‘ರಕ್ಷಾಬಂಧನ’ ಹಾಗೂ ‘ಉಪಾಕರ್ಮ’ ಈ ಎರಡು ವಿಧದ ಆಚರಣೆಗಳಲ್ಲಿ ಒಂದು 'ಭಾವ’ ಸಂಬಂಧಿಯಾದರೆ ಮತ್ತೊಂದು ‘ಜ್ಞಾನ’ ಶುದ್ಧಿಯನ್ನು ಎಚ್ಚರಿಸುವ ಆಚರಣೆಗಳು. ರಾಖೀ ಕಟ್ಟುವುದು, ಯಜ್ಞೋಪವೀತ ಧರಿಸುವುದು ಇವೆರಡೂ ದಾರ ಅಥವಾ ನೂಲಿನ ನಂಟು ಹೊಂದಿರುವಂತಹದ್ದು. ನೂಲು ಅಥವಾ ದಾರ ಕಟ್ಟುವುದು ಎಂಬ ಕ್ರಿಯೆ ಜೋಡಿಸುವ ಸಾಧನವಾಗಿ, ಬಂಧನದ ಬದ್ಧತೆಯ ಸಂಕೇತವಾಗಿ ಇವೆ, ಎಂದರೆ ತಪ್ಪಾಗಲಾರದು.
'ರಕ್ಷಾಬಂಧನ’:
ನಮ್ಮ ದೇಶದ ಸಂಸ್ಕೃತಿ ನಿರ್ದೇಶಿಸಿದ ಸಹಜೀವನ ವಿಧಾನದ ಹಲವು ಅಂಶಗಳಲ್ಲಿ ಪರಸ್ಪರ ಬಾಂಧವ್ಯವೂ ಒಂದು. ಇದರಿಂದಲೇ ಸೌಹಾರ್ದ, ಸುಖೀ ಸಮಾಜದ ಪರಿಕಲ್ಪನೆಯ ಸಾಕಾರ ಸಾಧ್ಯ. ಅದಕ್ಕೆ ಪೂರಕವಾಗಿ ನಮ್ಮಆಚರಣೆಗಳು, ಮತಾಚಾರಗಳು ರೂಪುಗೊಂಡವು. ಇದರಲ್ಲಿ ಸಮಷ್ಟಿ ಚಿಂತನೆಯ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವ ಉದ್ದೀಪಿಸುವ ಭ್ರಾತೃ- ಭಗಿನಿ ಸಂಬಂಧ ಬೆಸೆಯುವ ರಕ್ಷಾಬಂಧನ, ಭಾವನೆ, ಶುದ್ಧ ಮನಸ್ಥಿತಿಯ ಪ್ರತೀಕವಾಗಿ ರೂಢಿಯಲ್ಲಿದೆ.
ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ, ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ಕಂಕಣಬಂಧದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ ಆಶಯ. ಇದೇ ಪರಿಕಲ್ಪನೆಯು ಸ್ರ್ತೀ-ಪುರುಷರ ನಡುವೆ ಸಾಹೋದರ್ಯದ ಪವಿತ್ರ ಸಂಬಂಧವನ್ನು ಗಾಢವಾಗಿಸುವ ಸಂದರ್ಭವಾಗಿ ರಕ್ಷಾಬಂಧನ ಅಥವಾ ರಾಖೀ ಹಬ್ಬವೆಂದು ವಿಸ್ತೃತ ಅರ್ಥವ್ಯಾಪ್ತಿಯನ್ನು ಪಡೆಯುತ್ತಾ ಹಬ್ಬವಾಗಿ ಸ್ವೀಕರಿಸಲ್ಪಟ್ಟಿರಬಹುದು.
ಸಮಾಜದ ಸ್ರ್ತೀಯರೆಲ್ಲ ತನ್ನ ಅಕ್ಕ-ತಂಗಿಯರು, ಅನಿವಾರ್ಯ ಅಥವಾ ಅಪತ್ಕಾಲದಲ್ಲಿ ಅವರ ಮಾನ-ಪ್ರಾಣಗಳನ್ನು ರಕ್ಷಿಸುವುದು ತನ್ನ ಪರಮ ಕರ್ತವ್ಯ. ಈ ವೇಳೆ ಪ್ರಾಣಾರ್ಪಣೆಯ ಪರಿಸ್ಥಿತಿ ಬಂದರೂ ಅದಕ್ಕೆ ಸಿದ್ಧ ಎಂಬ ಪ್ರತಿಜ್ಞಾ ಸ್ವೀಕಾರದ ಸಂಕೇತವಾಗಿ "ಪವಿತ್ರ ರಕ್ಷಾಬಂಧನ".
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಪರಸ್ಪರ ರಕ್ಷೆ ಕಟ್ಟಿಕೊಳ್ಳುತ್ತಾ ಭಾರತ ಮಾತೆಯ ರಕ್ಷಣೆಗೆ ದೀಕ್ಷಾಬದ್ಧರಾಗುವುದನ್ನು ಕಾಣಬಹುದು.
ಪ್ರತೀ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಾಖೀ ಕಟ್ಟುವ ಮೂಲಕ ಸ್ರ್ತೀಯರು ತಮ್ಮ ಸೋದರರಿಗೆ ‘ನಮ್ಮ ಮಾನ-ಪ್ರಾಣ ಉಳಿಸುವ ಹೊಣೆ ನಿಮ್ಮದು’ ಎಂದು ನೆನಪಿಸುತ್ತಾರೆ, ಉಡುಗೊರೆ ಪಡೆಯುತ್ತಾರೆ.ರಾಖೀ ಕಟ್ಟುವ, ಸಿಹಿ, ತಿನ್ನಿಸಿ, ತಿನ್ನುವ, ಉಡುಗೊರೆ ಪಡೆಯುವ ಈ ಭಾವನಾತ್ಮಕ ಹಬ್ಬವು ದೇಶದಾದ್ಯಂತ ಸಂಭ್ರಮೋಲ್ಲಾಸದಿಂದ ನಡೆಯುತ್ತದೆ.
ಪ್ರತೀ ವರ್ಷ ವೈವಿಧ್ಯಮಯ ರಾಖೀಗಳನ್ನು ಮಾರುಕಟ್ಟೆಗೆ ಬರುತ್ತಿವೆ; ಅಷ್ಟೇ ಅರ್ಥಪೂರ್ಣ- ಪುಲಕೋತ್ಸವಾಗಿ ಆಚರಣೆ ಸಂಪನ್ನಗೊಳ್ಳುತ್ತಿದೆ. ಭಾವಪೂರಕ ಭಾತೃ-ಭಗಿನಿಯರ ನಡುವಿನ ಪವಿತ್ರ ಬಾಂಧವ್ಯವನ್ನು ವರ್ಷಕೊಮ್ಮೆ ನೆನಪಿಸುವ, ಆ ಮೂಲಕ ಮಾನ-ಪ್ರಾಣಗಳ ರಕ್ಷಣೆಯ ಹೊಣೆಗಾರಿಕೆಯನ್ನು ಸೋದರನಿಗೆ ರಾಖೀ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸುತ್ತಾ ಸೂಚ್ಯವಾಗಿ ಹೇಳುವ ಸೋದರಿಯರ ಹಬ್ಬ ‘ರಾಖೀ ಬಂಧನ’.
ಒಡ ಹುಟ್ಟಿದವರೊಂದಿಗೆ ಸಮಾಜದ ಸ್ರ್ತೀಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತ ಶುದ್ಧಿಯ ಜೀವನಕ್ಕೆ ‘ರಾಖೀ ಬಂಧನ’ ಇಂಬು ಕೊಡುತ್ತದೆ.
ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ರ್ತೀಯ ಮಾನ- ಪ್ರಾಣಗಳ ರಕ್ಷಣೆ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ‘ರಾಖೀ ಬಂಧನ’ ಪ್ರತೀ ವರ್ಷ ಆಚರಿಸಲ್ಪಡುತ್ತದೆ.
ರಾಖೀ ಎಷ್ಟು ವೈವಿಧ್ಯದ್ದಾದರೂ ರಂಗುರಂಗಿನದಿದ್ದರೂ ಇದರ ಬಂಧನದ ಪ್ರಕ್ರಿಯೆ ದಾರದ ಮೂಲಕ ತಾನೆ? ಈ ದಾರ ಒಂದು ಕರ್ತವ್ಯಕ್ಕೆ, ಜವಾಬ್ದಾರಿಗೆ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ. ಏಕೆಂದರೆ ವ್ರತ, ಪೂಜೆ, ಮಹೋತ್ಸವ, ಮಹಾಯಾಗ,ಮದುವೆ,ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ‘ಕಂಕಣಬಂಧ’ದೊಂದಿಗೆ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ಸಂಸ್ಕೃತಿಯಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಇದೇ ಪರಿಕಲ್ಪನೆ ಅಣ್ಣ-ತಂಗಿಯರ ಸಂಬಂಧವನ್ನು ಗಾಢಾವಾಗಿ ಬೆಸೆಯುವ ವಿಧಾನದಲ್ಲಿ ಪಡಿಮೂಡಿರಬಹುದು.
ರಾಖೀ ಬಂಧನಕ್ಕೆ ಐತಿಹಾಸಿಕ ಮಹತ್ವವಿದೆ. ಅರಸರುಗಳ ನಡುವಿನ ವೈರವನ್ನು ಮರೆಮಾಚಿದ ಘಟನೆಗಳಿವೆ. ಬಣ್ಣ, ವೈವಿಧ್ಯಗಳಂತೆ ರಾಖೀ ‘ಬಂಧನ’ನದಲ್ಲಿ ಬಾಂಧವ್ಯ ಬೆಸೆಯುವ ಅನನ್ಯ ಸಂತಸವಿದೆ. ಅದು ವರ್ಣಮಯವಾಗಿದೆ. ಧಾರ್ಮಿಕ ವಿಧಿಯು, ದೀಕ್ಷಾ ಬಂಧನವಾಗಿ, ಭ್ರಾತೃ-ಭಗಿನಿಯರ ಬಾಂಧವ್ಯ ಮಧುರವಾಗಿ ರಕ್ಷಾಬಂಧನದಿಂದ ಕ್ಷೋಬೆಗಳಿಲ್ಲದ ಕಲಹ ರಹಿತ, ಶಾಂತಿ ಸಮೃದ್ಧಿಯ ಸಮಾಜವನ್ನು ನಿರೀಕ್ಷಿಸಬಹುದು.
ಉಪಾಕರ್ಮ:
ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣ ಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ. ಋಗ್ವೇದ, ಯಜುರ್ವೇದ, ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಂದು ಸ್ವೀಕಾರ ಇದೆಯಾದರೂ ಉಪಾಕರ್ಮ ವಿಧಿಯ ಉದ್ಧೇಶ ಹಾಗೂ ನಿರ್ವಹಣೆಯ ಬಹುತೇಕ ಸಮಾನವಾಗಿಯೇ ಇದೆ. ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಿಧಿ.
ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಮಾಘ ಮಾಸದಿಂದ ಆರು ತಿಂಗಳು ವ್ಯಾಕರಣ, ಜ್ಯೋತಿಷ ಮುಂತಾದವುಗಳ ಅಧ್ಯಯನ ನಿರತನಾಗಿರುತ್ತಾರೆ. ಶ್ರಾವಣದಿಂದ ಮುಂದಿನ ಆರು ತಿಂಗಳು ವೇದಾಧ್ಯಯನಕ್ಕೆ ಮೀಸಲಿಡುತ್ತಾನೆ (ಪೂರ್ವದಲ್ಲಿ ಋಷಿಗಳು ಆಚರಿಸಿದ್ದು). ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ ವೇದಾಧ್ಯಯನದ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ವಿಧಿ ರೂಢಿಗೆ ಬಂತೆಂದು ಒಂದು ಪಾಠ. ಕೃಷಿ ಸಂಬಂಧಿ ಚಟುವಟಿಕೆಗಾಗಿ ವೇದಗಳ ಅಧ್ಯಯನ- ಅಧ್ಯಾಪನವನ್ನು ಸ್ಥಗಿತಗೊಳಿಸಿ ಮತ್ತೆ ಕೃಷಿ ಕಾರ್ಯ ಮುಗಿದ ಬಳಿಕ ವೇದಾಧ್ಯಯನ ಆರಂಭಕ್ಕೆ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ಎಂಬುದು ಇನ್ನೊಂದು ಪಾಠಾಂತರ.
ಪುಣ್ಯಾಹ, ಸಪ್ತ ಋಷಿಗಳ ಪೂಜೆ, ಬಳಿಕ ಉಪಾಕರ್ಮ ಹೋಮವನ್ನು ದಧಿ ಹಾಗೂ ಸತ್ತು (ಅರಳಿನ ಹುಡಿ)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ. ಪ್ರಧಾನ ಹೋಮದ ಬಳಿಕ ಹೋಮ ದ್ರವ್ಯದ ಶೇಷ ಭಾಗವಾದ ದಧಿ-ಸತ್ತು ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ ,ಬಳಿಕ ಬ್ರಹ್ಮಯಜ್ಞ, ದೇವ, ಋಷಿ,ಆಚಾರ್ಯ, ಪಿತೃತರ್ಪಣ(ಅಧಿಕಾರವಿದ್ದವರು ಮಾತ್ರ) ಕೊಡುವುದು. ಹೀಗೆ ಉತ್ಸರ್ಜನೆಯಿಂದ ಮರಳಿ ಹೊಸದಾಗಿ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ ಈ ಕ್ರಿಯೆ ನಡೆಯುತ್ತದೆ (ಋಗ್ವೇದದ ಕ್ರಮ).
ವೇದ ಶಾಖೆಯನ್ನು ಆಧರಿಸಿ ಪ್ರಧಾನ ಹೋಮಕ್ಕೆ ಮಂತ್ರವನ್ನು ಬಳಸಲಾಗುವುದು. ಇಲ್ಲಿ ಋಷಿ ಪೂಜೆ ಪ್ರಧಾನ. ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು. ಋಷಿ ದ್ರಷ್ಟವಾದ ಮಂತ್ರಗಳ ಅಧ್ಯಯನ-ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಯಾಚನೆಯಾಗಿ ಋಷಿ ಪೂಜೆ.
ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ. ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ ವಿಧಿಯನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ, ಎಳೆಗಳು, ಇವುಗಳಿರುವ ಶಾಸ್ರ್ತಾಧಾರ ಮತ್ತು ಮಂತ್ರಗಳು, ಧಾರ್ಮಿಕ ವಿಧಿಗಳು ಅದ್ಭತ ಪರಿಕಲ್ಪನೆಯವು.
ಉಪಾಕರ್ಮ ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ. ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ, ವಿಶ್ವಕ್ಕೆ ಕೊಡುಗೆಯಾದರೆ ‘ಉಪಾಕರ್ಮ’ ಸಂಕುಚಿತವಾಗದೆ ವಿಶಾಲ ಅರ್ಥವನ್ನು ಪಡೆಯಬಲ್ಲುದು. ಸಿದ್ಧತೆ, ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವ ವಿಧಿ ಮುಂತಾದ ಅರ್ಥ ನಿಷ್ಪತ್ತಿ ಇರುವ ಉಪಾಕರ್ಮವು ಒಂದು ಧಾರ್ಮಿಕ ವಿಧಿಯೂ, ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ಸಂಪ್ರದಾಯವುಳ್ಳ ವರ್ಗಕ್ಕೆ ವಿಶಿಷ್ಟ ಆಚರಣೆ.
-ಕೆ.ಎಲ್.ಕುಂಡಂತಾಯ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment