ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ ಕಮಲನಾಭನ ಹೃದಯದಲಿ ನಿಂತೋಳೆ ಕಮಲಿನೀ ಕರಮುಗಿವೆ ಬಾ ಅಮ್ಮ ಎಂದು ಮಹಿಳಾ ಮಣಿಗಳೆಲ್ಲರೂ ಶ್ರಾವಣ ಮಾಸದ ಸಂಪತ್ ಶುಕ್ರವಾರವೆಂದೇ ಕರೆಯಲ್ಪಡುವ ದ್ವಿತೀಯ ಭಾರ್ಗವ ವಾಸರದಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ವಾಸ್ತು ಗೃಹವನ್ನು ಶುದ್ಧ ಪಡಿಸಿ ಶುಭ್ರವಸ್ತ್ರ ಧರಿಸಿ ರಂಗವಲ್ಲಿ ಇಟ್ಟು ಸಿಂಗರಿಸಿ ಅಷ್ಟದಲ ಕಮಲದ ಚಿತ್ರ ಬರೆದು ಅಷ್ಟಲಕ್ಷ್ಮಿಯರ ಚಿಂತನೆಗೈಯುತ್ತ ಮಾತೆಯರು ಕಲಶ ಮುಖೇನ ಪೂಜೆ ಇನ್ನು ಕೆಲವರು ವಿಗ್ರಹ, ಚಿತ್ರ, ಫಟ ಇತ್ಯಾದಿ ರೂಪದಲ್ಲಿ ಶ್ರದ್ಧಾ ಭಕ್ತಿಪೂರ್ವಕವಾಗಿ ಮಾತೃ ಸ್ವರೂಪಿಣಿ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡು ವಿವಿಧ ಪರಿಮಳ ಪುಷ್ಪಾದಿ ಫಲ ತಾಂಬೂಲಾದಿಗಳನ್ನು ಅರ್ಪಿಸಿ ಕೇದಗೆ ಹೂವಿನಿಂದ ಸೃಷ್ಟಿ ಕಂಡ ಕುಂಕುಮ, ಹರಿದ್ರ ಅಂದರೆ ಅರಶಿನ ಕೋಡಿನಿಂದ ಸೃಷ್ಟಿಗೊಂಡ ಅರಶಿನವನ್ನು ಅರ್ಚಿಸಿ ಶೋಢಷೋಪಚಾರಗಳ ಮೂಲಕ ಪೂಜಿಸುವುದು ಈ ಹಬ್ಬದ ವಿಶೇಷ.
ಹಾಗಂತ ಗೋಧೂಳಿ ಸಮಯವೂ ವರಮಹಾಲಕ್ಷ್ಮಿ ಪೂಜೆಗೆ ಸೂಕ್ತ. ಆ ಸಮಯದಲ್ಲೂ ಓಂಕಾರ ರೂಪಿಣಿ ಸೃಷ್ಟಿಯಲ್ಲಿರತಕ್ಕಂತಹ ಸೃಷ್ಟಿಸ್ಥಿತಿ ಲಯ ತ್ರಿಶಕ್ತಿಗಳ ಔಪಾಸನೆಗೆ ವಿಶೇಷವಾಗಿರುವ ಜಗದಂಬೆ ಆದಿಮಾಯೆಯನ್ನು ಅಷ್ಟೋತ್ತರ ಶತನಾಮಾವಳಿಯ ಮೂಲಕ ಅರ್ಚಿಸಿ ವಿಷ್ಣು ಪತ್ನಿ ನಮಸ್ತುಭ್ಯಂ ಎ೦ದು ಪ್ರಾರ್ಥಿಸಿದರೆ ಸಕಲ ದಾರಿದ್ರ್ಯವನ್ನು ದೂರ ಮಾಡಿ ಸಕಲ ಸಮೃದ್ಧಿಯ ವರ ಕೊಡುವಳು ವರಮಹಾಲಕ್ಷ್ಮಿ. ಮುತ್ತೈದೆಯರಿಗೆ ಪಂಚ ತಾಂಬೂಲ ಇತ್ಯಾದಿ, ದಂಪತಿಗಳ ಶ್ರೇಯೋಭಿವೃದ್ಧಿಗಾಗಿ ಜೋಡು ಬಾಳೆಹಣ್ಣನ್ನು ದಾನ ಮಾಡಬೇಕು ಎನ್ನುತ್ತಾರೆ ಹಿರಿಯರು.
ಸೌಂದರ್ಯ ಲಹರಿ ಅಲಂಕಾರ ಪ್ರಿಯೆ ಲಕ್ಷ್ಮಿಗೆ ತ್ರಿಮಧುರ, ಗೆಜ್ಜೆ ವಸ್ತ್ರ, ಕೆಂಪು ಅಂಚಿನ ಶ್ವೇತ ವಸ್ತ್ರ, ತುಪ್ಪದ ದೀಪ, ಕಬ್ಬಿನ ಕೋಲು, ದಾಳಿಂಬೆ ಫಲ, ಕಮಲದ ಪುಷ್ಪ ಇತ್ಯಾದಿ ಈಕೆಗೆ ಅತಿಪ್ರಿಯವಂತೆ. ತನ್ನ ಜೊತೆ ಗಣಪತಿ ಹಾಗೂ ಪತಿ ನಾರಾಯಣನಿಗೆ ಪೂಜೆ ಸಲ್ಲಿಸಿದರೆ ಮಾತ್ರ ಭಕ್ತರ ಭಕ್ತಿಗೆ ಸಂಪೂರ್ಣ ಫಲ ವೀವಳು ಮಹಾಲಕ್ಷ್ಮಿ. ಒಂಬತ್ತು ಗಂಟುಗಳುಳ್ಳ ಹದಿನಾರು ಎಳೆದಾರದ ಕಂಕಣ ಪ್ರಸಾದ ರೂಪವಾಗಿ ಕಟ್ಟಿಕೊಂಡವರಿಗೆ ಸದಾರಕ್ಷೆ ನೀಡುತ್ತಾಳಂತೆ ಮಾತೆ.
ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ಎಂಬ ಸರ್ವರಕ್ಷಕ ಮಂತ್ರ ಪಠಿಸಿದರೆ ಆಕೆ ಸದಾ ನಮ್ಮನ್ನು ಪೊರೆಯುತ್ತಾಳೆ. ಒಟ್ಟಾರೆ ಮನೆ ಮನಗಳ ಕಲ್ಮಶಗಳನ್ನು ಹೊಡೆದೋಡಿಸಿ ಶಾಂತಿ ನೆಮ್ಮದಿ ಸಂಪತ್ತನ್ನು ನೆಲೆಗೊಳಿಸುವ ಶ್ರವಣಕ್ಕೆ ಯೋಗ್ಯವಾದ ಶ್ರಾವಣದಲ್ಲಿ ಬರುವ ಲಲಿತೆಯರ ಮೆಚ್ಚಿನ ಹಬ್ಬ ಈ ವರ ಮಹಾಲಕ್ಷ್ಮಿ ಹಬ್ಬ.
-ರಾಜೇಶ್ ಭಟ್ ಪಣಿಯಾಡಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق