ಕೊಣಾಜೆ (ಮಂಗಳಗಂಗೋತ್ರಿ): 'ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿ ಕೊಳ್ಳುವಂತಾಗಲಿ' ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.
ಅವರು ಶನಿವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್ ವಿತರಿಸಿ ಮಾತನಾಡಿದರು.
'ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ' ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, 'ಪುರುಷೋತ್ತಮ ಪೂಂಜರು ಯಕ್ಷಗಾನದ ಹಿರಿಯ ಭಾಗವತರು ಮತ್ತು ಶ್ರೇಷ್ಠ ಪ್ರಸಂಗಕರ್ತರು. ಜೊತೆಗೆ ಯಕ್ಷಗಾನ ರಂಗದ ಸರ್ವಾಂಗಗಳನ್ನು ಬಲ್ಲ ಮಹಾನ್ ಕಲಾವಿದರಾಗಿದ್ದಾರೆ. ತನ್ನ ಮನೆಯನ್ನೇ ಗುರುಕುಲವಾಗಿಸಿ ನೂರಾರು ಶಿಷ್ಯರನ್ನು ರೂಪಿಸಿದ ಅಪೂರ್ವ ವಿದ್ವಾಂಸರು. ಅವರು ಶೀಘ್ರ ಗುಣಮುಖರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ' ಎಂದು ಹಾರೈಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಶೋಭಾ ಪುರುಷೋತ್ತಮ ಪೂಂಜ, ದೀವಿತ್ ಎಸ್.ಕೋಟ್ಯಾನ್, ಸತೀಶ್ ಕೊಣಾಜೆ, ಸ್ವಾತಿ ಎಸ್.ರಾವ್ ಮಯೂರ್ ನಾಯ್ಗ, ಕೀರ್ತನ್ ನಾಯ್ಗ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment