ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನಸಂಖ್ಯಾ ನಿಯಂತ್ರಣ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಜನಸಂಖ್ಯಾ ನಿಯಂತ್ರಣ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


 

ಜನಸಂಖ್ಯಾ ನಿಯಂತ್ರಣ ಕಾಯಿದೆ ಸುಮಾರು ಎಪ್ಪತ್ತರ ದಶಕದಲ್ಲಿಯೇ ಬಂದ ನೀತಿ. ಆಗ ಇದಕ್ಕೊಂದು ಅರ್ಥಪೂರ್ಣವಾದ ನಾಮಕರಣವನ್ನೂ ಮಾಡಿದರು. "ಕುಟುಂಬ ಯೇೂಜನಾ ನೀತಿ". ಆದರೆ ಇದನ್ನು ಅನುಷ್ಠಾನಗೊಳಿಸುವಾಗ ತಮ್ಮ ಮತ ಬ್ಯಾಂಕುಗಳಿಗೆ ಯಾವುದೇ ಚ್ಯುತಿ ಬಾರದ ಹಾಗೇ ನಡೆಸಿಕೊಂಡು ಬಂದರು. ರಾಷ್ಟ್ರ ಮತ್ತು ವೈಯಕ್ತಿಕ ಅನುಕೂಲತೆಗಳನ್ನು ಅರಿತ ಜನರು ಮಾತ್ರ ಸಂತಾನದ ಮಿತಿಯನ್ನು ಒಂದಕ್ಕೊ ಎರಡಕ್ಕೊ ಸೀಮಿತ ಪಡಿಸಿಕೊಂಡರು. ಆದರೆ ಕೆಲವರಂತೂ ಮಕ್ಕಳು ದೇವರ ವರದಾನ ಅನ್ನುವಂತೆ ಯಾವುದೇ ಇತಿಮಿತಿ ಇಲ್ಲದೆ ವೃದ್ಧಿಸಿಕೊಂಡು ಬಂದರು. ಇದಕ್ಕೆ ಅವರ ಬಡತನವೂ ಕಾರಣವಿರಬಹುದು. ಸಿರಿತನವೂ ಕಾರಣವಿರಬಹುದು, ಜ್ಞಾನವೂ ಇರಬಹುದು, ಅಜ್ಞಾನವೂ ಕಾರಣವಿರಬಹುದು. ಅಂತೂ ನಮ್ಮ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ದಿಕ್ಕು ತಪ್ಪಿದ ಹಡಗಿನಂತಾಯಿತು. ಇದಕ್ಕೆ ಬಹು ಮುಖ್ಯವಾಗಿ ಇಚ್ಛಾಶಕ್ತಿ ಇಲ್ಲದವರು, ಬರೇ ಅಧಿಕಾರ -ಮತ ಬ್ಯಾಂಕ್ ರಾಜಕಾರಣವನ್ನೇ ಅಸ್ತ್ರವಾಗಿ ಮಾಡಿಕೊಂಡು ಬಂದಿರುವುದೇ ಬಹುಮುಖ್ಯ ಕಾರಣ ಅನ್ನುವುದು ಶತ ಸಿದ್ದವಾದ ಮಾತು.


2021ಕ್ಕೆ ಮತ್ತೆ ಕೇಳುತ್ತಿದ್ದೇವೆ, "ಇದೇ ಘೇೂಷಣೆ" ಒಂದು ಬೇಕು ಎರಡು ಸಾಕು" ಅನ್ನುವ ಜನಸಂಖ್ಯಾ ನಿಯಂತ್ರಣದ ಮಾತು. ಆಡಳಿತರೂಢ ಬಿಜೆಪಿ ತನ್ನ ಆಡಳಿತವಿರುವಲ್ಲಿ "ಒಂದು ಬೇಕು ಎರಡು ಸಾಕು" ಅನ್ನುವ ನೀತಿಯನ್ನು ದೃಢವಾಗಿ ಅನುಷ್ಠಾನಗೊಳಿಸಲು ಕರಡು ತಯಾರಿ ಮಾಡಿಕೊಂಡಿದ್ದಾರೆ. ಇದು ಬರೇ ಆಯಾಯ ರಾಜ್ಯಗಳ ಮುಂದಿನ ಚುನಾವಣಾ ಪ್ರಣಾಳಿಕೆಗೋಸ್ಕರವೊ ಗೊತ್ತಿಲ್ಲ. ಇದೇ ಮಳೆಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಇದನ್ನು ಮಂಡಿಸುವ ತರಾತುರಿಯಲ್ಲಿ ನಿಂತಿದ್ದಾವೆ. ಮಾತ್ರವಲ್ಲ ಆಶ್ಚರ್ಯವೆಂಬಂತೆ ಕಾಂಗ್ರೆಸ್ ಪಕ್ಷದ ಸಿಂಘ್ವಿ ಕೂಡಾ ಇದೇ ಮಸೂದೆಯನ್ನು ಖಾಸಗಿಯಾಗಿ ಮಂಡಿಸುವ ಅಭಿಪ್ರಾಯ ತೇೂರಿದ್ದಾರೆ.


ಈಗ ನಮ್ಮ ಮುಂದಿರುವ ಬಹು ದೊಡ್ಡ ಪ್ರಶ್ನೆ ಅಂದರೆ ಬೆಕ್ಕಿಗೆ ಯಾವ ರೀತಿಯಲ್ಲಿ ಗಂಟೆ ಕಟ್ಟಬೇಕು?ಯಾರು ಕಟ್ಟು ಬೇಕು ಅನ್ನುವುದು?


"ಒಂದು ಬೇಕು ಎರಡು ಸಾಕು" ಅನ್ನುವ ಸಂತಾನ ನಿಯಂತ್ರಣ ಮಸೂದೆ ಸ್ವರೂಪ ಹೇಗಿರಬೇಕು ಅಂದರೆ-

1. ಇದು ಸಮಾನ ನಾಗರಿಕ ಸಂಹಿತೆಯ ನೆಲೆಯಲ್ಲಿಯೇ ಈ ಕಾಯಿದೆ ರೂಪಿಸಿ ಜ್ಯಾರಿಗೊಳಿಸಬೇಕು.


2. ಬರೇ ಸರಕಾರಿ ನೌಕರರಿಗೆ, ಸರಕಾರದ ಸವಲತ್ತು ಪಡೆಯುವರಿಗೆ, ಉದ್ಯೋಗ   ಪಡೆಯುವರಿಗೆ, ಸ್ಥಳೀಯ ಆಡಳಿತದ ಜನಪ್ರತಿನಿಧಿಗಳಿಗೆ ಮಾತ್ರ ಈ ನೀತಿಯನ್ನು ಅನುಷ್ಠಾನಗೊಳಿಸುವುದು ಆಗಬಾರದು.


3. ಬಹುಮುಖ್ಯವಾಗಿ ಲೇೂಕಸಭೆ, ವಿಧಾನಸಭೆಗಳಿಗೆ ಸ್ಪರ್ಧಿಸುವವರಿಗೆ ಈ ಸಂತಾನ ನಿಯಂತ್ರಣದ ಆರ್ಹತೆಯ ಕಡಿವಾಣ ಹಾಕಿ ಚುನಾವಣೆಗೆ ಸ್ಪಧಿ೯ಸದ ಹಾಗೆ ಮಾಡಿದಾಗ ಮಾತ್ರ ಈ ಕಾನೂನು ನೂರಕ್ಕೆ ನೂರು ಯಶಸ್ವಿ ಮಾತ್ರವಲ್ಲ ಜನಮನ್ನಣೆ ಗಳಿಸಲು ಸಾಧ್ಯ. ಇದು ನನ್ನ ಖಚಿತ ಅಭಿಪ್ರಾಯ.


4. ಹಾಗಾದರೆ ನಮ್ಮ ಸಂಸತ್ತಿನಲ್ಲಿ ವಿಧಾನ ಸಭೆಗಳಲ್ಲಿ ಈ ಮೇಲಿನ ಷರತ್ತು ಹಾಕಿ ಜನಸಂಖ್ಯಾ ನಿಯಂತ್ರಣ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ? ಅಂದರೆ ಅವರ ಮರಣ ಶಾಸನಕ್ಕೆ ಅವರೇ ಸಹಿ ಹಾಕುವಷ್ಟು ನಿಸ್ವಾರ್ಥಿಗಳೇ ನಮ್ಮ ಜನಪ್ರತಿನಿಧಿಗಳು?


5. ಇದರಿಂದಾಗಿ ಅದೆಷ್ಟೊ ಮಂದಿ ತಮ್ಮ ಮಂತ್ರಿ ಪದವಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಹಾಗಾಗಿ ಬಾಯಿಯಲ್ಲಿ ಮಾತ್ರ  ಘೇೂಷಣೆ ಬಿಟ್ಟರೆ ಕಾನೂನು ಮಾಡಲು ಇವರೇ ತೊಡಕಾಗುವುದು ಗ್ಯಾರಂಟಿ.


6. ಈ ಜನಸಂಖ್ಯಾ ನಿಯಂತ್ರಣ ಕಾಯಿದೆ ಕೇವಲ ಸ್ಥಳೀಯ ಆಡಳಿತ ಜನಪ್ರತಿನಿಧಿಗಳಿಗೆ ಸರಕಾರಿ ನೌಕರರಿಗೆ ಸೀಮಿತ ಪಡಿಸಿಕೊಂಡು ಹೇಳಿಕೆ ನೀಡುವುದು ನೀತಿ ರೂಪಿಸುವುದು  ಅತ್ಯಂತ ನಾಚಿಕೆಗೇಡಿನ ಹಾಗೂ ಬೇಜವಾಬ್ದಾರಿ ವಿಚಾರವೂ ಹೌದು.


7. ಆದುದರಿಂದ ಒಂದಂತೂ ಸತ್ಯ ಇದು ಕೇವಲ ಬಾಯಿ ಮಾತಿಗೆ ಸೀಮಿತ ಅನ್ನುವುದು ಶತ ಸಿದ್ದ. ಯಾಕೆಂದರೆ ಸುಮಾರು ಎರಡು ಮೂರು ದಶಕಗಳ ಹಿಂದಿನ ಲೇೂಕಸಭೆ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ವಿಷಯ ಇದಾಗಲೇ ವನವಾಸ ಅಜ್ಞಾತವಾಸ ಮುಗಿಸಿ ಬಂದರೂ ಕೂಡಾ ಪುರುಷ ಪ್ರಧಾನ ಸಂಸತ್ತಿನಲ್ಲಿ ಇನ್ನೂ ಮುಕ್ತಿ ಸಿಗಲಿಲ್ಲ ಅನ್ನುವಾಗ ತಮ್ಮ ಬುಡಕ್ಕೆ ಕೊಡಲಿ ಏಟು ಬೀಳಬಹುದು ಅನ್ನುವ "ಒಂದು ಬೇಕು ಎರಡು ಸಾಕು" ಅನ್ನುವುದನ್ನು ಶಾಸನ ಮಾಡಲು ಬರೊಬರಿ ಡಝನ್ ಗಟ್ಟಲೇ ಮಕ್ಕಳನ್ನು ವರಪ್ರಸಾದವೆಂದು ಪಡೆದು ಕಾನೂನು ಮಾಡುವ ಪೀಠದಲ್ಲಿ ಕುಳಿತಿರುವ ನಮ್ಮ ಸಂಸದರಿಂದ ಮತ್ತು ಶಾಸಕರಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವೇ? ನೀವೇ ಹೇಳಿ?


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم