ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುತಾತ್ಮ ಯೋಧ ಮಕ್ಕಳಿಗೆ ಪುತ್ತೂರಿನ ಅಂಬಿಕಾ ಸಮೂಹದಿಂದ ಉಚಿತ ಶಿಕ್ಷಣ

ಹುತಾತ್ಮ ಯೋಧ ಮಕ್ಕಳಿಗೆ ಪುತ್ತೂರಿನ ಅಂಬಿಕಾ ಸಮೂಹದಿಂದ ಉಚಿತ ಶಿಕ್ಷಣ

 



ಪುಲ್ವಾಮಾದಲ್ಲಿ ಉಗ್ರರ ಕೊಂದು ಹುತಾತ್ಮನಾಗಿದ್ದ ವಿಜಯಪುರದ ಬಸವನ ಬಾಗೇವಾಡಿಯ ವೀರ ಯೋಧ ಕಾಶೀರಾಯ ಬೊಮ್ಮನಹಳ್ಳಿ


ಪುತ್ತೂರು: ಇತ್ತೀಚೆಗೆ ಪುಲ್ವಾಮಾದಲ್ಲಿ ಮೂವರು ಉಗ್ರರನ್ನು ಕೊಂದು, ಪ್ರಾಣಾರ್ಪಣೆಗೈದ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅವರ ಮಕ್ಕಳಿಗೆ ಪದವಿ ಹಂತದವರೆಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡುವ ಬಗೆಗೆ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ನಿರ್ಣಯ ಕೈಗೊಂಡಿದೆ.


ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಜಯಪುರದ ಕಾಶಿರಾಯ ಬೊಮ್ಮನಹಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮಾತೃಸಂಸ್ಥೆಯಾದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮೃತ ಯೋಧನ ಪತ್ನಿ ಸಂಗೀತಾ ಕಾಶೀರಾಯ ಬೊಮ್ಮನಹಳ್ಳಿ ಅವರೊಂದಿಗೆ ಮಾತುಕತೆ ನಡೆಸಿ ಉಚಿತ ಶಿಕ್ಷಣದ ಕೊಡುಗೆಯ ಬಗೆಗಿನ ಅಧಿಕೃತ ಪತ್ರವನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸ್ಥಳಿಯರಾದ ಹಾಗೂ ಈ ಹಿಂದೆ ಪುತ್ತೂರಿನಲ್ಲಿ ದೈಹಿಕ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗುರುನಾಥ ಬಾಗೇವಾಡಿ ಮಾತನಾಡಿ, ಅಂಬಿಕಾ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಿಕೊಡುತ್ತಿವೆ. ಮಕ್ಕಳಲ್ಲಿ ದೇಶಪ್ರೇಮ ತುಂಬುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ತಾನು ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಂಬಿಕಾ ಸಂಸ್ಥೆಯ ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ ಎಂದು ನುಡಿದರು.  


ನಟ್ಟೋಜ ಫೌಂಡೇಶನ್ ಟ್ರಸ್ಟ್ ಬಾಲವಿದ್ಯಾಲಯದಿಂದ ಪದವಿ ಶಿಕ್ಷಣದ ವರೆಗೆ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧನ ಗೌರವಾರ್ಥ ಈ ಕೊಡುಗೆಯನ್ನು ಸಂಸ್ಥೆ ಘೋಷಿಸಿದೆ. ಕಾಶಿರಾಯ ಅವರ ಪುತ್ರಿ ಪೃಥ್ವಿ ಪ್ರಸ್ತುತ ಎರಡನೆಯ ತರಗತಿ ಓದುತ್ತಿದ್ದು, ಕಿರಿಯವನಾದ ಸಹೋದರ ಭಗತ್ ಸಿಂಗ್ ಅನ್ನು ಹೊಂದಿರುತ್ತಾಳೆ.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಭಾರತೀಯತೆ, ಸಂಸ್ಕೃತಿ, ಸಂಸ್ಕಾರಗಳ ಬಗೆಗೆ ವಿಶೇಷ ಆದ್ಯತೆ ನೀಡಿ ಆ ಕುರಿತಾದ ವಿಚಾರಗಳನ್ನು ಶಿಕ್ಷಣದ ಮೂಲಕ ಪಸರಿಸುವ ಕಾರ್ಯವನ್ನು ಮಾಡುತ್ತಿವೆ. ಅದರಲ್ಲೂ ಯೋಧರ ಬಗೆಗೆ ಅಪಾದ ಗೌರವವನ್ನು ಹೊಂದಿದ್ದು, ಪುತ್ತೂರಿನಲ್ಲಿ ದೇಶದ ಮೊದಲ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಮಾರಕವನ್ನು ಅಂಬಿಕಾ ಸಂಸ್ಥೆ ಸ್ಥಾಪಿಸಿದೆ. ಹಾಗೆಯೇ ಅದಾಗಲೇ ಯೊಧರ ಮಕ್ಕಳಿಗೆ ವಿಶೇಷ ಶುಲ್ಕ ರಿಯಾಯಿತಿಯನ್ನೂ ಘೋಷಿಸಿದ ಮೊದಲ ಸಂಸ್ಥೆ ಅಂಬಿಕಾ ಎಂಬುದು ಗಮನಾರ್ಹ ವಿಚಾರ.


“ಯೋಧರು ದೇಶದ ಆಸ್ತಿ. ಅವರಿಂದಾಗಿ ನಾವು ನೆಮ್ಮದಿ ಹಾಗೂ ಸುಖದ ಜೀವನ ನಡೆಸುವುದಕ್ಕೆ ಸಾಧ್ಯವಾಗಿದೆ. ನಮ್ಮ ಕುಟುಂಬಗಳ ರಕ್ಷಣೆಗಾಗಿ ತಮ್ಮ ಕುಟುಂಬವನ್ನು ತೊರೆದು, ಅಗತ್ಯವಾದಾಗ ಪ್ರಾಣಾರ್ಪಣೆಯನ್ನೂ ಮಾಡಿ ನಮ್ಮನ್ನು ಕಾಯುವ ಮಂದಿ ಅವರು. ಹಾಗಾಗಿ ಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡುವುದು ಸಮಾಜದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಅಂಬಿಕಾ ಸಂಸ್ಥೆ ಉಚಿತ ಶಿಕ್ಷಣವನ್ನು ನೀಡುವುದಕ್ಕೆ ಮುಂದಾಗಿದೆ.”

-ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು, ನಟ್ಟೋಜ ಫೌಂಡೇಶನ್ ಟ್ರಸ್ಟ್


 (ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم