ಬೆಳ್ತಂಗಡಿ ರೋಟರಿ ಆ್ಯನ್ಸ್ ಕ್ಲಬ್ ಪದಗ್ರಹಣ
ಉಜಿರೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅನನ್ಯವಾದುದು. ಮಹಿಳೆಯರು ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ದೇಶದ ಬೆಳವಣಿಗೆಗೆ ಕೊಡುಗೆಯನ್ನು ನೀಡಬಹುದು. ಈ ನಿಟ್ಟಿನಲ್ಲಿ ಬೆಳ್ತಂಗಡಿ ಆ್ಯನ್ಸ್ ಕ್ಲಬ್ ಆಯೋಜಿಸುತ್ತಿರುವ ಸಮಾಜಮುಖಿ ಜಾಗೃತಿ ಹಾಗೂ ಸೇವಾ ಕಾರ್ಯಕ್ರಮಗಳು ಅಭಿನಂದನೀಯ ಎಂದು ರೋಟರಿ ಜಿಲ್ಲೆ 3181 ರ 2022-23 ನೇ ಸಾಲಿನ ಪ್ರಥಮ ಮಹಿಳೆ ರೊ.ವಾಣಿ ಪ್ರಕಾಶ್ ಕಾರಂತ್ ಶ್ಲಾಘಿಸಿದರು.
ರೊ.ವಾಣಿ ಕಾರಂತ್ ಅವರು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ಸರಳವಾಗಿ ನಡೆದ ಬೆಳ್ತಂಗಡಿ ರೋಟರಿ ಆ್ಯನ್ಸ್ ಕ್ಲಬ್ಬಿನ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡುತ್ತಿದ್ದರು.
ಆ್ಯನ್ಸ್ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷೆ ಡಾ.ದೀಪಾಲಿ ಡೋಂಗ್ರೆ ತಮ್ಮ ಅಧ್ಯಕ್ಷಾವಧಿಯ ಅನುಭವಗಳನ್ನು ಹಂಚಿಕೊಂಡರು ಹಾಗೂ ರಾಜಶ್ರೀ ಧನಂಜಯ ರಾವ್ ವಾರ್ಷಿಕ ವರದಿಯನ್ನು ವಾಚಿಸಿದರು.
2021-22 ನೇ ಸಾಲಿನ ಅಧ್ಯಕ್ಷೆ ನವೀನಾ ಜಯಕುಮಾರ್ ತಮ್ಮ ಆಶಯ ಭಾಷಣ ಮಾಡುತ್ತಾ ಸ್ಥಳೀಯ ಅಗತ್ಯತೆಗಳನ್ನು ಕಂಡುಕೊಂಡು ನಮಗೆ ಸಾಧ್ಯವಾದುದನ್ನು ಕೊಡಮಾಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಜಿರೆಯ ಕಮಲ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಅದ್ಯಯನ ನಡೆಸಿರುವ ಪುಂಜಾಲಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಅಧ್ಯಾಪಕಿ ಡಾ. ವಸಂತಿ ಅವರನ್ನು ಸನ್ಮಾನಿಸಲಾಯ್ತು. ನಿಕಟಪೂರ್ವ ಅಧ್ಯಕ್ಷೆ ಡಾ.ದೀಪಾಲಿ ಡೋಂಗ್ರೆ ಹಾಗೂ ಕಾರ್ಯದರ್ಶಿ ಡಾ.ಸುಷ್ಮಾ ಡೋಂಗ್ರೆ ಅವರನ್ನು ಅಭಿನಂದಿಸಲಾಯ್ತು.
ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್.ಶೆಟ್ಟಿ ಹಾಗೂ ವಲಯ ಸೇನಾನಿ ಧನಂಜಯ್ ರಾವ್ ಶುಭ ಹಾರೈಸಿದರು. ರಶ್ಮಿ ಪಟ್ವರ್ಧನ್, ಹೇಮಲತಾ ಅರುಣ್ ಕುಮಾರ್, ಗಾಯತ್ರಿ ಶ್ರೀಧರ್ ಅತಿಥಿಗಳನ್ನು ಪರಿಚಯಿಸಿದರು.
ಬೆಳ್ತಂಗಡಿ ರೋಟರಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ಕಾರ್ಯದರ್ಶಿ ಅಬೂಬಕ್ಕರ್ ರೋಟರಿ ಯೋಜನೆಗಳ ವಿವರ ನೀಡಿದರು. ವೈಷ್ಣವಿ ವೈಕುಂಠ ಪ್ರಭು, ರೇಶ್ಮಾ ಅಬೂಬಕ್ಕರ್ ಹಾಗೂ ಸಾವಿತ್ರಿ ಪ್ರಸಾದ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ರಶ್ಮಿ ಭಿಡೆ ಪ್ರಾರ್ಥಿಸಿ ಕೊನೆಗೆ ಆ್ಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಭಾರತಿ ಗೋಪಾಲಕೃಷ್ಣ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment