ಮಣಿಪಾಲ: ಎಂಜಿಎಂ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ, ಸಾಹಿತಿ, ಪ್ರೊ. ಡಾ. ಉಪ್ಪಂಗಳ ರಾಮ ಭಟ್ ಅವರು ಇಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಕೆಲವು ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚೇತರಿಸಿಕೊಳ್ಳಲಿಲ್ಲ. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಅವರದೇ ಇಚ್ಛೆಯಂತೆ ಅವರ ದೇಹವನ್ನು ಕುಟುಂಬದವರು ಕೆಎಂಸಿಗೆ ದಾನ ಮಾಡಿದ್ದಾರೆ.
ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ತಪ್ಪು ಗ್ರಹಿಕೆಯಿಂದಾಗಿ ನಿನ್ನೆಯೇ (ಸೋಮವಾರ) ಅವರು ನಿಧನರಾದರು ಎಂಬ ತಪ್ಪು ಸುದ್ದಿ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹಲವು ಗಣ್ಯರು, ಸಂಘಸಂಸ್ಥೆಗಳು ಸಂತಾಪವನ್ನೂ ಸೂಚಿಸಿದ್ದರು.
ಉಪಯುಕ್ತ ನ್ಯೂಸ್‌ನಿಂದಲೂ ಈ ಪ್ರಮಾದ ನಡೆದಿತ್ತು. ಅದಕ್ಕಾಗಿ ಉಪಯುಕ್ತ ನ್ಯೂಸ್ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಆದರೆ ವಾಸ್ತವ ವಿಷಯ ಗೊತ್ತಾಗುತ್ತಿದ್ದಂತೆ ಸುದ್ದಿಯನ್ನು ಹಿಂದೆಗೆದುಕೊಳ್ಳಲಾಯಿತು. ನಮ್ಮ ಪ್ರಮಾದಕ್ಕಾಗಿ ಡಾ. ರಾಮ ಭಟ್ಟರ ಕುಟುಂಬ, ಬಂಧುಬಳಗ, ಅಭಿಮಾನಿ ವರ್ಗ ಮತ್ತು ನಮ್ಮ ಓದುಗರಲ್ಲಿ ಕ್ಷಮೆಯಾಚಿಸುತ್ತಿದ್ದೇವೆ.
ಎಂಜಿಎಂ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಹತ್ತು ಹಲವು ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೇೂಕಕ್ಕೆ ನೀಡಿದ ಕೀರ್ತಿ ಉಪ್ಪಂಗಳ ರಾಮ ಭಟ್ಟರಿಗೆ ಸಲ್ಲುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು, ಅನೇಕ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಅವರಿಗೆ ಸಂದ ಪ್ರಶಸ್ತಿ/ ಪುರಸ್ಕಾರಗಳೂ ಅನೇಕ. ಅಕಲಂಕ ಪ್ರತಿಷ್ಠಾನವನ್ನು ಸ್ಥಾಪಿಸಿ, ಪ್ರತಿ ವರ್ಷ ಈ ಪ್ರತಿಷ್ಠಾನದ ಮೂಲಕ ಶ್ರೇಷ್ಠ ಕೃತಿಗಳನ್ನು ಗುರುತಿಸಿ ಕಳೆದ ಅನೇಕ ವರ್ಷಗಳಿಂದ ಅಕಲಂಕ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆಯ ಮೂಲಕ ತಮ್ಮದೇ ಛಾಪನ್ನು ಒತ್ತಿದವರು ಅವರು. ಹಳೆಗನ್ನಡದಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು.
ಕನ್ನಡದ ಹಿರಿಯ ಸಾಹಿತಿ, ಕಸಾಪ ಉಡುಪಿ ತಾಲ್ಲೂಕಿನ ಪೂರ್ವಾಧ್ಯಕ್ಷರು, ಸಾಹಿತ್ಯ, ಸಂಘಟನೆ, ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ಪಂಡಿತ ಪರಂಪರೆಗೆ, ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಇವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿ ಶಿಷ್ಯವರ್ಗದವರನ್ನು ಅಗಲಿದ್ದಾರೆ.
ಅವರು ಹವ್ಯಕ ಸಭಾ- ಉಡುಪಿಯ ಮಾಜಿ ಅಧ್ಯಕ್ಷರೂ ಆಗಿದ್ದರು. ಅವರ ಅಗಲಿಕೆಗೆ ಉಡುಪಿ ಹವ್ಯಕ ಸಭಾ ಸಂತಾಪ ಸೂಚಿಸಿದೆ.
إرسال تعليق