ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪುತ್ತೂರಿನ ಮಿನಿ ವಿಧಾನಸೌಧದ ಎದುರು ಭಾಗದಲ್ಲಿ ನಿರ್ಮಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಮಹಾನ್ ವೀರರ ಸಾಧನೆಯನ್ನು ಜನಸಮುದಾಯಕ್ಕೆ ನೆನಪು ಮಾಡಿಕೊಡುವುದು ಮತ್ತು ಪ್ರತಿದಿನ ವೀರರನ್ನು ಸ್ಮರಿಸಿಕೊಳ್ಳುವುದು ಕರ್ತವ್ಯವೆಂದು ಭಾವಿಸಿ, ಯಾವುದೇ ಅನ್ಯ ಉದ್ದೇಶವಿಲ್ಲದೆ, ಕೇವಲ ಯೋಧರ ಕುರಿತಾದ ಗೌರವದ ಹಿನ್ನೆಲೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆ ಈ ಸ್ಮಾರಕವನ್ನು 2017ರಲ್ಲಿ ರೂಪಿಸಿದೆ. ಈ ಸ್ಮಾರಕದಲ್ಲಿ ದಿನದ 24 ಗಂಟೆಯೂ ದೀಪ ಉರಿಯುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ಆ ದೀಪ ಆರದಂತೆ ಗ್ಲಾಸ್‍ನ ರಕ್ಷಾ ಕವಚವನ್ನು ಇಡಲಾಗಿದೆ. ಈ ಗ್ಲಾಸ್‍ನ ರಕ್ಷಾ ಕವಚವನ್ನು ತೆಂಗಿನಕಾಯಿ ಎಸೆಯುವುದರ ಮೂಲಕ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಇಡಿಯ ದೇಶದಲ್ಲಿ ಖಾಸಗಿ ಸಂಸ್ಥೆಯೊಂದು ರೂಪಿಸಿರುವ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ಇದಾಗಿದ್ದು, ಪುತ್ತೂರಿನ ಮಾತ್ರವಲ್ಲದೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಹೆಮ್ಮೆಯೆನಿಸಿದೆ. ಇಂತಹ ಸ್ಮಾರಕಕ್ಕೆ ಹಾನಿಮಾಡಿರುವುದು ಯೋಧರ ತ್ಯಾಗಕ್ಕೆ ಮಾಡಿದ ಅವಮಾನವೆನಿಸಿದೆ.
“ಈ ದೇಶದ ಅನ್ನವನ್ನು ತಿಂದು, ಯೋಧರ ರಕ್ಷಣೆಯಲ್ಲಿರುವ ಮಂದಿ ಇಂತಹ ನೀಚ ಕೃತ್ಯಗೈದಿರುವುದು ಅಕ್ಷಮ್ಯ. ದೇಶದ ಗಡಿಯಲ್ಲಿ ನಮಗೋಸ್ಕರ ಪ್ರಾಣಾರ್ಪಣೆಗೂ ಸಿದ್ಧರಾಗಿರುವ ಯೋಧರ ಗೌರವಾರ್ಥ ರೂಪಿಸಿರುವ ಈ ಸ್ಮಾರಕಕ್ಕೆ ಅಪಚಾರ ಎಸಗುವುದು ದೇಶದ್ರೋಹದ ಕೆಲಸ”
-ಸುಬ್ರಹ್ಮಣ್ಯ ನಟ್ಟೋಜ
ಕಾರ್ಯದರ್ಶಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು
Post a Comment