ಮಂಗಳೂರು : ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿಕೊಂಡು ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಳಾಯಿ ಚಿತ್ರಾಪುರದಲ್ಲಿ ನಡೆದಿದೆ.
ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಭಯ ಪಟ್ಟು ಮೊದಲು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ನಂತರ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪತಿ ರಮೇಶ್ ಸುವರ್ಣ ಅವರು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ದಂಪತಿಗಳಾದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ' ಎಂದು ಹೇಳಿದ್ದರು. ಇದಕ್ಕೆ ಕಮಿಷನರ್ ಕೂಡಲೇ ಪ್ರತಿಕ್ರಿಯೆ ನೀಡಿ 'ಆತ್ಮಹತ್ಯೆಯಂತ ದುಸ್ಸಾಹಸ ಮಾಡಬೇಡಿ. ನಿಮ್ಮ ಏನೇ ಕಷ್ಟವಿದ್ದರೂ ನಾನು ಸ್ಪಂದಿಸುತ್ತೇನೆ. ದಯವಿಟ್ಟು ಆತ್ಮಹತ್ಯೆ ಮಾಡಬೇಡಿ' ಎಂದು ವಿನಂತಿ ಮಾಡಿಕೊಂಡು ಕೂಡಲೇ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
ಶಶಿಕುಮಾರ್ ಅವರು ಕೂಡಲೇ ಸ್ಥಳಕ್ಕೆ ಪೊಲೀಸ್ ಪಡೆ ಕಳುಹಿಸಿದರೂ ಅಷ್ಟರಲ್ಲಿ ದಂಪತಿಗಳು ನೇಣಿಗೆ ಶರಣಾಗಿದ್ದರು.
ಪತ್ನಿ ಗುಣವತಿ ಸುವರ್ಣ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನನ್ನ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೂ ಭಯ ಕಾಡುತ್ತಿದೆ. ನನ್ನ ಗಂಡನಿಗೂ ಮೂರು ದಿನದಿಂದ ಕೋವಿಡ್ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ.
ನನ್ನ ತಂದೆ ತಾಯಿ ತಮ್ಮನಿಗೆ ಕೋವಿಡ್ ಸೋಂಕು ತಾಗಿ ಈಗ ಚೇತರಿಸಿಕೊಂಡಿದ್ದಾರೆ. ತಾಯಿ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆ ಕೊಡಬಾರದು. ನಾನು ಮತ್ತು ಗಂಡ ನಿರ್ಧರಿಸಿದ ಪ್ರಕಾರ ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರು ನಮ್ಮ ಅಂತ್ಯಕ್ರಿಯೆಯನ್ನು ನಡೆಸಬೇಕು. ಅದಕ್ಕಾಗಿ ಒಂದು ಲಕ್ಷ ರೂ. ಇಟ್ಟಿದ್ದೇವೆ ಎಂದು ಬರೆಯಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق