ಅತ್ತಾವರ: ಇತ್ತೀಚಿಗೆ ವೈದ್ಯನಾಥ ನಗರ ನಿವಾಸಿಗಳ ಸಂಘದ ಸಮಾರಂಭದಲ್ಲಿ ಕೊರೋನ ಎಂಬ ಮಹಾಮಾರಿ ಮಧ್ಯೆ ಮಲೇರಿಯಾ, ಡೆಂಗೀ ಜ್ವರಗಳಿಂದ ಸಂರಕ್ಷಣೆಗಾಗಿ ಸಂಘದ ಬೇಡಿಕೆಯಂತೆ ಸ್ಥಳೀಯ ನಗರ ಪಾಲಿಕೆ ಸದಸ್ಯರೂ, ಮಾಜಿ ಮೇಯರ್ ಆದ ದಿವಾಕರ್ ಪಾಂಡೇಶ್ವರ್ ರವರ ಮುತುವರ್ಜಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಹಾಗೂ ಅತ್ತಾವರದ ಪರಿಸರದವರಿಗೆ ಸೊಳ್ಳೆ ಪರದೆ ವಿತರಣೆ ನಡೆಯಿತು.
ಇದರ ಸದುಪಯೋಗವನ್ನು ಹೆಚ್ಚಿನವರು ಪಡಕೊಂಡರು. ವೈದ್ಯನಾಥ ನಗರ ಅಭಿವೃದ್ದಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಈ ಸಂದರ್ಭ ಕಾರ್ಪೊರೇಟರ್ ದಿವಾಕರ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ರಾಜ ಕಾಲುವೆ ಹಾಗೂ ಮಳೆ ನೀರು ಹರಿದು ಹೋಗುವ ತೋಡಿನ ದುರಸ್ತಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಕೂಡಲೇ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಶ್ರಮಿಸಿರುವುದನ್ನು ಸ್ಮರಿಸಿಕೊಳ್ಳಲಾಯಿತು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ದಿವಾಕರ್, 'ನಾನು ನಿಮ್ಮವನಾಗಿದ್ದು ಗೌರವಕ್ಕೆ ಆಭಾರಿಯಾಗಿದ್ದೇನೆ. ಮುಂದೆಯೂ ನಗರದ ಅಭಿವೃದ್ದಿಗೆ ಒತ್ತು ನೀಡಿ ಉಳಿದ ಕಾಮಗಾರಿಗಳಾದ ಡಾಮರೀಕರಣ, ವಿಳಾಸ, ದಿಕ್ಕುಸೂಚಿ, ಸ್ವಚ್ಛ ನಗರಕ್ಕಾಗಿ ಸಂಪೂರ್ಣ ಸಹಕಾರದ ಭರವಸೆ ಇತ್ತರು.
ನಗರ ಪಾಲಿಕೆ ಮೇಲ್ವಿಚಾರಕರಾದ ಚಂದ್ರಹಾಸ್ ಅವರು ಸೊಳ್ಳೆ ಪರದೆ ಉಪಯೋಗ ಹಾಗೂ ಮಲೇರಿಯಾ, ಡೆಂಗೀ ಸೋಂಕಿನ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷರಾದ ಉಮೇಶರಾವ್ ಕುಂಬ್ಳೆ ಮಾತನಾಡಿ, ನಗರದ ಅಭಿವೃದ್ಧಿ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ, ಉತ್ಸುಕರಾಗಿದ್ದು ಸ್ವಚ್ಛ ಹಾಗೂ ಮಾದರಿ ನಗರವನ್ನಾಗಿ ಪರಿವರ್ತಿಸಲು ಪಾಲಿಕೆ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಸಂಘದ ಸದಸ್ಯೆ ಪ್ರೊ. ವಿನೀತಾ ಲಕ್ಷ್ಮಿಕಾಂತ್, ಪ್ಲಾಸ್ಟಿಕ್ ನಿಷೇಧ ಮತ್ತು ಸೊಳ್ಳೆ ಉತ್ಪತ್ತಿ ತಡೆ ಬಗ್ಗೆ ವಿವರಿಸಿದರು.
ಸ್ವಪ್ನ ಕೃಷ್ಣ ಪ್ರಾರ್ಥನೆಗೈದರು. ಸುರೇಶಬಾಬು ಸ್ವಾಗತಿಸಿದರು, ಶೇಷಕುಮಾರ್ ಮನವಿ ಓದಿದರು, ರಾಜನ್ ಸಹಕರಿಸಿದರು. ಡಾ!ಮಾಲತಿ ಶೆಟ್ಟಿ ಮಾಣೂರ್ ಕಾರ್ಯಕ್ರಮ ನಿರ್ವಹಿಸಿ, ಉಪೇಂದ್ರ ಕಾಮತ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment