ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ವಿದ್ಯಾಲಯ: ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಅಂಬಿಕಾ ವಿದ್ಯಾಲಯ: ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಬದುಕಿಗೊಂದು ಸುಸ್ಪಷ್ಟವಾದ ಉದ್ದೇಶ ಇರಬೇಕು: ಮಧು ಎಸ್ ಮನೋಹರ್



ಪುತ್ತೂರು: ಎಸ್‍ಎಸ್‍ಎಲ್‍ಸಿ ಅಥವ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸುವುದು ಅನೇಕ ವಿದ್ಯಾರ್ಥಿಗಳ ಮತ್ತು ಹೆತ್ತವರ ಕನಸಾಗಿರುತ್ತದೆ. ಆದರೆ ಇಂತಹ ತಕ್ಷಣದ ಗುರಿಗಳೊಂದಿಗೆ ಬದುಕಿಗೊಂದು ದೀರ್ಘಕಾಲಿಕವಾದ ಉದ್ದೇಶ ಇರಬೇಕು. ಅಂತಹ ಗಹನವಾದ ಉದ್ದೇಶದೆಡೆಗೆ ವಿದ್ಯಾರ್ಥಿಗಳು ಸದಾ ಪ್ರಯತ್ನಿಸುತ್ತಿರಬೇಕು ಎಂದು ಪುತ್ತೂರಿನ ನಗರ ಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ  ವಿದ್ಯಾಲಯಗಳ ಆಶ್ರಯದಲ್ಲಿ 2020-21ನೇ ಸಾಲಿನ ಪಿಯು ಫಲಿತಾಂಶದಲ್ಲಿ ಆರುನೂರಕ್ಕೆ ಆರುನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಪ್ಪಳಿಗೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.


ಬದುಕಿನಲ್ಲಿ ಗುರಿಗಳಿಗಿಂತ ಉದ್ದೇಶ ಹಿರಿದಾಗಿರಬೇಕು. ಬದುಕಿನ ಸಾರ್ಥಕ್ಯವನ್ನು ಆ ಉದ್ದೇಶವನ್ನು ಈಡೇರಿಸಿಕೊಳ್ಳುವುದರ ಮೂಲಕ ಕಂಡುಕೊಳ್ಳಬೇಕು. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸದಾ 2020ರ ಕನಸನ್ನು ಕಾಣುತ್ತಿದ್ದುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಎಷ್ಟೋ ವರ್ಷಗಳ ಹಿಂದಿನಿಂದ ಅವರು ಅಂತಹ ದೀರ್ಘಕಾಲಿಕ ಸದುದ್ದೇಶ ಹೊಂದಿದ್ದರು. ಅಂತಹ ಉದ್ದೇಶಗಳು ವೈಯಕ್ತಿಕ ನೆಲೆಯಲ್ಲಾದರೂ ನಮ್ಮ ನಮ್ಮ ಬದುಕಿನ ಆವರಣದೊಳಗೆ ಬಂದಾಗ ಜೀವನ ಸುಂದರವಾಗುತ್ತದೆ ಎಂದು ನುಡಿದರು.


ಬದುಕಿನಲ್ಲಿ ಒಂದು ಸಕಾರಾತ್ಮಕ ಚಿಂತನೆ ಬೇಕು. ಅಂತಹ ಚಿಂತನೆಗಳು ನಮ್ಮನ್ನು ಬೆಳೆಸುತ್ತವೆ. ಬದುಕಿನ ಸಾಧನೆಗೆ ಅಂಕವೇ ಮಾನದಂಡವಲ್ಲ. ಅಂಕ ಕಡಿಮೆ ಗಳಿಸಿದರೂ ಸತತ ಪ್ರಯತ್ನದಿಂದ ಬದುಕಿನಲ್ಲಿ ಯಶಸ್ಸು ಕಾಣಬಹುದು. ಹಾಗಾಗಿ ಕಡಿಮೆ ಅಂಕ ಬಂದವರು ಧೃತಿಗೆಡದೆ ಉನ್ನತ ಸಾಧನೆಯ ಕನಸುಗಳೊಂದಿಗೆ ಮುಂದುವರಿಯಬೇಕು ಎಂದು ನುಡಿದರು.


ಪ್ರಸ್ತಾವನೆಗೈದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ,  ಪರೀಕ್ಷೆಯಿಲ್ಲದೆ ಫಲಿತಾಂಶ ದಾಖಲಾಗಿದೆ ಎಂಬುದರಿಂದ ವಿದ್ಯಾರ್ಥಿಗಳ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಈಗಿನ ಅಂಕ ಈ ಹಿಂದೆ ಪ್ರಥಮ ವರ್ಷದ ಪಿಯುಸಿಯಲ್ಲಿ ಪಡೆದ ಅಂಕ ಹಾಗೂ ಹತ್ತನೆಯ ತರಗತಿಯಲ್ಲಿ ದೊರೆತ ಅಂಕದ ಆಧಾರದ ಮೇಲೆಯೇ ಅಗಿದೆ. ಈ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿ ಓದುತ್ತಿರುವಾಗ ಇಂತಹದ್ದೊಂದು ಮೌಲ್ಯಮಾಪನ ಆಗುವ ಆಲೋಚನೆಯೇ ಇರಲಿಲ್ಲ. ಹೀಗಿರುವಾಗ ಖಂಡಿತವಾಗಿಯೂ ಯಾರಿಗೂ ಅರ್ಹತೆಗಿಂತ ಅಧಿಕ ಅಂಕ ದೊರಕಿಲ್ಲ. ಅಲ್ಲಿ ಅತ್ಯುತ್ತಮವಾಗಿ ಓದಿ ಅಂಕ ಗಳಿಸಿದ್ದರಿಂದಲೇ ಇಂದು ಈ ಅಂಕ ದೊರೆತಿದೆ. ಹಾಗಾಗಿ ಈ ಅಂಕಕ್ಕೆ ಖಂಡಿತವಾಗಿಯೂ ಗೌರವವಿದೆ ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಅಂಬಿಕಾ ವಿದ್ಯಾಸಂಸ್ಥೆಗಳು ಪ್ರಯತ್ನಿಸುತ್ತಿವೆ. ಸಂಸ್ಕಾರ ಕಳೆದುಕೊಂಡರೆ ಬದುಕು ಛಿದ್ರವಾಗುತ್ತದೆ. ಹಾಗಾಗಿ ಅಂಕದೊಂದಿಗೆ ಸಂಸ್ಕಾರಯುತ ಬದುಕು ನಮ್ಮದಾಗಬೇಕು. ದೇಶಪ್ರೇಮ ಹಾಗೂ ಹೆತ್ತವರೆಡೆಗಿನ ಗೌರವ ಇದ್ದಾಗ ಮಾತ್ರ ಪಡೆದುಕೊಂಡ ಶಿಕ್ಷಣ ಸಾರ್ಥಕವೆನಿಸುತ್ತದೆ. ಭವಿಷ್ಯದಲ್ಲಿ ವಯಸ್ಕರಾಗುವ ಅಪ್ಪ ಅಮ್ಮನನ್ನು ದಾರಿಗೆ ಹಾಕದೆ ಬದುಕುವುದೇ ನಿಜವಾದ ಬದುಕು ಎಂದರಲ್ಲದೆ ಇಂದು ಅನೇಕ ವಿದ್ಯಾಸಂಸ್ಥೆಗಳು ವಿವಿಧ ಮಾನದಂಡಗಳ ಆಧಾರದ ಮೇಲೆ ಉಚಿತ ಶಿಕ್ಷಣವನ್ನು ಒದಗಿಸಿಕೊಡುತ್ತಿವೆ. ಹಾಗೆ ಉಚಿತವಾಗಿ ಶಿಕ್ಷಣ ಪಡೆದವರು ತಾವು ಸಂಸ್ಥೆಗೇನು ಮಾಡಬೇಕು ಎಂದು ಯೋಚಿಸಬೇಕದ ಅಗತ್ಯವಿದೆ ಎಂದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕೃತಿ ಎಚ್.ಎಸ್, ರಕ್ಷಿತಾ, ಚೈತನ್ಯ ಸಿ ಹಾಗೂ ಹೆತ್ತವರಾದ ವಿಜಯಲಕ್ಷ್ಮಿ ಅನಿಸಿಕೆ ವ್ಯಕ್ತಪಡಿಸಿದರು. ಅಂಬಿಕಾ ಸಮೂಹ ಸಂಸ್ಥೆಗಳ ನಿರ್ದೆಶಕ ಸುರೇಶ್ ಶೆಟ್ಟಿ, ಆಡಳಿತಾಧಿಕಾರಿ ಗಣೆಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಹೆತ್ತವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶಂಕರನಾರಾಯಣ ಭಟ್ ಸ್ವಾಗತಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ವಂದಿಸಿದರು. ಉಪನ್ಯಾಸಕ ಆದಿತ್ಯ ಹೆಬ್ಬಾರ್ ಎ ಕಾರ್ಯಕ್ರಮ ನಿರ್ವಹಿಸಿದರು.


ಕಾಕದೃಷ್ಟಿ, ಬಕಧ್ಯಾನ, ಶ್ವಾನನಿದ್ರಾ ತಥೈವ ಚ

ಅಲ್ಪಾಹಾರಂ ಜೀರ್ಣ ವಸ್ತ್ರಂ

ಏತದ್ ವಿದ್ಯಾರ್ಥಿ ಲಕ್ಷಣಂ

(ವಿದ್ಯಾರ್ಥಿಯಾದವನು ಕಾಗೆಯಂತೆ ಸೂಕ್ಷ್ಮದೃಷ್ಟಿಯನ್ನು, ಬಕಪಕ್ಷಿಯಂತೆ ಏಕಾಗ್ರತೆಯನ್ನು, ಶ್ವಾನದಂತೆ ಅರೆಬಿರಿದ ಕಣ್ಣಿನ ನಿದ್ರೆಯನ್ನು, ಅತಿಯಲ್ಲದ ಆಹಾರವನ್ನು ಹಾಗೂ ಸಾಮಾನ್ಯ ಬಟ್ಟೆಯನ್ನು ತನ್ನ ಲಕ್ಷಣವಾಗಿ ರೂಪಿಸಿಕೊಳ್ಳಬೇಕು)

-ಕಮಿಷನರ್ ಮಧು ಎಸ್ ಮನೋಹರ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 

0 تعليقات

إرسال تعليق

Post a Comment (0)

أحدث أقدم