ವಿವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕ್ರೀಡಾ ದಿನಾಚರಣೆ
ಮಂಗಳೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನೋತ್ಸವದ ಅಂಗವಾಗಿ ಆಚರಿಸಲಾಗುವ 'ರಾಷ್ಟ್ರೀಯ ಕ್ರೀಡಾ ದಿನʼವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಕ್ರೀಡಾ ಸಂಘದ ವತಿಯಿಂದ ಶನಿವಾರ ವರ್ಚುವಲ್ ರೂಪದಲ್ಲಿ ಆಚರಿಸಲಾಯಿತು.
ದಿಕ್ಸೂಚಿ ಭಾಷಣ ನೆರವೇರಿಸಿದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ದೈಹಿಕ ನಿರ್ದೇಶಕ ಡಾ. ಕೃಷ್ಣ ಸಿ, ಕ್ರೀಡೆ ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ, ಜವಾಬ್ದಾರಿ ತುಂಬುವ ಒಂದು ಉತ್ಕೃಷ್ಟ ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆ, ಎಂದರು.
ಸಂಪನ್ಮೂಲ ವ್ಯಕ್ತಿ ಮಂಗಳೂರು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಮತ್ತು ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿʼಸೋಜ, ಮೇಜರ್ ಧ್ಯಾನ್ ಚಂದ್ ಸೇರಿದಂತೆ ಭಾರತಕ್ಕೆ ಹೆಮ್ಮೆ ತಂದ ಇತರ ಕ್ರೀಡಾ ತಾರೆಗಳನ್ನು ನೆನಪಿಸಿಕೊಂಡರು. ಕ್ರೀಡೆ ಜನಸಂಖ್ಯೆಯ ಗುಣಮಟ್ಟ ಅಳೆಯುವ ಮಾನದಂಡ. ದೇಹಕ್ಕೆ ಕ್ರೀಡೆ ಅಗತ್ಯ ಎಂಬುದನ್ನು ವಿದ್ಯಾರ್ಥಿಗಳು, ಹೆತ್ತವರು ಅರಿಯಬೇಕು, ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಷ್ಟದಿಂದ ಮೇಲೆದ್ದು ಬಂದ ಧ್ಯಾನ್ ಚಂದ್ ಈಗಿನ ಯುವಜನರಿಗೆ ಮಾದರಿಯಾಗಬೇಕು, ಎಂದರು. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೊಂದಿರುವ ದಿಯಾ ಮತ್ತು ನಚಿಕೇತ್ ಅವರು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಡಾ. ಮನೋಜ್ ಮತ್ತು ಅಶ್ವತ್ ತಮ್ಮ ಅನುಭವ ಹಂಚಿಕೊಂಡರು.
ವಿವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕೇಶವಮೂರ್ತಿ ಕೆ, ಉಪ ನಿರ್ದೇಶಕ ಅಲ್ತಾಫ್ ಸಾಬ್ ಅತಿಥಿಗಳನ್ನು ಪರಿಚಯಿಸಿದರು. ಚೆಲ್ಸಿಯಾ ಕಾರ್ಯಕ್ರಮ ನಿರೂಪಿಸಿದರೆ, ಸುಶ್ರಾವ್ಯ ಪ್ರಾರ್ಥನೆ ಸಲ್ಲಿಸಿ, ಪ್ರಜ್ವಲ್ ಧನ್ಯವಾದ ಸಮರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment