ಈ ಬಾರಿ ನೈಜ ಆರೋಪಿಗಳು ಬಲೆಗೆ ಬೀಳುವರೇ ?:
ಮಂಗಳೂರು: ಹಣ ವಂಚನೆ ಪ್ರಕರಣದ ಆರೋಪಿಗಳ ಕಾರನ್ನು ಪೊಲೀಸರೇ ಮಾರಾಟ ಮಾಡಿದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮಂಗಳೂರಿಗೆ ಆಗಮಿಸಿ ಅಂತಿಮ ಸುತ್ತಿನ ತನಿಖೆ ನಡೆಸಿದ್ದಾರೆ.
ಕಾರು ಮಾರಾಟ ಪ್ರಕರಣದ ಸೂತ್ರಧಾರಿ ಎನ್ನಲಾದ ಅಧಿಕಾರಿಯನ್ನು ಕೈ ಬಿಟ್ಟು, ಕೇವಲ ಕೆಳಹಂತದ ಪೊಲೀಸರ ಮೇಲಿನ ವೈಯಕ್ತಿಕ ದ್ವೇಷದಿಂದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಲಿ ಪಶು ಮಾಡುವ ಹುನ್ನಾರ ನಡೆಯುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಆಂತರಿಕ ತನಿಖೆಯಲ್ಲಿ ಲೋಪವಾಗಿರುವ ಸಾಧ್ಯತೆ ಕುರಿತು ಮಾಧ್ಯಮಕ್ಕೆ ಲಭ್ಯವಾಗಿರುವ ದಾಖಲೆಗಳೇ ಸಾಕ್ಷಿ ಹೇಳುತ್ತಿವೆ.
ಆಸ್ಪತ್ರೆಯಲ್ಲಿದ್ದ ಪೊಲೀಸ್ ಫಿಕ್ಸ್!!
ಕಾರು ಮಾರಾಟ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಆಂತರಿಕ ತನಿಖೆ ಸಂದರ್ಭ ಪ್ರಕರಣಕ್ಕೆ ಸಂಬಂಧ ಪಡದ ಸಿಸಿಬಿಯ ಪೊಲೀಸ್ ಆಶಿತ್ ಎಂಬವರನ್ನು ಫಿಕ್ಸ್ ಮಾಡಲಾಗಿದೆ ಎಂದು ಮೊದಲಿಗೆ ಆರೋಪ ಕೇಳಿ ಬಂದಿತ್ತು. ಕಾರು ಮಾರಾಟ ನಡೆಯುವ ವೇಳೆ ಕರೋನಾ ಪೀಡಿತರಾಗಿ ಎ,.ಜೆ. ಆಸ್ಪತ್ರೆಯಲ್ಲಿದ್ದರು. ಅ.6ರಿಂದ 20 ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿದ್ದರು. ವ್ಹೀಲ್‌ಚೇರ್‌ನಲ್ಲಿ ಅವರು ಮನೆಗೆ ಬಂದಿದ್ದರು. ಬಳಿಕ ಸುಧಾರಿಸಿಕೊಂಡ ನ.8ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.
ಆದರೆ ಇಲಾಖಾ ಆಂತರಿಕ ತನಿಖೆಯಲ್ಲಿ ಅ.22ರಿಂದ 25ರವರೆಗೆ ಅಶಿತ್ ಸಹಿತ 7 ಮಂದಿ ಬೆಂಗಳೂರಿಗೆ ತೆರಳಿ ತನಿಖೆನಡೆಸಿದ ತಂಡದಲ್ಲಿದ್ದರು ಎಂದು ಉಲ್ಲೇಖಿಸಲಾಗಿದೆ. ಇದೇ ವರದಿಯ ಆಧಾರದಲ್ಲಿ ಅಮಾನತು ಕೂಡಾ ಮಾಡಲಾಗಿತ್ತು. ಅಮಾನತಾದ ಬಳಿಕ ಅಶಿತ್ ವೈದ್ಯಕೀಯ ಸರ್ಟಿಪೀಕೆಟ್‌ಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಿದಾಗಲೇ ಸತ್ಯ ಅವರ ಅರಿವಿಗೆ ಬಂದಿತ್ತು.
ಸತ್ಯ ಗೊತ್ತಾಗುವ ಮುನ್ನ ಡಿಸಿಪಿ ನೀಡಿದ ವರದಿಯ ಅಧಾರದಲ್ಲಿ ಅಮಾನತುಗೊಳಿಸಲಾಗಿತ್ತು. ತನಗಾದ ಅನ್ಯಾಯವನ್ನು ಪ್ರಶ್ನಿಸಿ ಅಶಿತ್ ಈಗಾಗಲೇ ಕೆಎಟಿ ಮೊರೆ ಹೋಗಿದ್ದಾರೆ.
ತೇಜ್ ಸಿಂಗ್ ಗೆಳೆಯ ಯಾರು?
