ಮಳೆಗಾಲದಲ್ಲಿ ಮೈದುಂಬಿ ಭೋರ್ಗರೆವ ಮನಮೋಹಕ ಎರ್ಮಾಯಿ ಫಾಲ್ಸ್ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ. ದಟ್ಟ ಕಾನನದ ನಡುವೆ ಭೋರ್ಗರೆವ ಈ ಜಲಪಾತದ ನೀರನ್ನು ಬಳಸಿಕೊಂಡು ಸ್ಥಳೀಯವಾಗಿ ಮನೆ ಬಳೆಕೆಗೆ ವಿದ್ಯುತ್ ಉತ್ಪಾದಿಸುವವರೂ ಇಲ್ಲಿದ್ದಾರೆ.
ಸುಮಾರು 80 ಅಡಿಗೂ ಹೆಚ್ಚು ಎತ್ತರದಿಂದ ಬಂಡೆಗಲ್ಲುಗಳ ನಡುವೆ ಬಳುಕುತ್ತಾ ಧುಮುಕುವ ಈ ಸುಂದರಿಯನ್ನು ನೋಡುವುದೊಂದು ಹಬ್ಬ. ಸೌಂದರ್ಯದಲ್ಲಿ ಇದು ಜೋಗಕ್ಕಿಂತ ಕಡಿಮೆಯೇನೂ ಅಲ್ಲ.
ಹೋಗುವುದು ಹೇಗೆ?
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪ ಇರುವ ಈ ಫಾಲ್ಸ್‌ಗೆ ದಟ್ಟ ಕಾನನದ ನಡುವೆ ಹಳ್ಳ, ತೊರೆ, ಕಾಲುಸಂಕಗಳನ್ನು ದಾಟುತ್ತಾ ಸಾಗಬೇಕು. ರಕ್ತ ಹೀರುವ ಜಿಗಣೆಗಳ ಕಾಟದಿಂದ ತಪ್ಪಿಸಿಕೊಂಡು ಹೋಗುವುದೇ ದೊಡ್ಡ ಸವಾಲು.
ಪ್ರವಾಸಿಗರು ಬೆಳ್ತಂಗಡಿಯಿಂದ ಕಾಜೂರು ಕಡೆಗೆ ಹೋಗುವ ರಸ್ತೆಯಲ್ಲಿ ಬಸ್ ಅಥವಾ ಸ್ವಂತ ವಾಹನದಲ್ಲಿ ಇಲ್ಲಿಗೆ ಬರಬಹುದು. ಬಸ್ಸಲ್ಲಿ ಬರುವವರು ಕಾಜೂರಿನಲ್ಲಿ ಇಳಿದು ಕಾಡುದಾರಿಯಲ್ಲಿ 2 ಕಿ.ಮೀ ದೂರ ನಡೆದು ಎರ್ಮಾಯಿ ಫಾಲ್ಸ್‌ಗೆ ತಲುಪಬಹುದು. ತೆಪ್ಪದ ಮೂಲಕವೂ ಜಲಪಾತದ ಸಮೀಪಕ್ಕೆ ಬರಲು ಮತ್ತೊಂದು ದಾರಿಯಿದೆ. ಕೊಲ್ಲಿ ಎಂಬ ಸ್ಥಳದಲ್ಲಿ ತೆಪ್ಪದ ವ್ಯವಸ್ಥೆಯಿದ್ದು ಅದರಲ್ಲಿ ನದಿ ದಾಟಿ ಬಳಿಕ ಕಾಲುದಾರಿಯಲ್ಲಿ ನಡೆದು ಜಲಪಾತ ಸೇರಬಹುದು.
ಹೆಚ್ಚುಕಡಿಮೆ ವರ್ಷಪೂರ್ತಿ ಹರಿಯುವ ಜಲಪಾತವಿದು. ಎರ್ಮಾಯಿ ಜಲಪಾತದ ಸೌಂದರ್ಯವನ್ನು ಸವಿಯಲು ದೂರದ ಬೆಂಗಳೂರು, ಮೈಸೂರಿನಿಂದಲೂ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ ಇಲ್ಲಿಗೆ ಬರುವುದು ದುಸ್ಸಾಹಸವಾದೀತು. ಹಾಗಾಗಿ ನವೆಂಬರ್-ಡಿಸೆಂಬರ್ ವೇಳೆಗೆ ಅಗತ್ಯ ತಯಾರಿಯೊಂದಿಗೆ ಬರುವುದು ಸೂಕ್ತ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق