ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ಡಾ.ಎಚ್.ಮಾಧವ ಭಟ್ ಹಾಗೂ ಬಾಲಕೃಷ್ಣ ಬೋರ್ಕರ್

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ಡಾ.ಎಚ್.ಮಾಧವ ಭಟ್ ಹಾಗೂ ಬಾಲಕೃಷ್ಣ ಬೋರ್ಕರ್


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ ವಿಶ್ರಾಂತ ಪ್ರಾಚಾರ್ಯ ಹಾಗೂ ಶಿಕ್ಷಣ ತಜ್ಞ ಡಾ.ಎಚ್.ಮಾಧವ ಭಟ್ ಹಾಗೂ ಹಿರಿಯ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಧುರೀಣ ಬಾಲಕೃಷ್ಣ ಬೋರ್ಕರ್ ಆಯ್ಕೆಯಾಗಿದ್ದಾರೆ.


ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ಅವರು ನೂತನ ಸದಸ್ಯರನ್ನು ಘೋಷಿಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹಾಗೂ ಇತರ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.


ಡಾ.ಎಚ್.ಮಾಧವ ಭಟ್: ಇವರು ಮೂಲತಃ ಉಡುಪಿಯ ಬ್ರಹ್ಮಾವರದವ ಹಂದಾಡಿಯವರು. ಸುಮಾರು ನಾಲ್ಕು ದಶಕಗಳಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಅಪಾರ ವಿದ್ಯಾರ್ಥಿ ವೃಂದವನ್ನು ಹೊಂದಿದ್ದಾರೆ. ಇಂಗ್ಲಿಷ್ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಾಗೂ ಪ್ರಾಂಶುಪಾಲರಾಗಿ ಮೂರು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಬಹುಬೇಡಿಕೆಯ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕರ ತರಬೇತುದಾರರಾಗಿ ಸರ್ಕಾರದ ನೆಲೆಯಿಂದಲೂ ಗುರುತಿಸಿಕೊಂಡವರು. ಪುತ್ತೂರಿನಲ್ಲಿ ಇಂಗ್ಲಿಷ್ ಐಚ್ಚಿಕವನ್ನು ಪದವಿ ಹಂತದಲ್ಲಿ ಪರಿಚಯಿಸುವಲ್ಲಿ ವಿಶೇಷ ಯೋಗದಾನವನ್ನಿತ್ತು, ಗ್ರಾಮೀಣ ಪರಿಸರದ ವಿದ್ಯಾರ್ಥಿಗಳು ಇಂಗ್ಲಿಷ್ ಎಂ.ಎ ತರಗತಿಗಳಿಗೆ, ಬಿಎಡ್ ವಿಷಯಗಳಿಗೆ ತೆರಳುವಂತೆ ಮಾಡಿದ ಕೀರ್ತಿ ಇವರದು.


ಶಿಕ್ಷಣ ರಂಗದ ಬಗೆಗೆ ಅಪಾರ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿರುವ ಇವರು ‘ಕಲಿಕೆಯಲ್ಲಿ ಸುಖವಿದೆ’ ಎಂಬ ವಿನೂತನ ಕಲ್ಪನೆಯನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿದವರು. ಇಂಗ್ಲಿಷ್ ಭಾಷೆಗೆ ವಿಶಿಷ್ಟ ಸೌಂದರ್ಯವನ್ನು ಕಟ್ಟಿಕೊಟ್ಟ ಸಾಧನೆಯೂ ಇವರದ್ದು. ಎಂದೋ ಇವರ ಪಾಠ ಕೇಳಿದವರು ಇಂದಿಗೂ ಆ ಇಂಗ್ಲಿಷ್ ಪಾಠದ ಸೊಬಗನ್ನು ನೆನಪಿಸಿಕೊಳ್ಳುತ್ತಿರುವುದು ಗಮನಾರ್ಹ. 


ಭರತನಾಟ್ಯ, ಯಕ್ಷಗಾನ, ಸಂಗೀತ ಹೀಗೆ ನಾನಾ ಪ್ರಕಾರಗಳಲ್ಲೂ ವಿಶೇಷ ಅಭಿರುಚಿ ಹೊಂದಿರುವ ಡಾ.ಭಟ್, ಸ್ವತಃ ನಾಟ್ಯ ಕಲಾವಿದನಾಗಿ, ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿದವರು. ಇದಲ್ಲದೆ ಆಪ್ತಸಮಾಲೋಚಕರಾಗಿ, ಮಾನವ ಸಂಪನ್ಮೂಲ ತರಬೇತುದಾರಾಗಿಯೂ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಬಾಲಕೃಷ್ಣ ಬೋರ್ಕರ್: ಪುತ್ತೂರಿನ ಕೋಡಿಂಬಾಡಿಯವರಾದ ಇವರು ಸಾಮಾಜಿಕ, ಧಾರ್ಮಿಕ, ಸಹಕಾರಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ತಮ್ಮನ್ನು ತಾವು ಅಪಿಸಿಕೊಂಡವರು. 1976-77 ರ ಹೊತ್ತಿನಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಅಡಿಯಿಟ್ಟು ಪುತ್ತೂರಿನಲ್ಲಿ ಆಗ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಮಾಜಿ ಶಾಸಕ ರಾಮ ಭಟ್ಟರ ಮಾರ್ಗದರ್ಶನದೊಂದಿಗೆ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಬೀಡಿ ಕಾರ್ಮಿಕ ಮಹಿಳೆಯರ ಶೋಷಣೆ ವಿರುದ್ಧ ಧ್ವನಿಯೆತ್ತುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಕೀರ್ತಿ ಇವರದ್ದು.


ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ, ಜನತಾ ಬಝಾರ್‍ನ ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮಾತ್ರವಲ್ಲದೆ ಇನ್ನೂ ಅನೇಕ ಸಂಘಟನೆ, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವ ಇವರಿಗಿದೆ. ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಿಎಲ್‍ಡಿ ಬ್ಯಾಂಕ್‍ಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಈವರೆಗೆ ಕರ್ನಾಟಕದಲ್ಲಿ ಪಿಎಲ್‍ಡಿ ಬ್ಯಾಂಕ್‍ಗೆ ದೊರೆತ ಏಕೈಕ ರಾಷ್ಟ್ರಪ್ರಶಸ್ತಿ ಅದೇ ಆಗಿದೆ ಎಂಬುದು ಗಮನಾರ್ಹ.


ವಿಶ್ವಹಿಂದೂ ಪರಿಷತ್‍ನಲ್ಲಿ ಕಾರ್ಯನಿರ್ವಹಿಸುತ್ತಾ 1975ರ ವೇಳೆಗೆ ಕೋಡಿಂಬಾಡಿಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, 78ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, 85ರ ತರುವಾಯ ಗಣೇಶೋತ್ಸವ ಹೀಗೆ ಸಾಮೂಹಿಕ ಆಚರಣೆಯ ಕಲ್ಪನೆಯನ್ನು ಒಡಮೂಡಿಸಿದವರು. 1982ರಲ್ಲಿ 82 ಕಡೆಗಳಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಆಚರಣೆ ಜಾರಿಗೆ ತಂದ ಮುಂದಾಳುವಾಗಿ ಗುರುತಿಸಿಕೊಂಡವರು. ಜತೆಗೆ ಸ್ಥಳೀಯ ದೇವಸ್ಥಾನಗಳ ಅಭಿವೃದ್ಧಿಯಲ್ಲೂ ತನ್ನದಾದ ಕೊಡುಗೆಗಳನ್ನು ಒದಗಿಸಿಕೊಟ್ಟವರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post