ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಅವರು ಇಂದು ನಿಧನರಾದರು.
ಯಕ್ಷರಂಗದಲ್ಲಿ ರಕ್ತಬೀಜ ಹಿರಣ್ಯಾಕ್ಷ ಶಿಶುಪಾಲ ಮುಂತಾದ ಎದುರು ವೇಷಗಳಿಗೆ ಹೊಸ ಭಾಷ್ಯವನ್ನು ಬರೆದವರು ಸಂಪಾಜೆ ಶೀನಪ್ಪ ರೈ ಯವರು. ಶ್ರೀ ಕಟೀಲು ಮೇಳದಲ್ಲಿ ಹಲವು ದಶಕಗಳ ತಿರುಗಾಟವನ್ನು ಮಾಡಿದ ರೈಗಳು ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿ ಎರಡು ಮೂರು ವರ್ಷಗಳ ಮೊದಲು ತಿರುಗಾಟಕ್ಕೆ ಮಂಗಳವನ್ನು ಹಾಡಿದರು.
ಪಾತ್ರದ ಔಚಿತ್ಯವನ್ನು ನಾಟ್ಯದಲ್ಲಾಗಲೀ ಮಾತಿನಲ್ಲಾಗಲೀ ಎಂದೂ ಮೀರದ ಮೇರು ಕಲಾವಿದ. ಅತ್ಯುತ್ತಮ ಬಣ್ಣಗಾರಿಕೆ. ತಮ್ಮ ಇಳಿ ವಯಸ್ಸಿನಲ್ಲೂ ಏರುಪದಗಳಿಗೆ ವೈವಿದ್ಯಮಯ ನಾಟ್ಯವನ್ನು ಪ್ರದರ್ಶಿಸುತ್ತಿದ್ದರು. ಎದುರು ವೇಷದವರನ್ನು ಎಂದೂ ಅವಮಾನಿಸಿದವರಲ್ಲ.
ಚಿತ್ರಗಳು: ಕೃಷ್ಣಕಿಶೋರ್ ಯೇನೆಕೂಡ್ಲು
ಇರುಳಿನ ರಂಗಸ್ಥಳದಲ್ಲಿ ಅಬ್ಬರದ ರಕ್ಕಸ ವೇಷಗಳಿಂದ ಯಕ್ಷ ಪ್ರೇಮಿಗಳನ್ನು ರಂಜಿಸುತ್ತಿದ್ದ ಶೀನಪ್ಪ ರೈಗಳು ವೃದ್ಧಾಪ್ಯದ ಕಾಲದಲ್ಲಿ ದೇಹದ ಅನಾರೋಗ್ಯಕ್ಕೆ ತುತ್ತಾಗಿ ಕಷ್ಟ ಪಡುವಂತಾಯಿತು ಎಂಬುದೇ ವಿಪರ್ಯಾಸ. ಸಂಪಾಜೆಯವರಾದರೂ ಕೂಡ ಮಂಗಳೂರು ಬಳಿಯ ತನ್ನ ಪುತ್ರನ ಮನೆಯಲ್ಲಿ ಜೀವಿತದ ಕೊನೆಯ ಕಾಲವನ್ನು ಕಳೆದಿದ್ದರು. ಸಂಪಾಜೆ ಶೀನಪ್ಪ ರೈಗಳು ಇನ್ನು ನೆನಪು ಮಾತ್ರ.
ಅವರ ನಿಧನಕ್ಕೆ ಯಕ್ಷಾಂಗಣ ಮಂಗಳೂರು ಅಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
*****
ಸಂಪಾಜೆ ಶೀನಪ್ಪ ರೈ ಅವರು ಯಕ್ಷಗಾನ ಕಂಡ ಶ್ರೇಷ್ಠ ಕಲಾವಿದರು. 63 ವರ್ಷಗಳ ನಿರಂತರ ತಿರುಗಾಟ ಮಾಡಿದ ಇವರು 1943ರ ಜೂನ್ 7ರಂದು ಕೊಡಗು ಜಿಲ್ಲೆಯ ಸಂಪಾಜೆ ಎಂಬಲ್ಲಿ ಜನಿಸಿದರು. ಇವರ ತಂದೆ ರಾಮಣ‍್ಣ ರೈ ಹಾಗೂ ತಾಯಿ ಕಾವೇರಿ ರೈ. ಇವರ ತಂದೆ ಸ್ವತಃ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಶೀನಪ್ಪ ರೈ ಸಂಪಾಜೆಯವರಿಗೆ ಮಾರ್ಗದರ್ಶಕರಾಗಿದ್ದರು.
ಬಾಲ್ಯ ಮತ್ತು ಶಿಕ್ಷಣ
ಇವರು ನಾಲ್ನನೇ ತರಗತಿ ವರೆಗಿನ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ತಂದೆಯವರಿಂದಲೇ ಯಕ್ಷಗಾನ ಕಲೆಯನ್ನು ಅಭ್ಯಸಿಸುತ್ತಾರೆ. ಶೀನಪ್ಪ ರೈ ಅವರು ಅರ್ಥಗಾರಿಕೆಯನ್ನು ತಮ್ಮ ತಂದೆಯವರಿಂದ ಕಲಿತರು. ನಾಟ್ಯಾಭ್ಯಾಸವನ್ನು ಶ್ರೀ ಕುಂಬಳೆ ಕಣ್ಣನ್ ಇವರಿಂದ, ಭರತನಾಟ್ಯವನ್ನು ಶ್ರೀ ಮಾಸ್ತರ್ ಕೇಶವರವರಿಂದ ಕಲಿತರು. ಬಣ್ಣಗಾರಿಕೆಯನ್ನು ಶ್ರೀ ಬಣ‍್ಣದ ಕುಟ್ಯಪ್ಪರಿಂದ ಕಲಿತಿದ್ದಾರೆ.
ರಂಗ ಪ್ರವೇಶ
ಇವರು ತಮ್ಮ ೧೩ನೇ ವರ್ಷದಲ್ಲಿ ಶ್ರೀ ಕಲ್ಲಾಡಿ ಕೊರಗ ಶೆಟ್ಟರ ವ್ಯವಸ್ಥಾಪಕತ್ವದ ಇರಾ ಶ್ರೀ ಸೋಮನಾಥೇಶ್ವರ ಕುಂಡಾವು ಮೇಳದಲ್ಲಿ 4 ವರುಷ ತಿರುಗಾಟ ನಡೆಸಿದ್ದಾರೆ. 3 ವರ್ಷ ವೇಣೂರು, 2 ವರ್ಷ ಇರುವೈಲು, 4 ವರ್ಷ ಸೌಕೂರು, 2 ವರ್ಷ ಚೌಡೇಶ್ವರಿ ಮೇಳ ನಂತರ 33 ವರ್ಷ ಶ್ರೀ ಕಲ್ಲಾಡಿ ವಿಠಲ ಶೆಟ್ಟಿಯವರ ಸಂಚಾಲಕತ್ವದ ಕಟೀಲುಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರಿ ಯಕ್ಷಗಾನ ಮಂಡಳಿಯಲ್ಲಿ ಮತ್ತೆ15 ವರ್ಷ ಎಡನೀರು ಹೊಸನಗರ ಹನುಮಗಿರಿ ಮೇಳಗಳಲ್ಲಿ ಯಕ್ಷಗಾನ ಸೇವೆಯನ್ನು ಮಾಡಿದ್ದಾರೆ.
ನಿರ್ವಹಿಸಿದ ವೇಷಗಳು
ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ರಕ್ತಬಿಜಾಸುರ, ಇಂದ್ರಜಿತು, ಕೌಂಡ್ಲಿಕ, ಭಾನುಕೋಪ, ಶಿಶುಪಾಲ, ಕಾತವೀರ್ಯ, ಅರುಣಾಸುರ, ಭೀಮ, ಮಹಿಷಾಸುರ, ವೀರಮಣೀ, ಶತ್ರುಘ್ನ, ತ್ರಾಮಧ್ವಜ, ಮಕರಾಕ್ಷ ಇತ್ಯಾದಿ ಪಾತ್ರಗಳನ್ನು ಯಕ್ಷಗಾನ ರಂಗದಲ್ಲಿ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು
2014ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ಜಿಲ್ಲಾ ಮಟ್ಟ್ಟದ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ- ಯಕ್ಷಮಂಗಳ ಪ್ರಶಸ್ತಿ
Key Words: Sampaje Sheenappa Rai, Yakshagana, Death, ನಿಧನ, ಸಂಪಾಜೆ ಶೀನಪ್ಪ ರೈ, ಯಕ್ಷಗಾನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق