ಮಂಗಳೂರು: ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆ ಪೆರ್ಮನ್ನೂರು ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕ, ಯೋಗ ಗುರು ಬಿ.ಕೃಷ್ಣ ಕುಲಾಲ್ (72) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ (ಜು.29) ನಮ್ಮನ್ನಗಲಿದ್ದಾರೆ. ಸುದೀರ್ಘ ಕಾಲ ಶಿಕ್ಷಕರಾಗಿ, ಶಿಕ್ಷಕ ಸಂಘಟನೆಗಳಲ್ಲಿ ದುಡಿದುದಲ್ಲದೆ, ಯೋಗಾಭ್ಯಾಸದಲ್ಲಿ ಪರಿಣತಿ ಗಳಿಸಿ ಯೋಗ ಗುರುವಾಗಿ ಅವರು ಅನೇಕ ಶಿಷ್ಯರನ್ನು ಸಂಪಾದಿಸಿದ್ದರು.
ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ಕ್ರಿಯಾಶೀಲರಾಗಿದ್ದ ಕೃಷ್ಣ ಮಾಸ್ತರ್ ಅವರು ಮಂಗಳೂರು ಪರಿಸರದಲ್ಲಿ ಜನಪ್ರಿಯರಾಗಿದ್ದರು. ಮೂಲತಃ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಗರದ ಬಲ್ಮಠ,ಗಾಂಧಿನಗರ, ಬೊಕ್ಕಪಟ್ಣ, ಬಬ್ಬುಕಟ್ಟೆ ಮೊದಲಾದ ವಿದ್ಯಾ ಸಂಸ್ಥೆಗಳಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿದ್ದಾರೆ.ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಪಡೆದಿದ್ದ ಅವರು ಪೆರ್ಮನ್ನೂರು ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದಿದ್ದರು. ಶಿಕ್ಷಕಿಯಾಗಿದ್ದ ಅವರ ಪತ್ನಿ ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರು.
ಮಂಗಳೂರು ಬಳಿಯ ಶಕ್ತಿನಗರದ ನಿವಾಸಿಯಾಗಿದ್ದ ಕೃಷ್ಣ ಮಾಸ್ತರ್ ಓರ್ವ ಪುತ್ರ, ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ ಶಕ್ತಿ ನಗರದಲ್ಲಿ ಜರಗಿತು.
ಸಂತಾಪ: ಮಂಗಳೂರು ಮೆಡಿಕಲ್ ಅಸೋಶಿಯೇಶನ್ ನ ಡಾ.ಅಣ್ಣಯ್ಯ ಕುಲಾಲ್, ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಳ ಕುಮಾರ್, ವಿಶ್ರಾಂತ ಶಿಕ್ಷಕ ಕೆ. ಶಿವರಾಮಾಚಾರ್, ನಿವೃತ್ತ ಪ್ರಾಂಶುಪಾಲ ಕೆ.ಶ್ಯಾಮ ಮೊಯಿಲಿ, ಬಬ್ಬುಕಟ್ಟೆ ಮಹಿಳಾ ಮಂಡಲದ ಸುವಾಸಿನಿ ಬಬ್ಬುಕಟ್ಟೆ, ಪೆರ್ಮನ್ನೂರು ಪ್ರೌಢ ಶಾಲೆಯ ಶಿಕ್ಷಕ ವರ್ಗ ಹಾಗೂ ಹಲವು ಗಣ್ಯರು ಬಿ.ಕೃಷ್ಣ ಮಾಸ್ತರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق