಗೋಡು ಮಹಾಜನ್ ಆಯೋಗದ ಶಿಫಾರಸ್ಸು ಪ್ರಕಾರ ಕರ್ನಾಟಕದ ಭಾಗವೆಂದು ಇದ್ದರೂ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಕುರಿತು ಯಾವುದೇ ಸಕಾರಾತ್ಮಕ ಪ್ರಕ್ರಿಯೆ ಕರ್ನಾಟಕವನ್ನು ಆಳಿದ ರಾಜಕೀಯ ಪಕ್ಷಗಳು ಬೇಕಾಗಿರುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲವೆಂದು ತಮ್ಮ ಗಮನಕ್ಕೆ ತರಲು ಖೇದವೆನಿಸುತ್ತಿದೆ.ಆದರೂ ಇದು ಕಹಿ ಸತ್ಯ.


ಆದ್ದರಿಂದ, ಪ್ರಸಕ್ತ ಸಮಸ್ಯೆಗೆ ಶಾಶ್ವತ ಪರಿಹಾರ ವಾಗಿ ನಮ್ಮ ಕಾಸರಗೋಡು ಜಿಲ್ಲೆ ಕೇಂದ್ರಾಡಳಿತ ಪ್ರದೇಶ ವಾಗಲೇಬೇಕಾಗಿದೆ. ನಮಗೆ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಮಾದರಿಯಲ್ಲಿ ಕೇರಳದಿಂದ ಕಾಸರಗೋಡು ಜಿಲ್ಲೆಯನ್ನು ಬೇರ್ಪಡಿಸಿ ಇದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದರೆ ಕಾಸರಗೋಡು ಜಿಲ್ಲೆಯ ಜನತೆಗೆ ನೆಮ್ಮದಿ ಸಿಕ್ಕೀತು. ಹಾಗೂ ಕರ್ನಾಟಕಕ್ಕೂ ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅಭಿವೃದ್ದಿ ವಿಷಯದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದಂತಾದೀತು.


ದಕ್ಷಿಣ ಕನ್ನಡದ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರಕ್ಕೆ ಈ ಕುರಿತು ಮಾಹಿತಿ ಕೊಟ್ಟು ಕಾಸರಗೋಡು ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರ ಹಿತ ಕಾಪಾಡಬೇಕು.


ಈ ಕುರಿತು ಸಂಸತ್ತಿನಲ್ಲಿ ಹಾಗೂ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಷಾ ಮತ್ತು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಗಮನಕ್ಕೆ ಈ ವಿಷಯ ತಂದು ನಮ್ಮ ಜಿಲ್ಲೆಗೆ ಆಗಿರುವ ಅನ್ಯಾಯಕ್ಕೆ ಶಾಶ್ವತ ಪರಿಹಾರ ಮಾಡಿಕೊಡ ಬೇಕೆಂದು ತಮ್ಮಲ್ಲಿ ಅಕ್ಕರೆಯ ಮನವಿ.


-ಬಿ.ವಿ. ಜಯರಾಂ,

ಕೊಡ್ಲಮೊಗರು, ಮಂಜೇಶ್ವರ- 671323


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post