ಮಂಗಳೂರು: ಬದುಕಿದ್ದೂ ಸತ್ತಂತೆ ಬದುಕುವ ಬದಲು, ಸತ್ತ ಮೇಲೂ ಬದುಕಿ ಸಾರ್ಥಕತೆ ಪಡೆಯಬೇಕಾದಲ್ಲಿ ನಮ್ಮ ದೇಹದ ಅಂಗಾಂಗ ದಾನ ನೀಡಬೇಕು. ಕಣ್ಣಿದ್ದೂ ಕುರುಡರಾಗಿ ಬದುಕುವುದರ ಬದಲು ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿ ನಮ್ಮ ಕಣ್ಣುಗಳು ನಮ್ಮ ನಂತರದ ದಿನಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗದಂತೆ ತಡೆಯೋಣ. ಇತರರ ಬಾಳಿಗೆ ಬೆಳಕು ನೀಡೋಣ ಎಂದು ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.
ಅವರು, ರಾಷ್ಟ್ರೀಯ ಅಂಗಾಂಗ ದಾನಿಗಳ ದಿನದ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಅಂಗಾಂಗ ದಾನಕ್ಕೆ ಸಹಿ ಮಾಡಿದ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಸುಮಾರು 16 ಮಂದಿ ಗೃಹರಕ್ಷಕರು ಹಾಗೂ ಸಿಬ್ಬಂದಿಗಳು ಅಂಗಾಂಗ ದಾನಕ್ಕೆ ಸಹಿ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಅಧಿಕಾರಿ ಡಾ|| ಕಿಶೋರ್ ಕುಮಾರ್ ಇವರ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿ ಮೇರಿಹಿಲ್ ಇಲ್ಲಿ ಈ ಕಾರ್ಯಕ್ರಮ ಜರುಗಿತು.
ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಅಧಿಕಾರಿ ಡಾ|| ಕಿಶೋರ್ ಕುಮಾರ್ ಇವರು ಜೀವ ಅಂಗಾಂಗ ದಾನದ ದಿನದ ಅಂಗವಾಗಿ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಬದುಕಿನಲ್ಲಿ ಅಂಗಾಂಗ ದಾನ ಮಾಡುವುದು ಶ್ರೇಷ್ಠ. ಮನುಷ್ಯ ಸಾಯುವಾಗ ತನ್ನ ಅಂಗಾಂಗಳನ್ನು ದಾನ ಮಾಡಿ ಬೇರೆಯವರಿಗೆ ಜೀವದಾನ ನೀಡಬೇಕು. ಜೀವ ರಕ್ಷಕರಾಗಿ ಸಮಾಜದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲವನ್ನು ಮಾಡಿ, ಪ್ರತಿಯೊಬ್ಬ ಸಾಮಾನ್ಯ ನಾಗರಿಕನಲ್ಲಿ ಅಂಗಾಂಗಗಳ ದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ನುಡಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಡಾ: ಸದಾಶಿವ ಶಾನ್‍ಭೋಗ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇವರು ಮಾತನಾಡಿ ಅಂಗಾಂಗ ದಾನ ಮಾಡುವುದರ ಬಗ್ಗೆ ಹೆಚ್ಚಿನ ಅರಿವನ್ನು ನಮ್ಮ ಕಾರ್ಯಕರ್ತರು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಗೃಹರಕ್ಷಕರು ಪ್ರತಿ ಇಲಾಖೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸಿರುತ್ತಾರೆ, ಈ ಸಂದರ್ಭದಲ್ಲಿ 16 ಗೃಹರಕ್ಷಕರು ಅಂಗಾಂಗ ದಾನವನ್ನು ಮಾಡಲು ಸ್ವ ಇಚ್ಚೆಯಿಂದ ಮುಂದೆ ಬಂದಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೃಹರಕ್ಷರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಬೇಕಾಗಿ ಕರೆ ನೀಡಿದರು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು, ಕಚೇರಿ ಅಧೀಕ್ಷಕರಾದ ರತ್ನಾಕರ್ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಅನಿತಾ.ಟಿ.ಎಸ್ ಮತ್ತು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಾದ ಸುಲೋಚನ, ದಿವಾಕರ್, ಜಯಲಕ್ಷ್ಮಿ ಹಾಗೂ ಇತರೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಾದ ಪ್ರಸಾದ್ ಸುವರ್ಣ, ಬಾಷಾ ಸುನಿಲ್, ವಾರಿಜ, ಮಧುಮತಿ, ಜೀವನ್ ರಾಜ್ ಡಿಸೋಜ, ಶ್ರವಣ್, ಸಮದ್, ಕುಮಾರಸ್ವಾಮಿ, ಅಭಿಷೇಕ್, ಸಂದೇಶ್ ಕುಮಾರ್ ಇವರುಗಳು ಅಂಗದಾನವನ್ನು ಮಾಡಲು ಮುಂದಾದರು.
ಈ ಕಾರ್ಯಕ್ರಮದಲ್ಲಿ ಜೀವನ ಸಾರ್ಥಕತೆ ಇದರ ಸಿಬ್ಬಂದಿಗಳಾದ ಲವೀನ ಹಾಗೂ ಪದ್ಮಾವತಿ ಇವರುಗಳು ಉಪಸ್ಥಿತರಿದ್ದರು. ಹಾಗೂ ರಾಯ್‍ಸ್ಟನ್ ಡಿಸೋಜ, ಮೈಕಲ್ ಫರ್ನಾಂಡೀಸ್ ಇವರುಗಳು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್ ಇವರು ವಂದನಾರ್ಪಣೆ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment