ಉಡುಪಿ: ದಶಕಗಳಿಂದಲೂ ಬಗೆಹರಿಯದೆ ಕಗ್ಗಂಟಾಗಿರುವ ಉಡುಪಿ ನಿವೇಶನ ಹಗರಣದ ಸಂತ್ರಸ್ತರು ನ್ಯಾಯ ದೊರಕಿಸಿಕೊಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಇಂದು ಮನವಿ ಸಲ್ಲಿಸಿದರು.
1984ರಲ್ಲಿ ಉಡುಪಿ ನಗರಾಭಿವೃದ್ಧಿಕಾರದ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತದ ಎಲ್ಲ ನಿಯಮಗಳಿಗೆ ಅನುಗುಣವಾಗಿಯೇ ನಿವೇಶನ ಖರೀದಿಸಿದ್ದವರಿಗೆ ವರ್ಷಗಳು ಕಳೆಯುತ್ತಿದ್ದಂತೆ ತಾವು ಖರೀದಿಸಿದ ನಿವೇಶನಗಳ ದಾಖಲೆಪತ್ರಗಳು ಸಮರ್ಪಕವಾಗಿಲ್ಲ ಎಂದು ಅರಿವಾದಾಗ ಕಂಗೆಟ್ಟುಹೋದರು.
ಕರ್ನಾಟಕ ಸರಕಾರದ ವಸತಿ ಬಡಾವಣೆಗಳ ನಿಯಮಗಳನ್ನು ಸಡಿಲಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ಸಾವಿರಾರು ನಿವೇಶನಗಳ ನೋಂದಣಿ ಮಾಡಿಕೊಂಡಿತ್ತು. ಈ ವಿಷಯ ಅರಿಯದ ಹಲವು ಮಂದಿ ತಮಗೆ ನಿವೇಶನ ದೊರೆತ ಸಂಭ್ರಮದಲ್ಲಿ ನೋಂದಣಿ ಮಾಡಿಸಿಕೊಂಡು ದಾಖಲೆಪತ್ರಗಳನ್ನೂ ಪಡೆದುಕೊಂಡಿದ್ದರು. ಆದರೆ ಅವೆಲ್ಲವೂ ಅಕ್ರಮ ಎಂದು ಸರಕಾರ ಘೋಷಿಸಿದ ಬಳಿಕ ಸಕ್ರಮ ಮಾಡಿಕೊಳ್ಳುವ ದಾರಿಯೂ ಕಾಣದೆ, ಭಾರೀ ನಷ್ಟಕ್ಕೆ ಗುರಿಯಾದರು.
ಇದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಕೆ, ಪ್ರತಿಭಟನೆ, ಮೆರವಣಿಗೆ ಎಲ್ಲವನ್ನೂ ನಡೆಸಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಹೊಸದಾಗಿ ಮನವಿ ಸಲ್ಲಿಸಿ ನ್ಯಾಯ ದೊರಕಿಸಿಕೊಡುವಂತೆ ಕೋರಲಾಗಿದೆ.
ನಿವೇಶನ ಸಂತ್ರಸ್ತರ ಸಂಘದ ಪರವಾಗಿ ಅದರ ಕಾರ್ಯದರ್ಶಿ ರಾಬರ್ಟ್ ಡಿಸೋಜ ಅವರು ಇಂದು ಮನವಿ ಪತ್ರ ನೀಡಿದ್ದಾರೆ. ಸಂತ್ರಸ್ತರ ಪರವಾಗಿ ರಾಬರ್ಟ್ ಡಿಸೋಜ, ತಾರಾನಾಥ ಹೆಗ್ಡೆ, ದ. ಕಮಲೇಶ್, ಮೆಲ್ವಿನ್ ರೇಗೋ, ವಾಸುದೇವ್ ಗಡಿಯಾರ್, ಬಾಲಚಂದ್ರ ಭಟ್, ಸ್ಟೀಫನ್ ಉಪಸ್ಥಿತರಿದ್ದರು.
ಅವರ ಮನವಿಯ ಪೂರ್ಣಪಾಠ ಹೀಗಿದೆ:
ವಸತಿ ಬಡಾವಣೆಗಳ ನಿರ್ಮಾಣಕ್ಕಾಗಿ ಸರ್ಕಾರವು ರೂಪಿಸಿದ್ದ ನೀತಿ ನಿಯಮಗಳ ಬಗ್ಗೆ ಇದ್ದ ಕಾನೂನನ್ನು ಕರ್ನಾಟಕ ಸರ್ಕಾರ 1984ರಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದ್ದರೂ, ಉಡುಪಿ ಕಂದಾಯ ಇಲಾಖೆಯು ಈ ನಿಯಮಗಳನ್ನು ಸಡಿಲಿಸಿ, ನೋಂದಣಿ ಪ್ರಕ್ರಿಯೆಗೆ ಹೇಗೆ ಅನುವು ಮಾಡಿಕೊಟ್ಟಿತೆಂಬುದು ಪ್ರಶ್ನಾರ್ಹ ಮಾತ್ರವಲ್ಲ ಅಪರಾಧ ಕೂಡ. ಅಂದಿನ ದಿನಗಳಲ್ಲೇ ‘ಈ ಬಗೆಯ’ ನಿವೇಶನಗಳ ನೋಂದಣಿಯನ್ನು ಉಡುಪಿ ಪ್ರಾಧಿಕಾರವು ತಡೆದಿದ್ದರೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರೆ ನಾವು ಇಂದು ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಸರ್ಕಾರದ ವ್ಯವಹಾರಗಳನ್ನು ಪ್ರಾಮಾಣಿಕವಾಗಿ ನಂಬುವ ನಾವು, ನಿವೇಶನಗಳನ್ನು ನಮ್ಮ ಹೆಸರಿಗೆ ಸರ್ಕಾರವೇ ಹಸ್ತಾಂತರಿಸಿದ ಕಾರಣ, ಅವುಗಳು ಕ್ರಮಬದ್ಧವಾಗಿಲ್ಲದ್ದನ್ನು ಗುರುತಿಸಲು ಸೋತೆವು. ಆದರೆ ಸಂತ್ರಸ್ತರಾದ ನಮ್ಮನ್ನು ಪ್ರಾಧಿಕಾರ, ಅಕ್ರಮಿಗಳನ್ನಾಗಿ ಬಿಂಬಿಸಿ, ದಂಡಕಟ್ಟಿ ಸಕ್ರಮ ಮಾಡಿಕೊಳ್ಳಲು ಆದೇಶಿಸಿತು. ಪ್ರಾಧಿಕಾರದ ಅದೇಶದ ಪ್ರಕಾರ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿಯೂ ಪರಿಹಾರ ಸಿಗದವರ ಸಂಖ್ಯೆ 7 ಸಾವಿರವೆಂತಿದ್ದರೆ, ಇದ್ಯಾವುದರ ಅರಿವೆಯೇ ಇಲ್ಲದೆ, ಸುಮಾರು 10 ವರ್ಷಗಳಿಂದ ನಿವೇಶನದ ಸಮಸ್ಯೆಯಿಂದ ನರಳುತ್ತಿರುವ ನಮ್ಮಂತಹವರು 20 ಸಾವಿರಕ್ಕೂ ಅಧಿಕ ಮಂದಿ ಎಂದು ತಿಳಿಸಲು ವಿಷಾದವೆನಿಸುತ್ತದೆ.
ಸಂತ್ರಸ್ತರ ಹಿತದೃಷ್ಟಿಯಿಂದ ಸರ್ಕಾರ ಖುದ್ದಾಗಿ ಈ ಪ್ರಕರಣದ ತುರ್ತು ವಿಚಾರಣೆಯ ಬಗ್ಗೆ ಪ್ರಯತ್ನಪಡಬೇಕು. 4 ವರ್ಷಗಳಿಂದಲೂ ತಟಸ್ಥವಾಗಿರುವ ‘Karnataka Town & country planning (Regularization of unauthorised developments) Rules 2013’ ಮೇಲೆ ಇರುವ SLP ಯನ್ನು ಶೀಘ್ರ ವಿಚಾರಣೆ ಮಾಡಿಸಲು ಬೇಕಾದ ಕ್ರಮವನ್ನು ತಾವು ಈಗಲಾದರೂ ತೆಗೆದುಕೊಳ್ಳದಿದ್ದರೆ ಖಂಡಿತವಾಗಿಯೂ ಸಂತ್ರಸ್ತರ ಜೀವಿತಾವಧಿಯಲ್ಲಿ ನ್ಯಾಯ ಸಿಗುವುದಿಲ್ಲ. ಇದು ತಮಗೂ ನೋವುಂಟುಮಾಡುವ ವಿಚಾರವೆಂದು ಭಾವಿಸುತ್ತೇವೆ.
ಸುಪ್ರೀಂ ಕೋರ್ಟಿನ ಮುಂದಿರುವ ಅಕ್ರಮ-ಸಕ್ರಮ ಯೋಜನೆಯನ್ನು ಸದ್ಯ ಪ್ರಶ್ನಿಸಿರುವ ದಾವೆಯನ್ನು ಬಿ.ಡಿ.ಎ ತಿದ್ದುಪಡಿ ಮಸೂದೆ ಜುಲೈ 2020 ಅನಗತ್ಯ-ಅಪ್ರಸ್ತುತಗೊಳಿಸಿದೆ. ಆದುದರಿಂದ ಬಿ.ಡಿ.ಎ ವ್ಯಾಪ್ತಿಯ ಹೊರಗಿರುವ ಕರ್ನಾಟಕದ ಜನತೆಯ ಹಿತಾಸಕ್ತಿಯನ್ನು ಅನುಲಕ್ಷಿಸಿ ಮೇಲೆ ಉಲ್ಲೇಖಿಸಿದ ದಾವೆಯ ವಾದಿ- ಪ್ರತಿವಾದಿಗಳು ಒಮ್ಮತದಿಂದ ವಿಷಯವನ್ನು ವಿಶ್ಲೇಷಿಸಿ ತಮ್ಮ ತಮ್ಮ ದಾವೆಗಳನ್ನು ಹಿಂತೆಗೆದುಕೊಳ್ಳಬೇಕಾಗಿದೆ.
-ರಾಬರ್ಟ್ ಡಿಸೋಜ,
ಮೊಬೈಲ್: 7090338883
Key Words: Udupi Site Scam, ಉಡುಪಿ ನಿವೇಶನ ಹಗರಣ, ನಿವೇಶನ ಹಗರಣ ಸಂತ್ರಸ್ತರು, ಕೆಪಿಸಿಸಿ, ಡಿಕೆ ಶಿವಕುಮಾರ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق