ಪೆರ್ಲ: ಆರೋಗ್ಯ ಇಲಾಖೆಯ ಕೋವಿಡ್ ಲಸಿಕೆ ವಿತರಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಇದೀಗ ಎಣ್ಮಕಜೆ ಗ್ರಾಮ ಪಂಚಾಯತಿನ ಪ್ರತಿ ವಾರ್ಡ್ ಗಳಲ್ಲಿಯೂ ಸ್ಥಳೀಯ ಮಟ್ಟದಲ್ಲಿ ಲಸಿಕೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
ಈ ಹಿಂದೆ ಪೆರ್ಲ ಆರೋಗ್ಯ ಕೇಂದ್ರದ ಬಳಿ ವ್ಯಾಕ್ಸಿನ್ ಸೆಂಟರ್‌ನಲ್ಲಿ ನೀಡುತ್ತಿದ್ದ ಲಸಿಕೆಗೆ ಆನ್ ಲೈನ್ ನೊಂದಾವಣೆ ಆದ ಕಾರಣ ದೂರದ ಬೇರೆ ಬೇರೆ ಪಂಚಾಯತಿನವರು ಬಂದು ವ್ಯಾಕ್ಸಿನ್ ಪಡೆಯುತ್ತಿದ್ದರು. ಇದರಿಂದಾಗಿ ಈ ಪಂಚಾಯತಿನವರಿಗೆ ಕಾದು ಕುಳಿತರೂ ವ್ಯಾಕ್ಸಿನ್ ಸಿಗದ ಪರಿಸ್ಥಿತಿ ಉಂಟಾಗಿತ್ತು. ಇದರ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೊನ್ನೆ ನಡೆದ ಜಿಲ್ಲಾಡಳಿತ ಸಭೆಯಲ್ಲಿ ವಿಷಯ ಮಂಡಿಸಿ ಲಸಿಕೆ ವಿತರಣೆಯಲ್ಲಿ ಮಾರ್ಪಾಡು ತರಲಾಗಿದ್ದು ಸಂಪೂರ್ಣ ಲಸಿಕೆ ಅಭಿಯಾನ ಪಂಚಾಯತಿನ ಗುರಿಯಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಿಳಿಸಿದರು.
ಇದರಂತೆ ಇನ್ನು ಮುಂದೆ ಪ್ರತಿ ವಾರ್ಡ್‌ನ ನಿರ್ದೇಶಿತ ಕೇಂದ್ರದಲ್ಲಿ ಸ್ಥಳದಲ್ಲಿಯೇ ಫಲಾನುಭವಿಗಳ ಹೆಸರು ನೊಂದಾಯಿಸುವ ಮೂಲಕ ವ್ಯಾಕ್ಸಿನ್ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ 1,2,3,4ನೇ ಹಾಗೂ 12,13 ವಾರ್ಡ್‌ಗಳಲ್ಲಿ ಪ್ರಥಮ ಹಂತದ ವ್ಯಾಕ್ಸಿನ್ ವಿತರಣೆ ಜರಗಿದ್ದು ದಿನಂಪ್ರತಿ ಸೂಚಿತ ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ ನಿಗದಿಪಡಿಸಿದಷ್ಟುವ್ಯಾಕ್ಸಿನ್ ವಿತರಣೆ ಜರಗಲಿದೆ.
ಇದರ ಜತೆಗೆ ದ್ವಿತೀಯ ಡೋಸ್ ಪಡೆದುಕೊಳ್ಳುವವರು ಭಾಗವಹಿಸಬಹುದಾಗಿದೆ. ಪ್ರತಿಯೊಂದು ಕಡೆಯೂ ಕೋವಿಡ್ 19 ಮಾನದಂಡಗಳನ್ನು ಪಾಲಿಸಿಕೊಂಡು ವ್ಯಾಕ್ಸಿನ್ ಪಡೆದುಕೊಳ್ಳ ಬಹುದಾಗಿದೆ.ಎಲ್ಲಾ ವಾರ್ಡ್ ಗಳಲ್ಲಿಯೂ ಒಂದೇ ಬಾರಿಗೆ ವ್ಯಾಕ್ಸಿನ್ ಲಭ್ಯವಾಗದಿದ್ದರೂ ಯಾರು ಆತಂಕಪಡಬೇಕಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ವ್ಯಾಕ್ಸಿನ್ ವಿತರಣೆ ಹಂತ ಹಂತವಾಗಿ ನಡೆಸಲಾಗುತ್ತಿರುವುದರಿಂದ ಸಂದಣಿಯಾಗದ ರೀತಿಯಲ್ಲಿ ವಾರ್ಡ್‌ನ ಜನತೆ ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق