ಕನ್ನಡ ಕಾವ್ಯಕಮ್ಮಟ ಸಮಾರೋಪ- ಸಮ್ಮಾನ
ಮಂಗಳೂರು: 'ಕನ್ನಡದ ಕಾವ್ಯ ಪರಂಪರೆಗೆ ಭವ್ಯವಾದ ಇತಿಹಾಸವಿದೆ. ಕ್ರಿ.ಶ.ಏಳನೆಯ ಶತಮಾನದ ಕಪ್ಪೆ ಅರೆಭಟ್ಟನ ಶಾಸನ ದಿಂದ ತೆರೆದುಕೊಂಡ ಕನ್ನಡ ಕಾವ್ಯ ಮಾರ್ಗ ಪಂಪನಿಂದ ತೊಡಗಿ ಆಧುನಿಕ ಕವಿಗಳ ವರೆಗೆ ವಿವಿಧ ಕಾಲ ಘಟ್ಟಗಳಲ್ಲಿ ಅನೇಕ ಶ್ರೇಷ್ಠ ರಚನೆಗಳಿಗೆ ಸಾಕ್ಷಿಯಾಗಿದೆ' ಎಂದು ಕವಿ- ಸಾಹಿತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ ಸೋಮೇಶ್ವರ ಇವರ ಸಹಯೋಗದೊಂದಿಗೆ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಒಂದು ದಿನದ 'ಕನ್ನಡ ಕಾವ್ಯ ಕಮ್ಮಟ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು 'ಕನ್ನಡ ಕಾವ್ಯ ಪರಂಪರೆ' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
'ಕನ್ನಡ ಸಾಹಿತ್ಯ ಸಂದರ್ಭದ ಪ್ರಾಚೀನ ಕಾವ್ಯ, ಭಕ್ತಿ, ನವೋದಯ ಹಾಗೂ ನವ್ಯ ಕಾವ್ಯಗಳ ಪರಂಪರೆಯನ್ನು ಗಮನಿಸಿದಾಗ ಈ ನೆಲದ ಭೌತಿಕ ಸಮೃದ್ಧಿ ಮತ್ತು ಭಾಷೆಯ ಶ್ರೀಮಂತಿಕೆಯ ಪರಿಚಯವಾಗುತ್ತದೆ. ನಮ್ಮ ನಾಡಿನ ಸಂಸ್ಕೃತಿಯ ಪ್ರಸರಣಕ್ಕೆ ಅನನ್ಯ ಕೊಡುಗೆ ನೀಡಿರುವ ಕನ್ನಡ ಕಾವ್ಯಗಳನ್ನು ಮುಂದಿನ ತಲೆಮಾರಿಗೆ ತಲಪಿಸುವ ಮೂಲಕ ಅವುಗಳನ್ನು ಸಂರಕ್ಷಿಸುವ ಕೆಲಸ ಇಂತಹ ಕಮ್ಮಟ- ಕಾರ್ಯಾಗಾರಗಳಿಂದ ಸಾಧ್ಯ' ಎಂದವರು ನುಡಿದರು. ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸಿದ್ದರು.
ಹೊರನಾಡ ಸಾಹಿತಿಗೆ ಸಮ್ಮಾನ:
ಕಾರ್ಯಕ್ರಮದಲ್ಲಿ ಹೊರನಾಡ ಸಾಹಿತಿ, ಕನ್ನಡ ಲೇಖಕಿ ಡಾ. ವಾಣಿ ಉಚ್ಚಿಲ್ಕರ್ ಮುಂಬಯಿ ಅವರನ್ನು ಉಭಯ ಸಂಸ್ಥೆಗಳ ವತಿಯಿಂದ ಶಾಲು, ಸ್ಮರಣಿಕೆ ಮತ್ತು ಬಿನ್ನವತ್ತಳೆ ನೀಡಿ ಸಮ್ಮಾನಿಸಲಾಯ್ತು. ಕವಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.
ಸಮಾರಂಭದ ಮುಖ್ಯ ಅಭ್ಯಾಗತರಾಗಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ಹರೇಕಳ, ಮುಂಬೈ ಕಲಾ ಸೌರಭ ಸಂಸ್ಥೆಯ ನಿರ್ದೇಶಕ ಪದ್ಮನಾಭ ಸಸಿಹಿತ್ಲು, ಹಿರಿಯ ಸಂಗೀತ ಕಲಾವಿದ ಶೇಖರ್ ಸಸಿಹಿತ್ಲು ಶುಭ ಕೋರಿದರು.
ಗೀತ- ಗಾಯನ:
ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಧ್ಯಾನ್,ಸುಹಾಸ್, ಲಿಖಿತ್, ಕು. ಶಿಂಶಾ, ಕು.ಪೂರ್ವಿ ನಾಡಗೀತೆ ಹಾಡಿದರು. ಬಳಿಕ ಜರಗಿದ 'ಗೀತ - ಗಾಯನ' ಕಾರ್ಯಕ್ರಮದಲ್ಲಿ ಗಾಯಕರಾದ ತೋನ್ಸೆ ಪುಷ್ಕಳಕುಮಾರ್, ರವೀಂದ್ರ ಪ್ರಭು ಮತ್ತು ಮಾಲಿನಿ ಕೇಶವ ಪ್ರಸಾದ್ ಸುಗಮ ಸಂಗೀತ ಮತ್ತು ಭಾವಗೀತೆಗಳನ್ನು ಹಾಡಿದರು. ಹಿನ್ನೆಲೆಯಲ್ಲಿ ಸತೀಶ್ ಸುರತ್ಕಲ್, ದೇವರಾಜ ಆಚಾರ್, ನವಗಿರಿ ಗಣೇಶ್, ದೀಪಕ್ ರಾಜ್ ಉಳ್ಳಾಲ್, ಕೀರ್ತನ್ ನಾಯ್ಗ ಭಾಗವಹಿಸಿದರು.
ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರದ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಸುನೀಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ಪೊಸಕುರಲ್ ವಾಹಿನಿಯ ವಿದ್ಯಾಧರ್ ಶೆಟ್ಟಿ ಕಿನ್ಯಾ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment