ಮಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಅದೆಷ್ಟೋ ಸಹಕಾರಿ ಬ್ಯಾಂಕ್‌ಗಳು ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ ನೆಲಕಚ್ಚಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಸಹಕಾರಿ ಖಾತೆ ಸರಿಯಾದ ದಿಕ್ಕಿನಲ್ಲಿ ಸೂಕ್ತ ನಿರ್ಧಾರ, ಎಂದು ಕ್ರೆಡಾಯ್ ಉಪಾಧ್ಯಕ್ಷ, ಆರ್ಥಿಕ ತಜ್ಞ ಸಿಎ ಡಿ ಬಿ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ ಮತ್ತು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ (ಮಂಗಳೂರು ವಿಭಾಗ) ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ “ಜಾಗತಿಕ ಸನ್ನಿವೇಶದಲ್ಲಿ ಭಾರತೀಯ ಆರ್ಥಿಕತೆ” ಎಂಬ ರಾಷ್ಟ್ರಮಟ್ಟದ ವೆಬಿನಾರ್‌ನಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಬ್ಯಾಂಕ್‌ಗಳ ವಿಲೀನದಿಂದ ಯಾವುದೇ ಲಾಭವಿಲ್ಲ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳ ಖಾಸಗೀಕರಣವಷ್ಟೇ ಪರಿಹಾರ. ಸಬ್ಸಿಡಿಗಳು ಜಿಡಿಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ, ಪರೋಕ್ಷ ತೆರಿಗೆಗಳಷ್ಟೇ ದೇಶದ ಆರ್ಥಿಕತೆಗೆ ಬಲ ತುಂಬಬಲ್ಲವು.
“ಈಗ ಚೀನಾದ ಅರ್ಥಿಕತೆ ನಮ್ಮ ಆರ್ಥಿಕತೆಯ 5 ಪಟ್ಟು ದೊಡ್ಡದಿದೆ. ಮೂಲಸೌಕರ್ಯ ವೃದ್ಧಿ, ಉದ್ಯೋಗ ಸೃಷ್ಟಿ, ಎಸ್‌ಇಝೆಡ್‌ಗಳ ಉತ್ಪಾದಕತೆ ಹೆಚ್ಚಳ, ಕೃಷಿ-ಕೈಗಾರಿಕೆಯಲ್ಲಿ ನೀರಿನ ಸದ್ಭಳಕೆ, ಕಾರ್ಮಿಕ ಕಾನೂನು ಸುಧಾರಣೆ, ಉದ್ಯಮ ಸುಧಾರಣೆ, ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿದರೆ ಮಾತ್ರ ನಾವು ಚೀನಾದೆ ಪೈಪೋಟಿ ನೀಡಬಲ್ಲೆವು,” ಎಂದು ಮೆಹ್ತಾ ಅಂದಾಜಿಸಿದರು. ಐಸಿಎಐ ವಾಷಿಂಗ್ಟನ್ ಶಾಖೆಯ ಮುಖ್ಯಸ್ಥ ಸಿಎ ಗೋಕುಲ್‌ದಾಸ್ ಪೈ, ಭಾರತದ ತೈಲಬೆಲೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುವುದರಿಂದ ದೇಶದಲ್ಲಿ ತೈಲಬೆಲೆ ಸಧ್ಯಕ್ಕೆ ಇಳಿಯುವ ಸಾಧ್ಯತೆ ಕಡಿಮೆ. ಇದರಿಂದ ಇತರ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಆದಾಯದಲ್ಲಿ ಯಾವುದೇ ಏರಿಕೆಯಾಗುತ್ತಿಲ್ಲ. ಇದು ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ, ಎಂದರು.
ಐಸಿಎಐ ಮಂಗಳೂರು ಶಾಖೆಯ ಪೂರ್ವತನ ಮುಖ್ಯಸ್ಥ ಸಿಎ ಎಸ್ ಎಸ್ ನಾಯಕ್ ಕಾರ್ಯಕ್ರಮ ಮುನ್ನಡೆಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್, ಪದವಿ ವಿಭಾಗದ ಮುಖ್ಯಸ್ಥ ಡಾ. ಬಿ ಎಂ ರಾಮಕೃಷ್ಣ, ಐಕ್ಯೂಎಸಿ ಸಂಯೋಜಕ ಡಾ. ಸುರೇಶ್, ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಶಮಾ ಐಎನ್‌ಎಂ, ಆದರ್ಶ್ ಕಾರ್ಯಕ್ರಮ ನಿರ್ವಹಿಸಿದರು. ಐಸಿಎಐ ಮಂಗಳೂರು ಶಾಖೆ ಮುಖ್ಯಸ್ಥ ಸಿಎ ಕೆ ಸುಬ್ರಹ್ಮಣ್ಯ ಕಾಮತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment