ಬಿಸಿಲು ಬೀಳುವ
ಉರಿವ ಪಥದಲಿ
ಮರದ ನೆರಳಿನ ಸೊಂಪಲಿ..
ತಂಪು ತರುವನು
ಇಂಪು ತುಂಬುವ
ಗೆಳೆಯನಾಲದ ಪರಿಯಲಿ ...
ಹರುಷ ದುಗುಡವ
ಹಂಚಿ ಬದುಕಲು
ಬೇಕು ನರನಿಗೆ ಆಪ್ತನು ..
ಎಡವಿ ಬೀಳಲು ..
ಬಾಳ ಹಾದಿಲಿ
ಎತ್ತಿ ನಡೆಸುವ ಮಿತ್ರನು ...
ಏಳು ಬೀಳಲಿ
ಒಂದಿಗಿರುವನು..
ಬಂಧವೆಂದೂ ಮುರಿಯನು..
ಹೊಂದಿ ನಡೆವನು
ಗೆಳೆಯರೊಂದಿಗೆ
ನಮ್ಮ ಪ್ರೀತಿಗೆ ಪಾತ್ರನು ..
ಜಾತಿ, ಲಿಂಗವ
ನೋಡಿ ಸಖ್ಯವ
ಯಾರು ಮಾಡರು ಬಾಳಲಿ..
ಸಿರಿಯು ,ಬಡತನ
ಏನೆ ಇರಲಿ
ನೇಹವಕ್ಷರ ಉಳಿಯಲಿ...
ಕಣ್ಣ ನೀರನು..
ಒರೆಸಿ ಬಿಡುವನು
ಕಷ್ಟ ಕಾಲದಿ ನೆರವನು..
ಇಷ್ಟದಿಂದಲೆ
ಕೊಡುವ ಗೆಳೆಯನು
ದೇವನಂತೆಯೆ ಪೂಜ್ಯನು...
-ಗುಣಾಜೆ ರಾಮಚಂದ್ರ ಭಟ್
Post a Comment