ಕಾರು ಖರೀದಿಸಿದ ತೇಜ್ ಸಿಂಗ್ ಮತ್ತು ಅವರ ಜತೆ ಹಲವು ವರ್ಷಗಳಿಂದ ಗೆಳೆಯರಾಗಿರುವ ಒಬ್ಬ ಅಧಿಕಾರಿ ಈ ಕಾರನ್ನು ಮಾರಾಟ ಮಾಡಿರುವ ಕುರಿತು ರಾಜ್ಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇದೆ. ಸದ್ಯಕ್ಕೆ ಪ್ರಕರಣವನ್ನು ಆದಷ್ಟು ಬೇಗನೆ ಇತ್ಯರ್ಥಗೊಳಿಸವ ಮೂಲಕ ರಾಜಕೀಯ ಒತ್ತಡ ಕಡಿಮೆ ಮಾಡಿಕೊಳ್ಳಲು ಮುಂದಾಗಿರುವ ಕುರಿತು ಸಂಶಯ ವ್ಯಕ್ತವಾಗಿದೆ.
ತನಿಖೆ ವಂಚನೆ !: ವಂಚನೆ ಪ್ರಕರಣ ಒಂದರ ತನಿಖೆ ನಡೆಸುವಾಗ ಆರೋಪಿಗಳ ಮೂರು ಕಾರುಗಳನ್ನು ಅಂದಿನ ಕಮಿಷನರ್ ಮಾರ್ಗದರ್ಶನದಂತೆ ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಅದರಲ್ಲಿ ಜಾಗ್ವಾರ್ ಕಾರು ವಂಚನೆ ಆರೋಪಿಯ ಬಳಿ ಇದ್ದರೂ ಅದು ಅವರ ಹೆಸರಿಗೆ ನೋಂದಣಿ ಆಗಿರಲಿಲ್ಲ. ಈ ಸಂದರ್ಭ ಆ ಕಾರನ್ನು ತೇಜ್ ಸಿಂಗ್ ಅವರಿಗೆ 14 ಲಕ್ಷ ರು.ಗೆ ಮಾರಾಟ ಮಾಡಲಾಗಿತ್ತು. ಕಾರನ್ನು ಮೂಲ ಮಾಲೀಕನ ಹೆಸರಲ್ಲಿಯೇ ತೇಜ್ ಸಿಂಗ್‌ಗೆ ಮಾರಾಟ ಮಾಡಲಾಗಿತ್ತು. ಮೇಲುನೋಟಕ್ಕೆ ತಾಂತ್ರಿಕವಾಗಿ ಎಲ್ಲವೂ ಸರಿ ಇತ್ತು. ಆದರೆ ಇದರಲ್ಲಿ ಪೊಲೀಸರ ಪ್ರಭಾವ ಕೆಲಸ ಮಾಡಿತ್ತು. ಈ ಪ್ರಭಾವ ಬೀರಿದವರು ಯಾರು ಎನ್ನುವುದನ್ನು ತನಿಖೆ ಮಾಡಬೇಕಾಗಿತ್ತು. ವಿಪರ್ಯಾಸ ಎಂದರೆ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದವರು, ಅದರ ತನಿಖೆ ನಡೆಸಿದವರು ಮತ್ತು ಇದಕ್ಕೆ ಸಂಬಂಧ ಪಡದವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು.
ಅಮಾನತು: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಎಸ್‌ಐ ಕಬ್ಬಾಳ್‌ರಾಜ್, ಪೊಲೀಸ್ ರಾಜ ಅವರನ್ನು ತಾಂತ್ರಿಕ ಕಾರಣ ಮುಂದಿಟ್ಟು ಆರೋಪಿ ಸ್ಥಾನದಲ್ಲಿ ಕೂರಿಸಿ, ಅಮಾನತು ಗೊಳಿಸಲಾಗಿತ್ತು. ಜತೆಗೆ ನಾರ್ಕೊಟಿಕ್ ವಿಭಾಗದ ಇನ್‌ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಕೂಡಾ ಅಮಾನತು ಮಾಡಲಾಗಿತ್ತು.
ತನಿಖೆ: ಸಿಐಡಿ ಕೇಂದ್ರ ಅಧೀಕ್ಷಕ ಭೀಮಾ ಶಂಕರ್ ಮತ್ತು ಇನ್ ಸ್ಪೆಕ್ಟರ್ ಚಂದ್ರಪ್ಪ ಅವರು ಶನಿವಾರ ತನಿಖೆಗೆಂದು ಮಂಗಳೂರಿಗೆ ಆಗಮಿಸಿ, ನಿವೃತ್ತ ಡಿಸಿಪಿ ವಿನಯ ಗಾಂವ್ಕರ್, ಇನ್ಸ್ಪೆಕ್ಟರ್‌ಗಳಾದ ರಾಮಕೃಷ್ಣ, ಶಿವಪ್ರಕಾಶ್, ಎಸ್‌ಐ ಕಬ್ಬಾಳ್‌ರಾಜ್ ಅವರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಸಿಐಡಿ ಪೊಲೀಸರು ತೇಜ್ ಸಿಂಗ್ ಅವರನ್ನು ವಿಚಾರಣೆ ನಡೆಸಿದ್ದು, ಜಾಗ್ವಾರ್ ಕಾರನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.
"ಸಿಐಡಿ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದು, ಕಾರು ಮಾರಾಟ ಪ್ರಕರಣದ ಕುರಿತು ತನಿಖೆ ಸಂದರ್ಭ ವಾಸ್ತವ ವಿಚಾರನ್ನು ಅವರಿಗೆ ತಿಳಿಸಲಾಗಿದೆ" ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment