ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಈ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಭೆ ನಡೆಯಿತು.
ಬಾಲ್ಯವೇ ನಮ್ಮ ಜೀವನದ ಅತ್ಯಂತ ಆನಂದದ ಕ್ಷಣ. ಕೊರೋನಾದ ಈ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿ ಇರುವಾಗ ಆನಂದದ ಕ್ಷಣ ದೊರೆಯುವಂತೆ ಮಾಡಿ ಮಕ್ಕಳಿಗೆ ಹೊಟ್ಟೆ, ಬಟ್ಟೆಯ ಜೊತೆ ಯೋಗ್ಯ ಶಿಕ್ಷಣ, ಸಂಸ್ಕಾರ, ಪ್ರೀತಿ, ಮಾನಸಿಕ ಭದ್ರತೆ, ಮನೆಯಲ್ಲಿ ಕಲಿಕಾ ಪೂರಕ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಉತ್ತಮ ಸಂಸ್ಕಾರ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ, ಮನೆಯಲ್ಲಿ ಒಂದು ಚಿಕ್ಕ ಲೈಬ್ರರಿ ಇರಲಿ. ಸಮಸ್ಯೆ ಬಂದಾಗ ಹೆದರದೆ ಎದುರಿಸಿ, ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಿ ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಯ ಮಕ್ಕಳ ಕ್ಷೇಮಪಾಲನಾ ಅಧಿಕಾರಿ ಬಿ ಸೋಮಶೇಖರ ಶೆಟ್ಟಿ ಯವರು ಅಭಿಪ್ರಾಯಪಟ್ಟರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಡಿ. ವಸಂತ ಭಟ್ ರವರು ಪೋಷಕರು ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಮಕ್ಕಳನ್ನು ಪೋಷಿಸುವಲ್ಲಿ ಮಹತ್ತರವಾದ ಜವಾಬ್ದಾರಿ, ಕಾಳಜಿ ಹೊಂದಬೇಕಾಗುತ್ತದೆ. ಮಕ್ಕಳನ್ನು ದೇವರಂತೆ ಕಾಣಬೇಕು. ಆದಾಗ್ಯೂ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸುವುದು, ತಪ್ಪನ್ನು ಸರಿ ಪಡಿಸುವುದು ಶಿಕ್ಷಕರ ಹಾಗೂ ಮಕ್ಕಳ ಹೆತ್ತವರ ಕರ್ತವ್ಯವಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಪಿ ಸುಬ್ರಹ್ಮಣ್ಯ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಅಧ್ಯಾಪಿಕೆ ಗಿರಿಜ ಹಾಗೂ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೋಷಕರ ಪರವಾಗಿ ಭವ್ಯಾ, ಸುನೀತಾ ಹಾಗೂ ಇತರರು ತಮ್ಮ ಅಭಿಪ್ರಾಯ ಮಂಡಿಸಿದರು. ಮನೋರಮಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪೂರ್ಣಿಮಾ ಜೋಷಿ ಸ್ವಾಗತಿಸಿ ಗಿರಿಜಾ ಕುಮಾರಿ ವಂದಿಸಿದರು.
ಶಿಕ್ಷಕಿ ಶ್ರೀಜಾ ಎ ಹಿಂದಿನ ಶೈಕ್ಷಣಿಕ ವರ್ಷದ ಕಾರ್ಯಗಳ ಬಗ್ಗೆ ಮಾಹಿತಿ, ಸತ್ಯವತಿ ಈ ವರ್ಷದ ಶಾಲಾ ಮಾಹಿತಿ, ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಉಷಾ ಕುಮಾರಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಸರಕಾರದ ಕೊವಿಡ್ ನಿಯಮಾನುಸಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಸ್ಯಾನಿಟೈಸರ್ ಬಳಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೋಷಕರು ಬಹಳ ಉತ್ಸುಕತೆಯಿಂದ ಭಾಗವಹಿಸಿರುವುದು ಇಲ್ಲಿ ಗಮನಾರ್ಹ.
Post a Comment