ಮಂಗಳೂರು: ಹಿರಿಯ ಸಾಹಿತಿ, ವೈದ್ಯರು ಹಾಗೂ ಸಮಾಜಸೇವಕರಾಗಿದ್ದ ಡಾ. ಎಂ.ಬಿ. ಮರಕಿಣಿ ಅವರು ಇಂದು (ಆ.18) ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೇಪು ಗ್ರಾಮದ ಮರಕಿಣಿಯಲ್ಲಿ ಜನಿಸಿದ್ದ ಅವರು 1955ರಲ್ಲಿ ಮೈಸೂರಿನ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದರು. ಅನಂತರ ಸ್ವಲ್ಪ ಕಾಲ ಹುಟ್ಟೂರಿನಲ್ಲಿ ವೃತ್ತಿಪರ ವೈದ್ಯರಾಗಿ ಕೆಲಸ ಮಾಡಿದ್ದರು. ಬಳಿಕ ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡಿದರು.
ಅನಂತರ ಪತ್ನಿ ಡಾ. ಸಬಿತಾ ಭಟ್ ಅವರ ಜತೆಗೆ 1972ರಲ್ಲಿ ಕಲಬುರ್ಗಿಯ ಚಿತ್ತಾಪುರದಲ್ಲಿ ಬಡವರಿಗಾಗಿ ಆಸ್ಪತ್ರೆ ಮತ್ತು ಶಾಲೆಯನ್ನು ತೆರೆದಿದ್ದರು. ವಿವಿಧ ಕಡೆಗಳಲ್ಲಿ ಪ್ರವಾಹ ಕಾಣಿಸಿಕೊಂಡಾಗ ಮತ್ತು ಜನತೆ ಸಂಕಷ್ಟಕ್ಕೆ ಸಿಲುಕಿದಾಗ ವೈದ್ಯಕೀಯ ಸೇವೆ ನೀಡಿ ಮಾನವೀಯತೆ ಮೆರೆದಿದ್ದರು.
2004ರಲ್ಲಿ ರಾಜ್ಯ ಸರಕಾರ ಇವರ ಸಾಮಾಜಿಕ ಮತ್ತು ವೈದ್ಯಕೀಯ ಸೇವೆಗಳನ್ನು ಗುರುತಿಸಿ 'ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿತ್ತು. ಅವರು ಹಲವು ಸಾಹಿತ್ಯ ಕೃತಿಗಳನ್ನೂ ರಚಿಸಿದ್ಗರು.
ಅವರ ಪತ್ನಿ ಈ ಹಿಂದೆಯೇ ಮೃತರಾಗಿದ್ದಾರೆ. ಕೆಲ ಸಮಯದಿಂದ ಈಚೆಗೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಡಾ. ಎಂ.ಬಿ ಮರಕಿಣಿಯವರು ಅಮೆರಿಕದಲ್ಲಿ ಮಗಳ ಮನೆಯಲ್ಲಿ ವಾಸವಿದ್ದರು. ಮಗ ನಾರಾಯಣ ಭಟ್ ಮತ್ತು ಮಗಳು ಗೌರಿಯನ್ನು ಅವರು ಅಗಲಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق