ಉಡುಪಿ : ಇಲ್ಲಿನ ಕೂಲಿ ಕಾರ್ಮಿಕ ದಂಪತಿಯ ಮಗುವೊಂದನ್ನು ಕಿಡಿಗೇಡಿಯೊಬ್ಬ ಅಪಹರಿಸಿದ್ದು, ಆರೋಪಿ ಮಗುವನ್ನು ಎತ್ತಿಕೊಂಡು ಕುಂದಾಪುರ ಮಾರ್ಗದ ಬಸ್ ಹತ್ತುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾಪತ್ತೆಯಾದ ಮಗುವನ್ನು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಪುತ್ರ ಎರಡೂವರೆ ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ದಂಪತಿಗೆ ಪರಿಚಿತನಾಗಿರುವ ಪರಶು ಎಂಬಾತ ಕೃತ್ಯ ಎಸಗಿರುವ ಸಂಶಯವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಆರೋಪಿ ಪರಶು ಕೆಲವು ದಿನಗಳ ಹಿಂದಷ್ಟೆ ದಂಪತಿಗೆ ಪರಿಚಿತನಾಗಿದ್ದ. ಪ್ರತಿದಿನ ಮಗುವಿಗೆ ಚಾಕ್ಲೇಟ್ ಕೊಡಿಸಿ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ ತಿಂಡಿ ಕೊಡಿಸಿಕೊಂಡು ಬರುವುದಾಗಿ ಮಗುವನ್ನು ಕರೆದೊಯ್ದು ಮರಳಿ ಬಂದಿಲ್ಲ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಸಾಕ್ಷ್ಯ ಹಾಗೂ ಬಸ್ನ ಸಿಬ್ಬಂದಿ ಹೇಳಿಕೆಯನ್ನಾಧರಿಸಿ ಉಡುಪಿಯ ಸಂತೆಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಗೆ ಶೋಧ ಕಾರ್ಯಚರಣೆ ನಡೆಸುತ್ತಿದ್ದರು.
ಆದರೆ ಇದೀಗ ಆರೋಪಿ ಬಾಗಲಕೋಟೆಯ ಪರಶು ಎಂಬಾತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ರವಿವಾರ ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಗು ಶಿವರಾಜ್ (2.4 ವರ್ಷ) ಮತ್ತು ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿರುವು ದಾಗಿ ಮಾಹಿತಿ ತಿಳಿದು ಬಂದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق