ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ: ಮಹಮ್ಮದ್ ಬಡ್ಡೂರು

ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ: ಮಹಮ್ಮದ್ ಬಡ್ಡೂರು


ಮಂಗಳೂರು: 'ಕ್ರಾಂತಿ ನಮ್ಮಿಂದಲೇ ಆರಂಭವಾಗಬೇಕು. ಆಗ ಅದಕ್ಕಿಂದು ಮೌಲ್ಯ ಬರುತ್ತದೆ. ಸಾಹಿತಿಗಳಿಗೆ ತಮ್ಮ ಕಾವ್ಯವನ್ನು ಹೊರ ಹಾಕುವ ತುಡಿತ ಇದ್ದರೆ ಸಾಲದು ಸಾಹಿತ್ಯದ ಮೂಲ ಆಯಾಮಗಳನ್ನು ಕಲಿಯುವ ಮಿಡಿತಗಳೂ ಇರಬೇಕು. ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ. ಮಾನವೀಯ ಮೌಲ್ಯ ಇರುವ, ಸಾಮಾಜಿಕ ಕಳಕಳಿಯಿರುವ  ಎಲ್ಲಾ ಸಾಹಿತ್ಯಗಳಲ್ಲೂ ಕ್ರಾಂತಿಯ ಕಿಡಿ ಇದ್ದೇ ಇದೆ' ಎಂದು ಹಿರಿಯ ಪಂಚಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ಹೇಳಿದರು.


ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಮತ್ತು ಪಿಂಗಾರ ವಾರಪತ್ರಿಕೆಯ ಸಹಯೋಗದಲ್ಲಿ ಶನಿವಾರ ಮಂಗಳೂರಿನಲ್ಲಿ ಶನಿವಾರ (ಆ.28) ರಾತ್ರಿ ವೆಬಿನಾರ್ ಮೂಲಕ ಏರ್ಪಡಿಸಿದ್ದ ಕ್ರಾಂತಿ ಕವಿಗೋಷ್ಠಿ 'ಕವಿ ಹೃದಯ ಸಂಕ್ರಾಂತಿ'ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


'ಮೆಚ್ಚಿಸಿಕೊಳ್ಳುವಂತಹದ್ದು ಕಾವ್ಯ ಅಲ್ಲ. ಒಳ್ಳೆಯ ಕವಿತೆಗಳು ತನ್ನಿಂದ ತಾನೇ ಪ್ರಚಾರ ಪಡೆದುಕೊಳ್ಳುತ್ತದೆ. ಅವುಗಳಿಗೆ ಜಾಹೀರಾತುಗಳ ಅವಶ್ಯಕತೆ ಇಲ್ಲ ಎಂದ ಅವರು, ಯಾರೂ ಕಲಿತು ಮುಗಿಯುವುದಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಎರಡು ಸಾಲು ಬರೆದು ದೊಡ್ಡ ಸಾಹಿತಿಗಳೆಂದು ಬಿಂಬಿಸಿ ಕೊಳ್ಳುವ ಅನೇಕರಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.


'ಸತ್ಯಕ್ಕೆ ಅಧೀನವಾಗಿ ಬರೆದಾಗ ಕವಿ ಸಂತನಾಗುತ್ತಾನೆ. ಸತ್ಯವನ್ನೇ ಅಧೀನದಲ್ಲಿ ಇಟ್ಟುಕೊಂಡು ಬರೆದವನು ಸೈತಾನನಾಗುತ್ತಾನೆ. ಕಾವ್ಯದ ಸಂಸ್ಕಾರದಿಂದ ಕವಿ ಉನ್ನತಿಯನ್ನೂ ಕಳಪೆ ಯೋಚನೆಗಳಿಂದ ಅವನತಿಯನ್ನೂ ಹೊಂದುತ್ತಾನೆ ಎಂದು ವಿಡಂಬಿಸಿದರು.


'ಕವಿಗಳು ಹೊಗಳು ಭಟರಲ್ಲ, ಪರರ ನಿಂದಕರೂ ಅಲ್ಲ. ಸತ್ಯದ ಹುಡುಕಾಟ ಅವರ ಧರ್ಮ. ಉತ್ತಮ ಸಾಹಿತ್ಯ ಮನವನ್ನು ತಣಿಸುತ್ತದೆ. ಮಧ್ಯಮ ಸಾಹಿತ್ಯ ದೇಹವನ್ನು ಕುಣಿಸುತ್ತದೆ ಹಾಗೆಯೇ ಕೆಟ್ಟ ಸಾಹಿತ್ಯ ಸಾಮಾಜವನ್ನೇ ಕೆಡಿಸುತ್ತದೆ' ಎಂದು ವಿಶ್ಲೇಷಿಸಿದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕ ಭಾಷಣ ಮಾಡಿ 'ಸಾಹಿತ್ಯದ ವಿವಿಧ ಮಗ್ಗಲುಗಳ ಕಲಿಕೆಗೆ ಚುಸಾಪ ನಿರಂತರ ಅವಕಾಶಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡಿಕೊಂಡು ಬಂದಿದೆ. ಇಂತಹ ಕೈಂಕರ್ಯಗಳನ್ನು ನಿಲ್ಲಿಸದೆ ಮುಂದುವರಿಸುತ್ತೇವೆ' ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಕವಿ, ವ್ಯಂಗ್ಯಚಿತ್ರಕಾರ ನಾರಾಯಣ ರೈ ಕುಕ್ಕುವಳ್ಳಿ ಅವರು ಚುಸಾಪ ಮತ್ತು ಸಹಯೋಗ ನೀಡಿದ ಸಂಸ್ಥೆಗಳನ್ನು ಶ್ಲಾಘಿಸಿದರು.


ಚುಸಾಪ ಕಾರ್ಯಕಾರಿ ಸದಸ್ಯ ವಿಘ್ನೇಶ್ ಭಿಡೆ ಅಧ್ಯಕ್ಷರನ್ನು ಪರಿಚಯಿಸಿದರು. ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ನ ಸಂಚಾಲಕಿ ಲತಾ ಕೃಷ್ಣದಾಸ್, ಪಿಂಗಾರ ವಾರಪತ್ರಿಕೆಯ ಸಂಪಾದಕ ರೇಮಂಡ್ ಡಿಕುನಾ ತಾಕೊಡೆ ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಉಪಸ್ಥಿತರಿದ್ದರು.


ಮಂಗಳೂರಿನ ಸತ್ಯವತಿ ಭಟ್ ಕೊಳಚಪ್ಪು, ಆಂಧ್ರಪ್ರದೇಶದ ಅನಂತಪುರದಿಂದ ಸುಧಾ ಎನ್ ತೇಲ್ಕರ್, ಧಾರವಾಡದಿಂದ ಡಾ.ಸುಧಾ ಜೋಶಿ, ನವಿ ಮುಂಬೈಯಿಂದ ಶಾರದಾ ಎ. ಅಂಚನ್, ಮಂಗಳೂರಿನಿಂದ ಡಾ.ನಾರಾಯಣ ಕಾಯರ್ಕಟ್ಟೆ, ರೇಮಂಡ್ ಡಿಕುನಾ ತಾಕೊಡೆ, ರಶ್ಮಿ ಸನಿಲ್, ವಿಜೇಶ್ ದೇವಾಡಿಗ ಮಂಗಳಾದೇವಿ, ಡಾ.ಸುರೇಶ್ ನೆಗಳಗುಳಿ, ಡಾ.ಅರುಣಾ ನಾಗರಾಜ್, ಅರುಂಧತಿ ಎಸ್. ರಾವ್, ಗುಣಾಜೆ ರಾಮಚಂದ್ರ ಭಟ್, ಬೆಳಗಾವಿಯಿಂದ ಆನಂದ ಹಕ್ಕೆನ್ನವರ, ಉತ್ತರ ಕನ್ನಡದ ದಾಂಡೇಲಿಯಿಂದ ದೀಪಾಲಿ ಸಾಮಂತ, ಮಂಗಳೂರಿನಿಂದ ಆಕೃತಿ ಐ ಎಸ್ ಭಟ್, ಕಾಸರಗೋಡಿನಿಂದ ಹಿತೇಶ್ ಕುಮಾರ್ ಎ ನೀರ್ಚಾಲು, ಮಾಣಿಯಿಂದ ಮಾನಸ ವಿಜಯ್ ಕೈಂತಜೆ, ಪೆರ್ಲದಿಂದ ವಿಜಯ ಕಾನ ತಮ್ಮ ಕ್ರಾಂತಿ ಕವಿತೆಗಳನ್ನು ಪ್ರಸ್ತುತ ಪಡಿಸಿದರು.


ರೇಮಂಡ್ ಡಿಕುನಾ ಸ್ವಾಗತಿಸಿದರು. ಹರೀಶ ಸುಲಾಯ ವಂದಿಸಿದರು. ಮಂಗಳೂರು ತಾಲೂಕು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم