ಮಂಗಳೂರು: ಒಬ್ಬ ವ್ಯಕ್ತಿಯು ಸಾಮಾಜಿಕ ಜೀವನದಲ್ಲಿ ಮಾಡಿದ ಒಳ್ಳೆಯ ಕೆಲಸಗಳನ್ನು ಸಮಾಜ ಮತ್ತು ಸರಕಾರ ಗುರುತಿಸಿದಾಗ ಮತ್ತಷ್ಟು ಕೆಲಸದಲ್ಲಿ ತೊಡಗಿಸಿಕೊಳ್ಳಲು ಆ ವ್ಯಕ್ತಿಗೆ ಪ್ರೆರೇಪಣೆ ಆಗುತ್ತದೆ. ಸೂಕ್ತ ವ್ಯಕ್ತಿಗೆ ಸಕಾಲದಲ್ಲಿ ಗೌರವ ಮತ್ತು ಮನ್ನಣೆ ದೊರಕಿದಲ್ಲಿ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತದೆ ಹಾಗೂ ಪ್ರಶಸ್ತಿ ಪಡೆದವರ ಮೇಲೆ ಮತ್ತಷ್ಟು ಜವಾಬ್ದಾರಿ ಹೊರಿಸಿದಂತಾಗುತ್ತದೆ. ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಬಳಿಕ ನನ್ನ ಸಾಮಾಜಿಕ ಹೊಣೆಗಾರಿಕೆ, ಬದ್ಧತೆ, ಕಳಕಳಿ ಮತ್ತು ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದು ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ನಗರದ ಪಣಂಬೂರು ಶ್ರೀ ನಂದನೇಶ್ವರ ದೇವಳದ ಆವರಣದಲ್ಲಿ ಪಣಂಬೂರು ಗೃಹರಕ್ಷಕ ದಳದ ವತಿಯಿಂದ 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ವಿಜೇತ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಶ್ರೀ ನಂದನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಅನಂತ ಐತಾಳ್ ಅವರು ಸನ್ಮಾನ ಕಾರ್ಯವನ್ನು ನೆರವೇರಿಸಿದರು. ದೇವಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಮತಿ, ವಾಸುದೇವ, ಗೃಹರಕ್ಷಕದಳದ ಮಾಜಿ ಘಟಕಾಧಿಕಾರಿ ಹರೀಶ್ ಆಚಾರ್, ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ್ ಉಪಸ್ಥಿತರಿದ್ದರು. ಹರೀಶ್ ಆಚಾರ್ ಅವರು ಅಭಿನಂದನಾ ಭಾಷಣ ಮಾಡಿದರು. ಶಿವಪ್ಪ ನಾಯ್ಕ್ ವಂದನಾರ್ಪಣೆ ಮಾಡಿದರು. ಅನಂತ ಐತಾಳ್ ಅವರು ಪದಕ ವಿಜೇತ ಡಾ|| ಚೂಂತಾರು ಅವರಿಗೆ ಫಲಪುಷ್ಪ ನೀಡಿ, ಹಾರ ಹಾಕಿ ಶುಭ ಹಾರೈಸಿದರು.
Post a Comment